Asianet Suvarna News Asianet Suvarna News

ದಸರಾ ರಜೆ ಅಂತ್ಯ: ಇಂದಿನಿಂದ ಶಾಲೆ, ಬಿಸಿಯೂಟ ಪುನಾರಂಭ!

* ರಾಜ್ಯದಲ್ಲಿ 1.5 ವರ್ಷದ ಬಳಿಕ ಬಿಸಿಯೂಟ ಮರುಜಾರಿ

* ದಸರಾ ರಜೆ ಅಂತ್ಯ: ಇಂದಿನಿಂದ ಶಾಲೆ, ಬಿಸಿಯೂಟ ಪುನಾರಂಭ

Mid day Meal and Karnataka schools for classes 6 to 10 to reopen from October 25 pod
Author
Bangalore, First Published Oct 21, 2021, 7:29 AM IST

ಬೆಂಗಳೂರು(ಅ.21): ದಸರಾ(Dasara) ರಜೆ ಮುಕ್ತಾಯಗೊಂಡಿದ್ದು, ಗುರುವಾರದಿಂದ (ಅ.21) ರಾಜ್ಯಾದ್ಯಂತ 6ರಿಂದ 10ನೇ ತರಗತಿ ಮಕ್ಕಳಿಗೆ ಶಾಲೆಗಳು(Schools) ಪುನಾರಂಭಗೊಳ್ಳಲಿವೆ. ಜತೆಗೆ ಸುಮಾರು ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆ(Mid Day Meal) ಮತ್ತೆ ಆರಂಭವಾಗಲಿದೆ.

ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ಅ.10ರಿಂದ 20ರವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆ (ಮಧ್ಯಂತರ ರಜೆ) ನೀಡಿತ್ತು. ಅದರಂತೆ ಎರಡು ತಿಂಗಳಿಂದ ಭೌತಿಕ ತರಗತಿಗಳನ್ನು ಆರಂಭಿಸಿದ್ದ 6ರಿಂದ 10ನೇ ತರಗತಿ ಮಕ್ಕಳು ಹಾಗೂ ಶಿಕ್ಷಕರಿಗೆ ಈ 11 ದಿನಗಳ ಕಾಲ ರಜೆ ನೀಡಲಾಗಿತ್ತು. ಇದೀಗ ರಜೆ ಪೂರ್ಣಗೊಂಡಿದ್ದು, ಗುರುವಾರದಿಂದ ಮಕ್ಕಳು ಹಾಗೂ ಶಿಕ್ಷಕರು ಶಾಲೆಗೆ ಹಿಂತಿರುಗಲಿದ್ದಾರೆ.

ಇದರೊಂದಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಕೂಡ ಪುನಾರಂಭಗೊಳ್ಳುತ್ತಿದೆ. ಪ್ರತಿ ದಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಲಕ್ಷಾಂತರ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ. 2020ರ ಮಾಚ್‌ರ್‍ನಲ್ಲಿ ಕೋವಿಡ್‌ ರಾಜ್ಯಕ್ಕೆ ಪ್ರವೇಶಿಸಿದ ಬಳಿಕ ಸರ್ಕಾರ ಶಾಲೆಗಳನ್ನು ಬಂದ್‌ ಮಾಡಿತ್ತು. ಅಂದಿನಿಂದಲೇ ಬಿಸಿಯೂಟ ಯೋಜನೆಯನ್ನೂ ಸ್ಥಗಿತಗೊಳಿಸಿತ್ತು. ಬಿಸಿಯೂಟ ಸ್ಥಗಿತಗೊಂಡರೂ ಯೋಜನೆಯ ಮೂಲ ಉದ್ದೇಶದಂತೆ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆ ಉಂಟಾಗಬಾರದೆಂದು ಆಯಾ ತಿಂಗಳು ನಿಗದಿತ ಪ್ರಮಾಣದ ಅಕ್ಕಿ, ಗೋಧಿ, ಸಕ್ಕರೆ ಮತ್ತಿತರ ಆಹಾರ ಧಾನ್ಯಗಳನ್ನು ಮಕ್ಕಳ ಮನೆಗಳಿಗೇ ತಲುಪಿಸುವ ಕೆಲಸ ಮಾಡುತ್ತಾ ಬಂದಿತ್ತು. ಈಗ ಅ.21ರಿಂದ ಬಿಸಿಯೂಟ ಪುನಾರಂಭಗೊಳ್ಳುವುದರಿಂದ ಮಕ್ಕಳ ಮನೆಗೆ ಆಹಾರ ಧಾನ್ಯ ನೀಡುವುದನ್ನು ನಿಲ್ಲಿಸಲಾಗುತ್ತದೆ. ಆದರೆ, ಶಾಲಾ ಹಾಜರಾತಿ ಕಡ್ಡಾಯಗೊಳಿಸಿಲ್ಲವಾದ್ದರಿಂದ ಶಾಲೆಗೆ ಬಂದು ಬಿಸಿಯೂಟ ಸೇವಿಸದ ಮಕ್ಕಳಿಗೆ ಮಾತ್ರ ಆಹಾರ ಧಾನ್ಯ ನೀಡುವ ಕಾರ್ಯ ಮುಂದುವರೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ಇನ್ನು 1ರಿಂದ 5ನೇ ತರಗತಿ ಮಕ್ಕಳಿಗೆ ಅ.25ರಿಂದ ಶಾಲೆಗಳನ್ನು ಆರಂಭಿಸಲು ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಅಂದಿನಿಂದಲೇ ಆ ಮಕ್ಕಳಿಗೂ ಭೌತಿಕ ತರಗತಿಗಳನ್ನು ಆರಂಭಿಸಲಾಗುವುದು. ಆದರೆ, ಈ ಆರಂಭಿಕ ಐದು ತರಗತಿ ಮಕ್ಕಳಿಗೆ ಬಿಸಿಯೂಟ ಆರಂಭಿಸುವುದು ಕೊಂಚ ತಡವಾಗಲಿದೆ. ನವೆಂಬರ್‌ ಮೊದಲ ವಾರದಿಂದ ಇವರಿಗೆ ಬಿಸಿಯೂಟ ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹೇಳಿದ್ದಾರೆ.

Follow Us:
Download App:
  • android
  • ios