ಶಾಲೆಯಲ್ಲಿ ಸಾಮೂಹಿಕ ಸನ್ನಿ: ವಿದ್ಯಾರ್ಥಿಗಳ ಕಿರುಚಾಟಕ್ಕೆ ಬೆಚ್ಚಿದ ಶಿಕ್ಷಕರು : viral video
ಉತ್ತರಾಖಂಡ್‌ನ ಶಾಲೆಯೊಂದರ ವಿದ್ಯಾರ್ಥಿಗಳು ಸಾಮೂಹಿಕ ಸನ್ನಿಗೆ ಒಳಗಾಗಿ ಜೋರಾಗಿ ಕಿರುಚಿಕೊಂಡು ತಲೆಯನ್ನು ನೆಲಕ್ಕೆ ಹೊಡೆದುಕೊಂಡು ಬೊಬ್ಬೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಾಖಂಡ್: ಉತ್ತರಾಖಂಡ್‌ನ ಶಾಲೆಯೊಂದರ ವಿದ್ಯಾರ್ಥಿಗಳು ಸಾಮೂಹಿಕ ಸನ್ನಿಗೆ ಒಳಗಾಗಿ ಜೋರಾಗಿ ಕಿರುಚಿಕೊಂಡು ತಲೆಯನ್ನು ನೆಲಕ್ಕೆ ಹೊಡೆದುಕೊಂಡು ಬೊಬ್ಬೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳ ವರ್ತನೆಗೆ ಶಿಕ್ಷಕರೇ ಬೆಚ್ಚಿ ಬಿದ್ದಿದ್ದಾರೆ. ಉತ್ತರಾಖಂಡ್‌ನ ಬಾಗೇಶ್ವರದಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.
ಹಲವು ವಿದ್ಯಾರ್ಥಿಗಳು ಬಹುತೇಕ ಹೆಣ್ಣು ಮಕ್ಕಳು ಜೋರಾಗಿ ಕಿರುಚಿಕೊಂಡು ನೆಲದಲ್ಲಿ ಹೊರಳಾಡುತ್ತಿದ್ದು, ಇದು ಶಿಕ್ಷಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಕಳೆದ ಎರಡು ದಿನಗಳಿಂದ ಶಾಲೆಗೆ ಬಂದ ವಿದ್ಯಾರ್ಥಿಗಳಲ್ಲಿ ಈ ರೀತಿ ವರ್ತನೆ ಇದೆ ಎಂದು ಶಿಕ್ಷಕರು ಹೇಳಿದ್ದಾರೆ. ಇದಾದ ಬಳಿಕ ಶಾಲೆಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಇಲ್ಲಿಗೆ ಸಮೀಪದ ಜಿಲ್ಲೆಗಳಾದ ಅಲ್ಮೊರಾ ಪಿಥೋರ್‌ಗರ್ ಹಾಗೂ ಚಮೋಲಿಯಲ್ಲಿ ಇಂತಹ ಸಾಮೂಹಿಕ ಸನ್ನಿ ಪ್ರಕರಣಗಳು ನಡೆದ ಬಗ್ಗೆ ವರದಿಯಾಗಿದೆ.
ಸಾಮೂಹಿಕ ಸನ್ನಿ ಎಂದರೇನು?
ಸಾಮೂಹಿಕ ಹಿಸ್ಟೀರಿಯಾವು ಅಸಾಮಾನ್ಯ ಮತ್ತು ವಿಶಿಷ್ಟವಲ್ಲದ ನಡವಳಿಕೆಯಾಗಿದೆ. ಇದು ಸುತ್ತಲಿನ ಭ್ರಮಲೋಕವನ್ನೇ ನಿಜವೆಂದು ನಂಬಿ ಮನುಷ್ಯರ ನಡವಳಿಕೆಯಲ್ಲಿ ಆಗುವ ಬದಲಾವಣೆಯಾಗಿದೆ. ಇದು ಭಾವನಾತ್ಮಕ ಅಥವಾ ಮಾನಸಿಕ ಒತ್ತಡದಿಂದ ಪ್ರೇರೇಪಿಸಲ್ಪಟ್ಟ ದೈಹಿಕ ಲಕ್ಷಣಗಳ ಜೊತೆ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಸುಳ್ಳನೇ ನಿಜವೆಂದು ನಂಬಿ ಅದರಿಂದ ತೊಂದರೆಗೊಳಗಾದಂತೆ ವರ್ತಿಸುವ ಮಾನಸಿಕ ಸ್ಥಿತಿ.
70 ದಶಕದಲ್ಲಿ ಶೃಂಗೇರಿಯ ಸರ್ಕಾರಿ ಶಾಲೆಯೊಂದರಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಶಾಲೆಯಲ್ಲಿ ಒಂದು ವಿದ್ಯಾರ್ಥಿ ಕುಸಿದು ಬಿದ್ದು ಅಸ್ವಸ್ಥಳಾಗಿದ್ದಳು. ಇದಾದ ಬಳಿಕ ಮರು ದಿನ ಶಾಲೆಗೆ ಬಂದ ವಿದ್ಯಾರ್ಥಿಗಳು ಒಬ್ಬೊಬ್ಬರೇ ಶಾಲೆಯಲ್ಲಿ ತಲೆ ತಿರುಗಿ ಬೀಳಲು ಆರಂಭಿಸಿದ್ದರು. ಆದರೆ ವಿದ್ಯಾರ್ಥಿಗಳು ಏಕೆ ಹೀಗೆ ತಲೆ ತಿರುಗಿ ಬೀಳುತ್ತಾರೆ ಎಂಬುದಕ್ಕೆ ಯಾವುದೇ ಕಾರಣ ಸಿಗುತ್ತಿರಲಿಲ್ಲ. ಇದರಿಂದ ಕಂಗೆಟ್ಟ ಶಾಲೆಯ ಶಿಕ್ಷಕ ವರ್ಗ ಶೃಂಗೇರಿ ಮಠದ ಗುರುಗಳನ್ನು ಸಂಪರ್ಕಿಸಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ಅಂದಿನ ಶೃಂಗೇರಿ ಗುರುಗಳು ಸರ್ಕಾರವನ್ನು ಸಂಪರ್ಕಿಸಿ ಖ್ಯಾತ ಮನೋತಜ್ಞ ಸಿ.ಆರ್. ಚಂದ್ರಶೇಖರ್ ಹಾಗೂ ಮಾನಸಿಕ ತಜ್ಞರ ತಂಡವನ್ನು ಶಾಲೆಗೆ ಕರೆಸಿದ್ದರು.
ಶಾಲೆಗೆ ಬಂದ ಅವರು ವಿದ್ಯಾರ್ಥಿಗಳ ತಪಾಸಣೆ ನಡೆಸಿ ಅವರಿಗೆ ಹಲವು ಸುತ್ತಿನ ಆಪ್ತ ಸಮಾಲೋಚನೆ ನಡೆಸಿದಾಗ ಮಕ್ಕಳು ಅವರ ಬಳಿ ತಾವು ಏಕೆ ತಲೆ ತಿರುಗಿ ಬೀಳುತ್ತಿದ್ದೇವೆ ಎಂಬುದನ್ನು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಉತ್ತರ ಕಂಡು ಶಿಕ್ಷಕರು ಹಾಗೂ ಇಡೀ ಊರೇ ಬೆಚ್ಚಿ ಬಿದ್ದಿತ್ತು. ಅಂದು ತಲೆ ತಿರುಗಿ ಬಿದ್ದಿದ್ದ ವಿದ್ಯಾರ್ಥಿನಿಯನ್ನು ಮನೆಗೆ ಕಳುಹಿಸಿದ್ದರು. ಹೀಗಾಗಿ ನಾವು ತಲೆ ತಿರುಗಿ ಬಿದ್ದರೆ ನಮ್ಮನ್ನು ಕೂಡ ಮನೆಗೆ ಕಳುಹಿಸುತ್ತಾರೆ ಎಂಬ ಕಾರಣಕ್ಕೆ ಶಾಲೆಯಲ್ಲಿ ಮಕ್ಕಳೆಲ್ಲರೂ ಒಬ್ಬರದ ಮೇಲೆ ಒಬ್ಬರಂತೆ ಸಾಮೂಹಿಕವಾಗಿ ತಲೆ ತಿರುಗಿ ಬೀಳುತ್ತಿದ್ದರು ಎಂಬುದನ್ನು ಮನೋವೈದ್ಯರ ಬಳಿ ಮಕ್ಕಳು ಬಾಯ್ಬಿಟ್ಟಿದ್ದರು. ಇದಾದ ಬಳಿಕ ಮಕ್ಕಳಿಗೆ ವೈದ್ಯರು ಆಪ್ತ ಸಮಾಲೋಚನೆ ನಡೆಸಿ ಅವರನ್ನು ಈ ಸಾಮೂಹಿಕ ಸನ್ನಿಯಿಂದ ಮುಕ್ತಗೊಳಿಸಿದ್ದರು.