ಬೆಂಗಳೂರು (ನ.30):  ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮಾದರಿಯಲ್ಲೇ ಡಿ. 1 ರಿಂದ ರಾಜ್ಯದಲ್ಲಿ ಎಲ್ಲಾ ವೈದ್ಯಕೀಯ ಕಾಲೇಜುಗಳು ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕೂಡ ಪುನಾರಂಭಗೊಂಡು ತರಗತಿ ಚಟುವಟಿಕೆಗಳು ಆರಂಭವಾಗಲಿದೆ.

ಕೊರೋನಾ ಕಾರಣ ಕಳೆದ 8 ತಿಂಗಳಿಂದ ಕಾಲೇಜುಗಳಲ್ಲಿ ಪಾಠ-ಪ್ರವಚನ ನಿಂತಿತ್ತು. ಆದರೆ ಈಗ ಕೇಂದ್ರ ಸರ್ಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ), ಯುಜಿಸಿ ಹಾಗೂ ರಾಜ್ಯ ಸರ್ಕಾರದ ಆದೇಶ ಹಾಗೂ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ವೈದ್ಯಕೀಯ ಪದವಿ ಕಾಲೇಜುಗಳನ್ನು ಆರಂಭಿಸುವಂತೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಸುತ್ತೋಲೆ ಹೊರಡಿಸಿದೆ.

ಆರ್‌ಜಿಯುಎಚ್‌ಎಸ್‌ನ ಎಲ್ಲಾ ಸಂಯೋಜಿತ ವೈದ್ಯಕೀಯ ಕಾಲೇಜುಗಳನ್ನು ಡಿ.1 ರ ಮಂಗಳವಾರದಿಂದ ಪುನಾರಂಭಗೊಳಿಸಿ ತಕ್ಷಣವೇ ಪ್ರಾಯೋಗಿಕ ತರಗತಿಗಳನ್ನು (ಪ್ರಾಕ್ಟಿಕಲ್‌ ಕ್ಲಾಸಸ್‌) ನಡೆಸುವ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯನ್ನು ಆನ್‌ಲೈನ್‌ ಶಿಕ್ಷಣ ಮತ್ತು ಭೌತಿಕ ತರಗತಿ ಹಾಜರಾತಿ ಎರಡೂ ರೀತಿಯಲ್ಲೂ ನಡೆಸಬಹುದು. ತರಗತಿ ಹಾಜರಾತಿ ಕಡ್ಡಾಯಗೊಳಿಸುವಂತಿಲ್ಲ. ಕಾಲೇಜಿಗೆ ಖುದ್ದು ಹಾಜರಾಗುವ ಅಥವಾ ಆನ್‌ಲೈನ್‌ ಶಿಕ್ಷಣವನ್ನು ಪಡೆಯುವ ನಿರ್ಧಾರವನ್ನು ವಿದ್ಯಾರ್ಥಿಗಳಿಗೆ ಬಿಡಬೇಕು ಎಂದು ವಿವಿ ಸೂಚನೆ ನೀಡಿದೆ.

ಡಿಸೆಂಬರ್‌ ಅಂತ್ಯಕ್ಕೆ SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ ಸಾಧ್ಯತೆ .

ಕೋವಿಡ್‌ ಪರೀಕ್ಷೆ ಕಡ್ಡಾಯ:  ಈಗಾಗಲೇ ಆರಂಭಗೊಂಡಿರುವ ಪದವಿ ಕಾಲೇಜುಗಳ ಮಾದರಿಯಲ್ಲೇ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಇತರೆ ಸಿಬ್ಬಂದಿಗಳು ಕಾಲೇಜಿಗೆ ಬರುವ ಮುನ್ನ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿಯೊಂದಿಗೆ ಹಾಜರಾಗಬೇಕು. ಇನ್ನು ವಿದ್ಯಾರ್ಥಿಗಳು ತರಗತಿಗೆ ಖುದ್ದು ಹಾಜರಾಗಲು ಸರ್ಕಾರದ ಆದೇಶಾನುಸಾರ ಪೋಷಕರ ಲಿಖಿತ ಅನುಮತಿ ಪತ್ರ ತರಬೇಕು. ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೊರೋನಾ ಆತಂಕ ದೂರವಾಗಿಸಿ ಸುರಕ್ಷಾ ಕ್ರಮಗಳೊಂದಿಗೆ ತರಗತಿ ಚಟುವಟಿಕೆ ಮತ್ತು ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕಾಲೇಜುಗಳು ಭರವಸೆ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿಲಾಗಿದೆ.

ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಕಾಲೇಜುಗಳು ಆರಂಭವಾಗದ ಕಾರಣ ಪಠ್ಯ ಬೋಧನೆ, ಪ್ರಾಯೋಗಿಕ ತರಗತಿ ಚಟುವಟಿಕೆಗಳು ಬಾಕಿ ಉಳಿದಿವೆ. ಪಠ್ಯ ಬೋಧನಾ ಚಟುವಟಿಕೆಗಳನ್ನು ಆದಷ್ಟುಬೇಗ ಪೂರ್ಣಗೊಳಿಸಲು ಪ್ರತೀ ವರ್ಷದಂತೆ ವೇಳಾಪಟ್ಟಿಸಿದ್ಧಪಡಿಸಿಕೊಳ್ಳಬೇಕು. ಕಡ್ಡಾಯ ಮಾಸ್ಕ್‌ ಧರಿಸುವುದು, ತರಗತಿ ಕೊಠಡಿಗಳ ಸ್ಯಾನಿಟೈಸಿಂಗ್‌, ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್‌ ನಿಯಂತ್ರಣಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಹಂತ-ಹಂತವಾಗಿ ವಿದ್ಯಾರ್ಥಿಗಳ ಹಾಜರಾತಿ ಮತ್ತು ತರಬೇತಿ ನಿಯಮಾವಳಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ವಿವಿಯ ಕುಲ ಸಚಿವರು ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.