ಬೆಂಗಳೂರು(ಫೆ.12): ಯುಜಿಸಿ ವೇತನ ಹಿಂಬಾಕಿ ಪಾವತಿ, ವರ್ಗಾವಣೆ, ಪ್ರಾಂಶುಪಾಲರ ನೇಮಕ ಸೇರಿದಂತೆ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಕರ್ನಾಟಕ ಸರ್ಕಾರಿ ಕಾಲೇಜುಗಳ ಬೋಧಕರ ಸಂಘದ ಪದಾಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, 2006ರ ಯುಜಿಸಿ ವೇತನ ಹಿಂಬಾಕಿ ಮತ್ತು 2019ರ ಏಪ್ರಿಲ್‌ ತಿಂಗಳಿನಿಂದ ಪಾವತಿಯಾಗಬೇಕಿರುವ ವೇತನ ಕುರಿತು ಸದ್ಯದಲ್ಲಿಯೇ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಪ್ರಾಧ್ಯಾಪಕರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರದ ಪಾಲನ್ನು ಕೂಡಲೇ ತುಂಬಲಾಗುವುದು ಎಂದು ತಿಳಿಸಿದರು.

ವರ್ಗಾವಣೆ ಪ್ರಕ್ರಿಯೆ ಶೀಘ್ರ:

ಈ ವರ್ಷದ ವರ್ಗಾವಣೆ ಪ್ರಕ್ರಿಯೆ ಹಾಗೂ 310 ಪ್ರಾಂಶುಪಾಲರ ಹುದ್ದೆ ಭರ್ತಿಗೆ ಶೀಘ್ರವೇ ಚಾಲನೆ ನೀಡಲಾಗುವುದು. ಗರಿಷ್ಠ ವಯೋಮಿತಿಗೆ ವಿನಾಯಿತಿ ನೀಡಿ ಯುಜಿಸಿ ವೇತನ ಶ್ರೇಣಿಯಲ್ಲಿ ಸಹ ಪ್ರಾಧ್ಯಾಪಕರ ನೇಮಕ ಮಾಡಿಕೊಳ್ಳುವುದು ಎಂದರು.

ಸರ್ಕಾರಿ ಡಿಗ್ರಿ, ಬಿಇ ಕಾಲೇಜಲ್ಲಿ ಡಿಜಿಟಲ್‌ ಕಲಿಕೆ: ಸಿಎಂ ಯಡಿಯೂರಪ್ಪ

ಪಿಎಚ್‌ಡಿ ವೇತನ ಬಡ್ತಿ ತಾರತಮ್ಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪಿಎಚ್‌ಡಿ ಮಾಡಲು ಪ್ರಾಧ್ಯಾಪಕರು ಅರ್ಜಿ ಸಲ್ಲಿಸುವ ವೇಳೆ ನಿರಾಕ್ಷೇಪಣಾ ಪತ್ರ ಕೇಳಬಾರದು. ಬದಲಿಗೆ ಪ್ರವೇಶ ಪಡೆದ ನಂತರ ಈ ಪತ್ರವನ್ನು ಸಲ್ಲಿಸಿದರೆ ಸಾಕು. ಈ ಬಗ್ಗೆ ಎಲ್ಲ ವಿವಿಗಳಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೋಧಕ ಸಿಬ್ಬಂದಿ ಪದನಾಮ:

ಕಾಲೇಜುಗಳಲ್ಲಿ ಬೋಧಕೇತರ ಸಿಬ್ಬಂದಿಯಾಗಿರುವ ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಸಿಬ್ಬಂದಿಗೆ ಪ್ರಾಧ್ಯಾಪಕರ ಸ್ಥಾನಮಾನ ನೀಡುವುದು, ಅರ್ಹ ಪ್ರಾಧ್ಯಾಪಕರಿಗೆ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅವಕಾಶ ಕೊಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಮುಖ್ಯ ಆಡಳಿತಾಧಿಕಾರಿ ಬಾಲಚಂದ್ರ ಹಾಗೂ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ. ಡಿ.ಎಂ. ಮಂಜುನಾಥ್‌ ಪಾಲ್ಗೊಂಡಿದ್ದರು.