ಪ್ರಾಥಮಿಕ ಶಾಲಾ ಪಠ್ಯಕ್ಕೆ ನಲಿ-ಕಲಿ ಹೆಜ್ಜೆ: ಗಮನ ಸೆಳೆದ ಮಂಗಳೂರು ಶಿಕ್ಷಕಿ
* ಪ್ರಾಥಮಿಕ ಶಾಲಾ ಪಠ್ಯಕ್ಕೆ ನಲಿ-ಕಲಿ ಹೆಜ್ಜೆ!
* ಮಂಗಳೂರಿನ ಶಿಕ್ಷಕಿ ಮಂಜುಳಾ ಜನಾರ್ದನ ಪ್ರಯತ್ನ
* ಯೂಟ್ಯೂಬ್‌ನಲ್ಲಿ ಜನಪ್ರಿಯವಾಗುತ್ತಿರುವ ಹಾಡುಗಳು
ಆತ್ಮಭೂಷಣ್
ಮಂಗಳೂರು, (ಆ.31): ಕೊರೋನಾ ದೆಸೆಯಿಂದ ಮನೆಯಲ್ಲೇ ಇರುವ ಮಕ್ಕಳ ಕಲಿಕೆಗೆ ಹುರುಪು ತುಂಬಲು ಮಂಗಳೂರಿನ ಶಿಕ್ಷಕಿ ‘ಕಲಿ, ನಲಿ, ಆಡು’ ಹೆಸರಿನಲ್ಲಿ ಶಾಲಾ ಪಠ್ಯದ ಹಾಡುಗಳಿಗೆ ಹೆಜ್ಜೆ ಹಾಕಿ ವಿಡಿಯೋಗಳನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ. ಈ ಮೂಲಕ ಪ್ರಾಥಮಿಕ ಶಾಲಾ ಮಕ್ಕಳಲ್ಲಿ ನಲಿಯುತ್ತಾ ಕಲಿಯಲು ಪ್ರೇರಣೆ ನೀಡಿದ್ದಾರೆ.
ಮಂಗಳೂರಿನ ನಳಂದಾ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಶಿಕ್ಷಕಿ ಮಂಜುಳಾ ಜನಾರ್ದನ ಈ ಪ್ರಯತ್ನ ಮಾಡಿದವರು. ಕಳೆದ ಎರಡು ತಿಂಗಳಿಂದ 3-6ನೇ ತರಗತಿ ವರೆಗಿನ ಪಠ್ಯಗಳ ಆಯ್ದ ಹಾಡುಗಳ ಅಭಿನಯದ ಚಿತ್ರೀಕರಣ ನಡೆಸಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿ ಗಮನ ಸೆಳೆದಿದ್ದಾರೆ.
ನೆಟ್‌ವರ್ಕ್ ಇಲ್ಲ: ಒಂಟೆ ಹತ್ತಿ ಬಂದು ಪಾಠ ಹೇಳ್ತಾರೆ ಈ ಶಿಕ್ಷಕರು
ಒಂದು ಪಠ್ಯದಿಂದ ಮೂರು ಹಾಡುಗಳನ್ನು ರೆಕಾರ್ಡಿಂಗ್‌ಗೆ ಆಯ್ಕೆ ಮಾಡಿದ್ದಾರೆ. ಸ್ವತಃ ಇವರಲ್ಲದೆ, ಇತರೆ ಏಳು ಮಂದಿ ವಿದ್ಯಾರ್ಥಿಗಳೂ ಸಾಥ್ ನೀಡಿದ್ದಾರೆ. ಹಾಡಿನ ಸಾಹಿತ್ಯಕ್ಕೆ ಪೂರಕವಾಗಿ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಪ್ರಸ್ತುತ ಆಂಗ್ಲ ಮಾಧ್ಯಮ ವಿಭಾಗದ 2ನೇ ಭಾಷೆ ಕನ್ನಡ ಪಠ್ಯದ ಹಾಡುಗಳನ್ನು ಕಲಿ-ನಲಿಗೆ ಅಳವಡಿಸಲಾಗಿದೆ. ಮುಂದೆ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ಪಠ್ಯಗಳ ಹಾಡುಗಳನ್ನು ಅಭಿನಯಕ್ಕೆ ಅಳವಡಿಸಲು ಉದ್ದೇಶಿಸಿದ್ದಾರೆ. ಅಲ್ಲದೆ ಪಠ್ಯಗಳ ಗದ್ಯ ಭಾಗಗಳಿಗೂ ಅಭಿನಯ ಟಚ್ ನೀಡಿ ವಿಡಿಯೋ ಅಪ್‌ಲೋಡ್ ಮಾಡಲು ಚಿಂತಿಸಿದ್ದಾರೆ.
ಇಲ್ಲಿವರೆಗೆ ಎಲ್‌ಕೆಜಿ, ಯುಕೆಜಿಗೆ ಕಲಿ-ನಲಿ ವಿಡಿಯೋ ಮೂಲಕ ಪಾಠ ಇದ್ದು, ಪ್ರಾಥಮಿಕ ಶಾಲೆಗೆ ವಿಡಿಯೋ ಮೂಲಕ ನಲಿ ಕಲಿ ಪಾಠ ಇದೇ ಮೊದಲು ಎನ್ನುತ್ತಾರೆ ಶಿಕ್ಷಕಿ ಮಂಜುಳಾ ಜನಾರ್ದನ.
ವಾರಕ್ಕೊಂದು ಹಾಡು
ಈ ರೀತಿ ಹಾಡು-ನೃತ್ಯದ ಮೂಲಕ ಪಠ್ಯವನ್ನು ಕಲಿಸುವುದು ಮಕ್ಕಳ ಗ್ರಹಿಕೆಗೆ ಸುಲಭವಾಗಲಿದೆ. ಪಠ್ಯದಲ್ಲಿರುವ ಹಾಡಿಗೆ ವಿಡಿಯೋ ಟಚ್ ನೀಡಿದಾಗ ಅದನ್ನು ನೋಡಿಕೊಂಡು ಮಕ್ಕಳು ನಲಿಯುತ್ತಾ ಕಲಿಯಲು ಸಾಧ್ಯವಿದೆ. ಮಕ್ಕಳಿಗೆ ಸುಲಭ ಅರ್ಥವಾಗುವ ರೀತಿಯಲ್ಲಿ ನಲಿಕೆ-ಕಲಿಕೆ ಪ್ರಸ್ತುತಪಡಿಸಲಾಗಿದೆ. ಒಂದೊಂದು ವಿಡಿಯೋ 3-4 ನಿಮಿಷ ಇದೆ ಅಷ್ಟೆ. ಇವರು ಅಭಿನಯಿಸಿದ ಪಠ್ಯ ಹಾಡಿಗೆ ಯೂಟ್ಯೂಬ್‌ನಲ್ಲಿ 3 ಸಾವಿರಕ್ಕೂ ಅಧಿಕ ಲೈಕ್ ಸಿಕ್ಕಿದೆ. ಹಲವು ಶಾಲೆಗಳಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಅಗರಿ ಎಂಟರ್ ಪ್ರೈಸಸ್ ಸಹಯೋಗದಲ್ಲಿ ಇದನ್ನು ನಿರ್ಮಿಸಲಾಗಿದೆ. ಮಂಜುಳಾ ಉಡುಪಿ ಹೆಸರಿನಲ್ಲಿ ಇದನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ.
ಇದುವರೆಗೆ 12 ಹಾಡುಗಳ ಅಭಿನಯದ ವಿಡಿಯೋ ಮಾಡಲಾಗಿದೆ. ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲು ಇನ್ನು ಆರು ಹಾಡು ಬಾಕಿ ಇದೆ. ಪ್ರತಿ ವಾರ ಒಂದು ಹಾಡಿನ ಅಭಿನಯದ ವಿಡಿಯೋ ಅಪ್‌ಲೋಡ್ ಮಾಡುತ್ತಾರೆ. ಈ ವಾರ ಅಷ್ಟಮಿ ಆಚರಣೆ ಸಲುವಾಗಿ ಅಪ್‌ಲೋಡ್ ಇಲ್ಲ, ಮುಂದಿನ ವಾರದಿಂದ ಯಥಾಪ್ರಕಾರ ವಿಡಿಯೋ ಅಪ್‌ಲೋಡ್ ಆಗಲಿದೆ.
ಮಂಜುಳಾ ಜನಾರ್ದನ ಮಾತು
ಮಕ್ಕಳಿಗಾಗಿ ನಲಿ-ಕಲಿ ಮಾದರಿಯ ಈ ಅಭಿನಯ ಪಠ್ಯ ಹಾಡನ್ನು ಸಿದ್ಧಪಡಿಸಲಾಗಿದೆ. ಸುಲಭದಲ್ಲಿ ಮಕ್ಕಳಿಗೆ ಕಲಿಕೆಗೆ ಇದು ಸುಲಭವಾಗಲಿದೆ. ಮಕ್ಕಳಿಗೆ ಇಷ್ಟವಾದರೆ ನನಗೆ ಸಂತೋಷ.