ರಾಜ್ಯದ 5 ಜಿಲ್ಲೆಗಳಲ್ಲಿ ಶಾಲಾ, ಕಾಲೇಜು ಆರಂಭ ಇಲ್ಲ, 1 -8 ನೇ ತರಗತಿ ಪ್ರಾರಂಭದ ಬಗ್ಗೆ ಮಾಹಿತಿ
* ಆ.23ರಿಂದ ರಾಜ್ಯದಲ್ಲಿ 9, 10 ನೇ ತರಗತಿ ಮತ್ತು ಪಿಯುಸಿ ತರಗತಿ ಆರಂಭ
* ಸಿದ್ಧತೆ ಪರಿಶೀಲಿಸಿದದ ಶಿಕ್ಷಣ ಸಚಿವ ಬಿಸಿ ನಾಗೇಶ್
* ರಾಜ್ಯದ 5 ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳನ್ನು ಆರಂಭಿಸುವುದಿಲ್ಲ ಎಂದು ಸ್ಪಷ್ಟನೆ
ತುಮಕೂರು, (ಆ.22): ನಾಳೆಯಿಂದ (ಆ.23) ರಾಜ್ಯದಲ್ಲಿ 9, 10 ನೇ ತರಗತಿ ಮತ್ತು ಪಿಯುಸಿ ತರಗತಿ ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತುಮಕೂರು ತಾಲೂಕಿನ ಹೆಗ್ಗೆರೆ ಗ್ರಾಮದ ಪ್ರೌಢಶಾಲೆಯಲ್ಲಿ ಸಿದ್ಧತೆ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಮೊದಲಿಗೆ ಹೇಳಲಾಗಿತ್ತು. ಆದರೆ, ತಜ್ಞರು ಮಕ್ಕಳ ಮೇಲೆ ಮೂರನೇ ಅಲೆ ಪರಿಣಾಮ ಕಡಿಮೆ ಎಂದು ತಿಳಿಸಿದ್ದಾರೆ. ಸೋಂಕು ಹರಡುವ ಸಾಧ್ಯತೆ ಕಡಿಮೆ. ಸೋಂಕು ತಗುಲಿದರೂ ಗಂಭೀರ ಪರಿಣಾಮವಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ 1ರಿಂದ 8ನೇತರಗತಿ ಆರಂಭಿಸಲು ಚಿಂತನೆ ನಡೆದಿದೆ ಎಂದರು.
ಶಾಲೆ ಪ್ರಾರಂಭದ ಬೆನ್ನಲ್ಲೇ ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ
ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಶಾಲೆ-ಕಾಲೇಜು ಬಾಗಿಲು ತೆಗೆಯುವುದಿಲ್ಲ. ರಾಜ್ಯದ 5 ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳನ್ನು ಆರಂಭಿಸುವುದಿಲ್ಲ ಎಂದು ಮಾಹಿತಿ ನೀಡಿದರು.
ಕಳೆದ ಒಂದು ವರ್ಷದಿಂದ ಎಷ್ಟೇ ಪ್ರಯತ್ನ ಮಾಡಿದ್ರು ಆನ್ ಲೈನ್ ನಲ್ಲಿ ಒಳ್ಳೆ ಶಿಕ್ಷಣ ಕೊಡಲು ಸಾಧ್ಯವಾಗಲಿಲ್ಲ. ಬೇರೆ ಬೇರೆ ಕಾರಣಗಳಿಂದ ಉತ್ತಮ ಶಿಕ್ಷಣ ಕೊಡಲಾಗಿಲ್ಲ. ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಿರುವುದರಿಂದ ತರಗತಿ ಆರಂಭ ಮಾಡುವಂತೆ ಸಿಎಂ ಘೋಷಣೆ ಮಾಡಿದರು ಎಂದು ತಿಳಿಸಿದರು.
ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದ್ದು, ಒತ್ತಾಯಪೂರ್ವಕವಾಗಿ ವಿದ್ಯಾರ್ಥಿಗಳು ಶಾಲೆಗೆ ಬರುವಂತಿಲ್ಲ. ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ತರಗತಿ ನಡೆಯಲಿವೆ ಎಂದು ಹೇಳಿದರು.