ರಾಜ್ಯ ಶಿಕ್ಷಣ ಮಂಡಳಿಯಲ್ಲಿ ಓದಿ ನೀಟ್‌ಗೆ ಅರ್ಜಿ. ಮಹಾರಾಷ್ಟ್ರ ನಂ.1 (2.57 ಲಕ್ಷ), ಕರ್ನಾಟಕ ನಂ.2 (1.22 ಲಕ್ಷ). ತಮಿಳುನಾಡು ನಂ.3.

ನವದೆಹಲಿ (ಆ.21): ರಾಜ್ಯ ಶಿಕ್ಷಣ ಮಂಡಳಿಗಳಲ್ಲಿ ಶಿಕ್ಷಣ ಪಡೆದು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ಗೆ ಅರ್ಜಿ ಸಲ್ಲಿಸುವವರಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಈಶಾನ್ಯ ರಾಜ್ಯಗಳು ಕೊನೆಯ ಸ್ಥಾನಗಳಲ್ಲಿವೆ ಎಂದು ರಾಷ್ಟ್ರೀಯ ಪರೀಕ್ಷಾ ಆಯೋಗ ಹೇಳಿದೆ. ನೀಟ್‌ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು 3ನೇ ಹಾಗೂ ಉತ್ತರ ಪ್ರದೇಶ 4ನೇ ಸ್ಥಾನದಲ್ಲಿವೆ. ಈ ವರ್ಷ ಒಟ್ಟಾರೆ 20.38 ಲಕ್ಷ ಅಭ್ಯರ್ಥಿಗಳು ನೀಟ್‌ ಪರೀಕ್ಷೆ ಬರೆದಿದ್ದರು. 2019ರಿಂದ 2023ರ ಅವಧಿಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಸಿಬಿಎಸ್‌ಇ ಶಿಕ್ಷಣ ಪಡೆಯುವವರಾಗಿದ್ದರು. ಆದರೆ ಈ ಬಾರಿ 5.51 ಲಕ್ಷ ಅಭ್ಯರ್ಥಿಗಳು ರಾಜ್ಯ ಶಿಕ್ಷಣ ಮಂಡಳಿಗಳಲ್ಲಿ ಶಿಕ್ಷಣ ಪಡೆದವರಾಗಿದ್ದಾರೆ. ಇದರಲ್ಲಿ ಮಹಾರಾಷ್ಟ್ರದಿಂದ 2.57 ಲಕ್ಷ (ಕಳೆದ ವರ್ಷ 2.31 ಲಕ್ಷ), ಕರ್ನಾಟಕದಿಂದ 1.22 (ಕಳೆದ ವರ್ಷ 1.14 ಲಕ್ಷ)ಲಕ್ಷ ರಾಜ್ಯ ಶಿಕ್ಷಣ ಮಂಡಳಿಗಳಲ್ಲಿ ಶಿಕ್ಷಣ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಇನ್ನೆರಡೇ ದಿನ ಬಾಕಿ, ನಾಡಿದ್ದು ಸಂಜೆ 6.04ಕ್ಕೆ ವಿಕ್ರಂ ಲ್ಯಾಂಡರ್‌ ‘ಚಂದ್ರಸ್ಪರ್ಶ’ಕ್ಕೆ ಮುಹೂರ್ತ

ತಮಿಳುನಾಡಿನಿಂದ 1.13 ಲಕ್ಷ ಹಾಗೂ ಉತ್ತರ ಪ್ರದೇಶದಿಂದ 1.11 ಲಕ್ಷ, ಕೇರಳದಿಂದ 1.07 ಮತ್ತು ಬಿಹಾರದಿಂದ 70 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ತ್ರಿಪುರಾದಲ್ಲಿ 1683, ಮಿಝೋರಾಂನಲ್ಲಿ 1844 ಮತ್ತು ಮೇಘಾಲಯದಲ್ಲಿ 2300 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು ಎಂದು ಎನ್‌ಟಿಎ ಹೇಳಿದೆ.

ನೀಟ್‌ ವಿರೋಧಿಸಿ ಡಿಎಂಕೆ ಉಪವಾಸ ಸತ್ಯಾಗ್ರಹ; ರದ್ದು ತನಕ ಬಿಡಲ್ಲ: ಸಿಎಂ
ಚೆನ್ನೈ: ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ಆಗಿರುವ ನೀಟ್‌ ರದ್ದತಿ ಆಗ್ರಹಿಸಿ ಡಿಎಂಕೆ ನಾಯಕರು, ಕಾರ್ಯಕರ್ತರು ಭಾನುವಾರ ತಮಿಳಿನಾಡಿನಾದ್ಯಂತ ಉಪವಾಸ ಸತ್ಯಾಗ್ರಹದ ಪ್ರತಿಭಟನೆ ನಡೆಸಿದರು. ಇದರಲ್ಲಿ ಡಿಎಂಕೆ ಯುವಘಟಕದ ಅಧ್ಯಕ್ಷ ಉದಯನಿಧಿ ಸ್ಟಾಲಿನ್‌ ಹಾಗೂ ಪಕ್ಷದ ಶಾಸಕರು, ಸಚಿವರು ಭಾಗಿಯಾಗಿದ್ದರು. ಈ ನಡುವೆ ನೀಟ್‌ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸ್ಟಾಲಿನ್‌,‘ವಿದ್ಯಾರ್ಥಿಗಳ ಜೀವನ ನಾಶ ಮಾಡುವ ನೀಟ್‌ ಪರೀಕ್ಷೆಯನ್ನು ರಾಜ್ಯದಲ್ಲಿ ರದ್ದು ಮಾಡುವ ಮಸೂದೆಗೆ ರಾಜ್ಯಪಾಲ ಎನ್‌.ರವಿ ಸಹಿ ಹಾಕುತ್ತಿಲ್ಲ. ಅದನ್ನು ತಮ್ಮ ಬಳಿಯೇ ಇಟ್ಟುಕೊಂಡು ನಾವು ಒತ್ತಾಯಿಸಿದ ಬಳಿಕ ರಾಷ್ಟ್ರಪತಿ ಬಳಿಗೆ ಕಳುಹಿಸಿದ್ದಾರೆ. ನಾವು ಆಡಳಿತದಲ್ಲಿ ಇರಲಿ, ಇಲ್ಲದಿರಲಿ ನೀಟ್‌ ವಿರುದ್ಧ ಧನಿ ಎತ್ತುತ್ತೇವೆ ಎಂದರು.

ಪ್ರತಿಷ್ಠಿತ ಕಂಪೆನಿಯಲ್ಲಿ ದಾಖಲೆಯ 60 ಲಕ್ಷ ಪ್ಯಾಕೇಜ್‌ ಉದ್ಯೋಗ ಗಿಟ್ಟಿಸಿಕೊಂಡ ಐಐಐಟಿ ವಿದ್ಯಾರ್ಥಿನಿ

ಇದನ್ನು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ,‘ಸ್ಟಾಲಿನ್‌ ನೀಟ್‌ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ಬೇರೆ ರಾಜ್ಯಕ್ಕೆ ಇಲ್ಲದ ತೊಂದರೆ ತಮಿಳುನಾಡಿಗೇಕೆ ಎಂದು ಪ್ರಶ್ನಿಸಿದ್ದಾರೆ.