Asianet Suvarna News Asianet Suvarna News

ಚಿಕ್ಕೋಡಿ: ಕನ್ನಡ ನೆಲದಲ್ಲೇ ಕನ್ನಡ ಶಾಲೆಗೆ ಮರಾಠಿಗರ ವಿರೋಧ..!

ಮಹಾರಾಷ್ಟ್ರ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಸದಾ ಒಂದಿಲ್ಲ ಒಂದು ಕಿರಿಕ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕನ್ನಡ ನೆಲದಲ್ಲಿ ಕನ್ನಡ ಶಾಲೆಯ ಕೊಠಡಿ ನಿರ್ಮಾಣ ಮಾಡಲು ಮರಾಠಿ ಭಾಷಿಕರು ವಿರೋಧಿಸುತ್ತಿರುವ ಘಟನೆ ಗಡಿ ಜಿಲ್ಲೆ ಬೆಳಗಾವಿಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದಿದೆ. 

Marathi People Opposition to Kannada Schools in Kannada Land at Chikkodi in Belagavi grg
Author
First Published Nov 29, 2023, 10:00 PM IST

ಚಿಕ್ಕೋಡಿ(ನ.29):  ಅದು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಗ್ರಾಮ. ಕನ್ನಡ ನೆಲದಲ್ಲಿ ಕನ್ನಡ ಶಾಲಾ ಕಟ್ಟಡ ನಿರ್ಮಾಣಕ್ಕೆ ಮರಾಠಿ ಭಾಷಿಕರು ಕಳೆದ ನಾಲ್ಕು ವರ್ಷಗಳಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಗಡಿ ಕನ್ನಡಿಗರು ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ. ಎಲ್ಲಾ ದಾಖಲೆ ಇದ್ದು, ಸರ್ಕಾರದಿಂದ ಅನುದಾನ ಬಂದರೂ ಶಾಲಾ ಕೊಠಡಿ ನಿರ್ಮಾಣಕ್ಕೆ ಮರಾಠಿಗರು ವಿರೋಧಿಸುತ್ತಿದ್ದು ಇಂದು ಭೂಮಿ ಪೂಜೆ ವೇಳೆ ಹೈಡ್ರಾಮಾವೇ ನಡೆದು ಹೋಗಿದೆ. ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ...

ಕನ್ನಡ ನೆಲದಲ್ಲಿ ಸರ್ಕಾರಿ ಕನ್ನಡ ಶಾಲೆ ಕೊಠಡಿ ನಿರ್ಮಾಣಕ್ಕೆ ವಿರೋಧ

ಹೌದು, ಮಹಾರಾಷ್ಟ್ರ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಸದಾ ಒಂದಿಲ್ಲ ಒಂದು ಕಿರಿಕ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕನ್ನಡ ನೆಲದಲ್ಲಿ ಕನ್ನಡ ಶಾಲೆಯ ಕೊಠಡಿ ನಿರ್ಮಾಣ ಮಾಡಲು ಮರಾಠಿ ಭಾಷಿಕರು ವಿರೋಧಿಸುತ್ತಿರುವ ಘಟನೆ ಗಡಿ ಜಿಲ್ಲೆ ಬೆಳಗಾವಿಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದಿದೆ. ಹೌದು ಕಾರದಗಾ ಗ್ರಾಮದ ಸರ್ವೇ ನಂಬರ್ 462ರಲ್ಲಿ ಕನ್ನಡ, ಉರ್ದು, ಮರಾಠಿ ಶಾಲೆಗೆ ಜಾಗ ಮೀಸಲಿಡಲಾಗಿತ್ತು. ಕಳೆದ ಹಲವು ವರ್ಷಗಳ ಹಿಂದೆ ಕನ್ನಡ ಶಾಲಾ ಮಕ್ಕಳ ಸಂಖ್ಯೆ ಹದಿನಾರು ಹದಿನೇಳು ಇದ್ದ ಹಿನ್ನೆಲೆ ಗ್ರಾಮದಲ್ಲಿರುವ ಹಳೆಯ ಸರ್ಕಾರಿ ಮರಾಠಿ ಶಾಲಾ ಕಟ್ಟಡಕ್ಕೆ ಕನ್ನಡ ಶಾಲೆ ಸ್ಥಳಾಂತರಿಸಲಾಗಿತ್ತು. ಆದ್ರೆ ಈಗ ಸರ್ಕಾರಿ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 200ರ ಗಡಿ ದಾಟಿದೆ. ಹೀಗಾಗಿ ಸರ್ಕಾರಿ ಕನ್ನಡ ಶಾಲೆಗೆ ಮೀಸಲಿದ್ದ ಜಮೀನಿನಲ್ಲಿಯೇ ಶಾಲಾ ಕೊಠಡಿ ಕಟ್ಟಿಸಿಕೊಡುವಂತೆ ಕನ್ನಡ ಭಾಷಿಕರು ಮನವಿ ಮಾಡಿದ್ರು. 50 ವರ್ಷಗಳ ಹಳೆಯದಾದ ಕನ್ನಡ ಶಾಲೆಯ ಕೊಠಡಿ ಕೆಡವಿ ಹೊಸ ಕೊಠಡಿ ನಿರ್ಮಾಣಕ್ಕೆ ಮನವಿ ಸಲ್ಲಿಸಿ ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ 2022ರ ಡಿಸೆಂಬರ್ 27ರಂದು ಅನುಮತಿ ಪಡೆದಿದ್ದಾರೆ.  ಇದಕ್ಕೂ ಮುನ್ನವೇ ಅಂದರೆ 2022ರ ನವೆಂಬರ್ 16ರಂದು ಕೊಠಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 11 ಲಕ್ಷ 98 ಸಾವಿರ ರೂ. ಅನುದಾನ ಮಂಜೂರಾಗಿತ್ತು. ಬಳಿಕ ಕಾರದಗಾ ಗ್ರಾಮ ಪಂಚಾಯತಿ ಕಚೇರಿಯಿಂದ ಎನ್‌ಓಸಿ ಪಡೆದಿದ್ದ ಗ್ರಾಮಸ್ಥರು ಇಂದು ಹೊಸ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆಗೆ ಮುಂದಾಗಿದ್ದರು. ಯಾವಾಗ ಸರ್ಕಾರಿ ಕನ್ನಡ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಭೂಮಿ ಪೂಜೆಗೆ ಆಗಮಿಸಿದರೋ ಈ ವೇಳೆ ಸರ್ಕಾರಿ ಮರಾಠಿ ಶಾಲೆಯ ಎಸ್ ಡಿಎಂಸಿ ಸದಸ್ಯರು ವಿರೋಧಿಸಿ ವಾಗ್ವಾದ ನಡೆಸಿದ್ದಾರೆ. ಈಗ ಇದೇ ಜಾಗದಲ್ಲಿ ಕನ್ನಡ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಜಮೀನು ನೀಡಬೇಕೆಂದು ಕನ್ನಡ ಭಾಷಿಕರು ಪಟ್ಟು ಹಿಡಿದಿದ್ದಾರೆ. ಈ ಕುರಿತು ಮಾತನಾಡಿರುವ ಎಸ್​ಡಿಎಂಸಿ ಅಧ್ಯಕ್ಷ ಜಿನಪ್ಪ ಗಾವಡೆ, ಮರಾಠಿ ಶಾಲೆ ಇದೆ ಕನ್ನಡದವರು ಇಲ್ಲಿ ಬರಬೇಡಿ ಅಂತಾ ಹೇಳುತ್ತಿದ್ದಾರೆ. ಆದ್ರೆ ಕನ್ನಡ, ಮರಾಠಿ, ಉರ್ದು ಶಾಲೆಗೆ ಅಂತಾ ಒಂದು ಎಕರೆ ಜಾಗ ಇರುವ ಬಗ್ಗೆ ಉತಾರ ಇದೆ. ಸರ್ಕಾರಿ ಕನ್ನಡ ಶಾಲೆಗೆ 13 ಗುಂಟೆ ಜಾಗ ಬರುತ್ತೆ. ಈ ಮೊದಲು ಹದಿನಾರು ವಿದ್ಯಾರ್ಥಿಗಳು ಇದ್ದ ಸಲುವಾಗಿ ನಮಗೆ ಊರಲ್ಲಿರುವ ಶಾಲೆ ನೀಡಿದ್ರು. ಅಲ್ಲಿ ಹೋಗಿದ್ವಿ. ಆದ್ರೆ ಈಗ ನಮ್ಮ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು ಹೀಗಾಗಿ ನಾವು ನಮ್ಮ ಪಾಲಿನ ಜಾಗ ಕೇಳುತ್ತಿದ್ದೇವೆ. ಆ ಜಾಗ ಕೊಡ್ತೀವಿ ಈ ಜಾಗ ಕೊಡ್ತೀವಿ ಅಂತಾ ಮೂರು ವರ್ಷಗಳಿಂದ ಹೇಳುತ್ತಿದ್ದಾರೆ ಆದ್ರೆ ನೀಡುತ್ತಿಲ್ಲ. ಈಗ ನಮ್ಮ ಸರ್ಕಾರಿ ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ 280 ಇದೆ. ಈಗ ಹಳೆಯ ಶಾಲೆಯಲ್ಲಿ ಮಕ್ಕಳಿಗೆ ಕೂರಲು ಜಾಗವಿಲ್ಲ, ಮೈದಾನ ಇಲ್ಲ. ಈ ಹಿಂದೆ ಶಾಲಾ ಮಕ್ಕಳ ಸಂಖ್ಯೆ ಕಡಿಮೆ ಇದೆ ಅಂತಾ ಮರಾಠಿ ಶಾಲೆಗೆ ಕಳಿಸಿದ್ರು. ಆದ್ರೆ ಈಗ ಶಾಲಾ ಕೊಠಡಿ ನಿರ್ಮಾಣಕ್ಕೆ 12 ಲಕ್ಷ ರೂ. ಮಂಜೂರು ಆಗಿದೆ. ಹೀಗಾಗಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆಗೆ ಬಂದಾಗ ಗಲಾಟೆ ಮಾಡುತ್ತಿದ್ದಾರೆ. ಈಗ ಊರ ಹೊರಗೆ ಕೊಡುವ ಜಾಗ ಆರೋಗ್ಯ ಇಲಾಖೆಗೆ ಸೇರಿದ್ದಾಗಿದೆ. ನಮ್ಮ ಕನ್ನಡ ಶಾಲೆ ನಮ್ಮ ಊರಿನಲ್ಲಿರಬೇಕು. ನಮ್ಮ ಬಳಿ ಎಲ್ಲ ದಾಖಲೆ ಇವೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೇಳಿದ್ರೆ ಅವರು ಬರಲಿಲ್ಲ. ಯಾರು ನಮ್ಮ ಬೆಂಬಲಕ್ಕೆ ಬರುತ್ತಿಲ್ಲ ಎಂದು ಎಸ್​ಡಿಎಂಸಿ ಅಧ್ಯಕ್ಷ ಜಿನಪ್ಪಾ ಗಾವಡೆ ಅಳಲು ತೋಡಿಕೊಂಡಿದ್ದಾರೆ.

ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ, ಚರ್ಚಿಸಿ ತೀರ್ಮಾನ: ಸಚಿವ ಸತೀಶ ಜಾರಕಿಹೊಳಿ

ಇನ್ನು ಎಸ್​ಡಿಎಂಸಿ ಸದಸ್ಯೆ ವಿದ್ಯಾ ಗಾವಡೆ ಮಾತನಾಡಿ, ಮರಾಠಿ ಶಾಲೆಯ ಎಸ್​ಡಿಎಂಸಿ ಅಧ್ಯಕ್ಷರು ತಕರಾರು ತಗೆಯುತ್ತಿದ್ದಾರೆ. ಮರಾಠಿ ಶಾಲೆಯೊಳಗೆ ಕನ್ನಡದವರು ಬರಬೇಡಿ. ಊರಿನ ಹೊರಗೆ ನಿಮಗೆ ಜಾಗ ಕೊಡುತ್ತೇವೆ ಅಲ್ಲಿ ಹೋಗಿ ಅಂತಿದ್ದಾರೆ. ಊರು ಹೊರಗೆ ಹೋಗಲು ನಮಗೆ ಇಷ್ಟ ಇಲ್ಲ. ಕನ್ನಡ ಶಾಲೆ ಊರೊಳಗೆ ಇರಬೇಕು.  ಇಷ್ಟು ದಿನಗಳಿಂದ ನಮ್ಮ ಊರಿನಲ್ಲಿ ಕನ್ನಡ ಬೆಳೆದಿರಲಿಲ್ಲ. ಈಗ ಬೆಳೆಯುತ್ತಿದೆ. ಕರ್ನಾಟಕದಲ್ಲಿ ಕನ್ನಡ ಬೆಳೆಯಬೇಕು. ಕನ್ನಡಕ್ಕೆ ಆಗುವ ಅನ್ಯಾಯ ಸರಿದೊಗಿಸಬೇಕು. ಮರಾಠಿಗರು ಕಿರಿಕ್ ಮಾಡುತ್ತಿದ್ದಾರೆ. ಸರ್ಕಾರದವರು ನಮಗೆ ಅನುದಾನ ನೀಡಿದ್ದಾರೆ. ಆದ್ರೆ ಈಗ ಕಟ್ಟಡ ನಿರ್ಮಾಣ ಮಾಡಬೇಕು ಅಂದ್ರೆ ಸರ್ಕಾರಿ ಮರಾಠಿ ಶಾಲೆಯ ಎಸ್​ಡಿಎಂಸಿ ಸದಸ್ಯರು ವಿರೋಧ ಮಾಡುತ್ತಿದ್ದಾರೆ. ನಮಗೆ ಈಗಿರುವ ಶಾಲೆಯಲ್ಲಿ ಮೈದಾನ ಇಲ್ಲ, ವ್ಯವಸ್ಥೆ ಇಲ್ಲ. ನಮಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೋರ್ವ ಎಸ್​ಡಿಎಂಸಿ ಸದಸ್ಯ ಮುರಾರಿ ಜತ್ರಾಟೆ ಮಾತನಾಡಿ, ನಮ್ಮ ಊರು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿದೆ. ಮರಾಠಿಗರ ಸಂಖ್ಯೆ ಹೆಚ್ಚಿದ್ದರೂ ಕನ್ನಡಿರ ಸಂಖ್ಯೆಯೂ ಹೆಚ್ಚಾಗಿದೆ. ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ವೇಳೆ ಊರಿನೊಳಗೆ ಒಂದು ಶಾಲೆ ನೀಡಿದ್ರು ಅಲ್ಲಿ ನಮ್ಮ ಮಕ್ಕಳನ್ನು ಓದಿಸುತ್ತಿದ್ದೇವೆ. ಆದ್ರೆ ಈಗ ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಾಲ್ಕು ವರ್ಷ ಆಯಿತು ನಾವು ಹೋರಾಟ ಮಾಡುತ್ತಿದ್ದೇವೆ. ಉತಾರದಲ್ಲಿ ಸರ್ಕಾರಿ ಕನ್ನಡ ಶಾಲೆ, ಸರ್ಕಾರಿ ಮರಾಠಿ ಶಾಲೆ, ಸರ್ಕಾರಿ ಉರ್ದು ಶಾಲೆಗೆ ಮೀಸಲಿದ್ದ ಬಗ್ಗೆ ದಾಖಲೆ ಇದೆ. ನಮ್ಮದೊಂದು ಕೊಠಡಿ ಇದೆ ನಾವು ಇಲ್ಲಿ ಕೊಠಡಿ ಕಟ್ಟುತ್ತೇವೆ ಅಂತಾ ಬಹಳ ಸಾರಿ ಕೇಳಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಸರ್ಕಾರ ಹಾಗೂ ಎಲ್ಲ ಅಧಿಕಾರಿಗಳು ಕನ್ನಡ ನೆಲ ಜಲ, ನಾಡು ನುಡಿಗಾಗಿ ಎಲ್ಲರೂ ಒಗ್ಗೂಡಿ ಸ್ಪಂದಿಸಬೇಕು. ಇಲ್ಲವಾದ್ರೆ ನಾವು ಹೋರಾಟ ಮಾಡಬೇಕಾಗುತ್ತದೆ.ರಾಜಕೀಯ ಒತ್ತಡ ಏನೂ ಇಲ್ಲ. ಈವರೆಗೂ ಮರಾಠಿ ಭಾಷಿಕರು ಹಾಗೂ ನಾವು ಬಾಂಧವ್ಯದಿಂದ ಬದುಕಿದ್ದು ಮುಂದೆಯೂ ಇರ್ತೀವಿ‌. ಆದ್ರೆ ನಮಗೆ ನ್ಯಾಯ ಸಿಗಬೇಕು ಅಂತಾ ಹೋರಾಟ ನಡೆಯುತ್ತಿದೆ. ಯಾವುದೇ ರೀತಿಯ ಜಾತಿ ಬೇಧ ಭಾಷಾ ಬೇಧ ನಮ್ಮಲ್ಲಿ ಇಲ್ಲ. ಆದ್ರೆ ನಮ್ಮ ಮಕ್ಕಳಿಗೆ ಒಳ್ಳೆಯ ಶಾಲೆ, ಒಳ್ಳೆಯ ಮೈದಾನ, ಒಳ್ಳೆಯ ಪರಿಸರ ಹಾಗೂ ವಾತಾವರಣ ಇರಬೇಕು. ಆ ಒಳ್ಳೆಯ ವಾತಾವರಣದಲ್ಲಿ ನಮ್ಮ ಮಕ್ಕಳಿಗೆ ಬೋಧನೆ ಆಗಬೇಕು. ಅದಕ್ಕೋಸ್ಕರ ಇಲ್ಲಿದ್ದಂತ ಶಾಲೆಯ ಉತಾರದಲ್ಲಿ ನಮ್ಮ ಹೆಸರಿದ್ದು ನಮ್ಮ ಹಕ್ಕಿನ ಜಮೀನು ನಮಗೆ ಸಿಗುತ್ತಿಲ್ಲ‌. ಇದೇ ರೀತಿ ಮುಂದುವರೆದರೆ ಉಗ್ರ ಹೋರಾಟ ಮಾಡುತ್ತೇವೆ. ಬೇರೆ ಜಮೀನು ಕೊಡ್ತೀವಿ ಅಂತಾ ಹೇಳಿದ್ರು ಆದ್ರೆ ಅದು ಆರೋಗ್ಯ ಇಲಾಖೆಗೆ ಸೇರಿದ ಜಾಗ ಇದೆ‌. ಡಿಹೆಚ್‌ಒ, ಆರೋಗ್ಯಾಧಿಕಾರಿ ಹೇಳಬೇಕಾಗುತ್ತದೆ. ನಮ್ಮ ಹಕ್ಕಿನ ಜಮೀನು ನಮಗೆ ಸಿಗುತ್ತಿಲ್ಲ. ಸುಮಾರು ನಾಲ್ಕು ವರ್ಷಗಳಿಂದ ಇದೇ ರೀತಿ ಆಗುತ್ತಿದೆ.‌ನಮ್ಮ ಜಾಗ ಇದೆ ನಾವು ಅಲ್ಲಿಯೇ ಕೊಠಡಿ ನಿರ್ಮಾಣ ಮಾಡ್ತೀವಿ ಅದಕ್ಕಾಗಿ ಹೋರಾಟ ಮಾಡ್ತೀವಿ ಎಸ್​ಡಿಎಂಸಿ ಸದಸ್ಯೆ ವಿದ್ಯಾ ಗಾವಡೆ ಎಂದಿದ್ದಾರೆ.

ಗಡಿ ಜಿಲ್ಲೆಯಲ್ಲಿ ಕನ್ನಡ ಬೆಳೆಯಬೇಕು ಕನ್ನಡ ಉಳಿಯಬೇಕು ಎಂದು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತಿದೆ. ಇನ್ನೇನು ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡ ನೆಲದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಶಾಲೆಗಾಗಿ ಹೋರಾಟ ಮಾಡುವ ಪರಿಸ್ಥಿತಿ ಇರೋದು ನಿಜಕ್ಕೂ ವಿಪರ್ಯಾಸವೇ ಸರಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಲಿ ಎಂಬುದು ಗಡಿ ಕನ್ನಡಿಗರ ಆಗ್ರಹ.

Latest Videos
Follow Us:
Download App:
  • android
  • ios