ಮುಂಬೈ, (ಏ.12): ಕೊರೋನಾ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಮಿತಿ ಮೀರುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮಹಾರಾಷ್ಟ್ರ ಸರ್ಕಾರ ಮುಂದೆ ಹಾಕಿದೆ. 10ನೇ ತರಗತಿ ಪರೀಕ್ಷೆ ಜೂನ್ ವೇಳೆ ಹಾಗೂ 12ನೇ ತರಗತಿ ಪರೀಕ್ಷೆಗಳು ಮೇ ಅಂತ್ಯದ ವೇಳೆ ನಡೆಸುವ ಬಗ್ಗೆ ಶಿಕ್ಷಣ ಸಚಿವ ವರ್ಷಾ ಗಾಯಕ್​ವಾಡ್ ಮಾಹಿತಿ ನೀಡಿದ್ದಾರೆ. ಕೊರೋನಾ ಪರಿಸ್ಥಿತಿಯನ್ನು ಅವಲಂಬಿಸಿ ಪರೀಕ್ಷಾ ದಿನಾಂಕ ಘೋಷಿಸಲಾಗುವುದು ಎಂದು ತಿಳಿಸಲಾಗಿದೆ.

ನೆರೆ ರಾಜ್ಯದಲ್ಲಿ 1ರಿಂದ 9, 11ನೇ ತರಗತಿಗೆ ಪರೀಕ್ಷೆ ಇಲ್ಲ!

ಸದ್ಯದ ಪರಿಸ್ಥಿತಿಯು ಪರೀಕ್ಷೆ ಸಡೆಸಲು ಯೋಗ್ಯವಾಗಿಲ್ಲ. ಆರೋಗ್ಯವೇ ಸರ್ಕಾರದ ಮೊದಲ ಆದ್ಯತೆ ಎಂದು ಗಾಯಕ್​ವಾಡ್ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ. 

ಈ ನಿರ್ಧಾರವು ವಿದ್ಯಾರ್ಥಿಗಳು, ಶಿಕ್ಷಕರು, ರಾಜಕಾರಣಿಗಳು, ಶಿಕ್ಷಣ ತಜ್ಞರನ್ನು ಸಂಪರ್ಕಿಸಿದ ಬಳಿಕವೇ ತೆಗೆದುಕೊಂಡದ್ದಾಗಿದೆ ಎಂದು ಅವರು ಹೇಳಿದ್ದಾರೆ. CBSE, ICSE, IB ಹಾಗೂ ಕ್ಯಾಂಬ್ರಿಡ್ಜ್ ಬೋರ್ಡ್​ಗಳಿಗೂ ಪರೀಕ್ಷೆ ಮುಂದೂಡುವಂತೆ ಕೇಳಿಕೊಳ್ಳುತ್ತೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಕೊರೋನಾ 2ನೇ ಅಲೆ ಭಾರೀ ಅನಾಹುತ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.