Asianet Suvarna News Asianet Suvarna News

Hosapete| ಹಂಪಿ ಕನ್ನಡ ವಿವಿ ಪಾವಿತ್ರ್ಯತೆ ಪುನರುಜ್ಜೀವನಕ್ಕೆ ಪತ್ರ ಚಳವಳಿ..!

*  ಶೈಕ್ಷಣಿಕ ಹಾಗೂ ಸಾಂಸ್ಥಿಕ ವಿರೋಧಿ ಚಟುವಟಿಕೆಗಳ ಕುರಿತು ಆತಂಕ
*  ಕೋಲೋಕ್ವಿಯಂಗೆ ಹಣದ ಆರೋಪ
*  ಅಧ್ಯಾಪಕರ ಘನತೆಗೆ ಪೆಟ್ಟು

Letter Movement To Hampi Kannada University Revive Sanctity grg
Author
Bengaluru, First Published Nov 15, 2021, 9:10 AM IST
  • Facebook
  • Twitter
  • Whatsapp

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ನ.15):  ಕನ್ನಡದ(Kannada) ಮುಕುಟಮಣಿಯಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ(Hampi Kannada University) ಆಗುತ್ತಿರುವ ಬೆಳವಣಿಗೆ ಕುರಿತು ವಿವಿಯ ವಿದ್ಯಾರ್ಥಿಗಳೇ ಸಹಿ ಸಂಗ್ರಹ ಚಳವಳಿ(Signature Collection Movement) ನಡೆಸಿದ್ದಾರೆ.

ವಿವಿಯಲ್ಲಿ ಆಗುತ್ತಿರುವ ಶೈಕ್ಷಣಿಕ ಹಾಗೂ ಸಾಂಸ್ಥಿಕ ವಿರೋಧಿ ಚಟುವಟಿಕೆಗಳ ಕುರಿತು ಆತಂಕಗೊಂಡಿದ್ದು, ಇದಕ್ಕಾಗಿ ಕನ್ನಡ ವಿವಿಯ ಪಾವಿತ್ರ್ಯತೆ ಮತ್ತು ಸಂಸ್ಥೆಯ ಘನತೆಯನ್ನು ಪುನರುಜ್ಜೀವನಗೊಳಿಸಲು ಈ ಪತ್ರ ಚಳವಳಿ ನಡೆಸುತ್ತಿದ್ದೇವೆ ಎಂದು ನ. 11ರಂದು ವಿವಿ ಕುಲಸಚಿವ ಡಾ. ಸುಬ್ಬಣ್ಣ ರೈ(Subbanna Rai) ಅವರಿಗೆ ಸಲ್ಲಿಸಿದ ಪತ್ರಕ್ಕೆ 33ಕ್ಕೂ ಅಧಿಕ ವಿದ್ಯಾರ್ಥಿಗಳು(Students) ಸಹಿ ಮಾಡಿ ಸಲ್ಲಿಸಿದ್ದಾರೆ. ಈ ಪತ್ರದ ಪ್ರತಿ ‘ಕನ್ನಡಪ್ರಭ’ಕ್ಕೆ(Kannada Prabha) ಲಭ್ಯವಾಗಿದೆ.

Hampi Kannada University| ನೇಮಕಾತಿ ಪ್ರಕ್ರಿಯೆಗೆ ಆಕ್ಷೇಪ..!

ಅಧ್ಯಾಪಕರ ಘನತೆಗೆ ಪೆಟ್ಟು:

ಅಧ್ಯಾಪಕರ ಘನತೆಯನ್ನು ಕುಂದಿಸುವಂತಹ ನಿರ್ಣಯಗಳನ್ನು ವಿಶ್ವವಿದ್ಯಾಲಯದ ಆಡಳಿತವು ಕೈಗೊಳ್ಳುತ್ತಿದೆ. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಹುತೇಕ ಪ್ರಾಧ್ಯಾಪಕರನ್ನು ವಿಭಾಗದ ಹೊರಗೆ ವಿಸ್ತರಣಾ ಕೇಂದ್ರಗಳಿಗೆ ವರ್ಗಾಯಿಸಿದ್ದಲ್ಲದೇ ಇತ್ತೀಚೆಗೆ ಅ. 30ರಂದು ಡಾ. ಎಂ. ಮಲ್ಲಿಕಾರ್ಜುನ ಗೌಡ ಅವರನ್ನು ಅವರ ಮುಖ್ಯಸ್ಥರ ಅವಧಿ ಇನ್ನೂ ಎಂಟು ತಿಂಗಳು ಬಾಕಿ ಇರುವಾಗಲೇ ಕೂಡಲಸಂಗಮದ ಅಂತಾರಾಷ್ಟ್ರೀಯ ವಚನ ಸಾಹಿತ್ಯ ಅಧ್ಯಯನ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಹಾಗೆಯೇ ವಿಭಾಗದಲ್ಲಿ ಕಾಯಂ ಪ್ರಾಧ್ಯಾಪಕರಾಗಿ ಡಾ. ವೆಂಕಟಗಿರಿ ದಳವಾಯಿ ಅವರು ಕಾರ್ಯನಿರ್ವಹಿಸುತ್ತಿದ್ದಾಗಲೂ ವಿಭಾಗದಲ್ಲಿ ಕಾಯಂ ನೇಮಕಾತಿ ಹೊಂದಿದ ಮುಖ್ಯಸ್ಥರನ್ನು ನೇಮಿಸುವವರೆಗೆ ತಾತ್ಕಾಲಿಕವಾಗಿ ಶೈಲಜಾ ಹಿರೇಮಠ ಅವರನ್ನು ನೇಮಿಸಲಾಗಿದೆ. ಕನ್ನಡ ವಿವಿಯ ಅಧಿನಿಯಮ ಹಾಗೂ ಪರಿನಿಯಮದ ಪ್ರಕಾರ ಅನ್ವಯ ಬೇರೆ ವಿಭಾಗದ ಅಧ್ಯಾಪಕರನ್ನು ಮುಖ್ಯಸ್ಥರನ್ನಾಗಿ ನೇಮಿಸುವಂತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೋಲೋಕ್ವಿಯಂಗೆ ಹಣದ ಆರೋಪ:

ಹಲವು ವಿಭಾಗಗಳಲ್ಲಿ ಈಗಾಗಲೇ ಸಂಶೋಧನಾ ವಿದ್ಯಾರ್ಥಿಗಳಿಂದ(Research Students)ಹಣ ಪಡೆದು ಕೊಲೋಕ್ವಿಯಂ ನಡೆಸುವುದು, ಶಿಷ್ಯವೇತನದ ದಾಖಲಾತಿಗಳಿಗೆ ಸಹಿ ಮಾಡಲು ಹಣ ಪಡೆಯುವುದು ಮತ್ತು ವಿದ್ಯಾರ್ಥಿಗಳಿಂದ ಶಿಷ್ಯವೇತನದಲ್ಲಿ ಪರ್ಸೆಂಟೇಜ್‌ ಪಡೆಯುವುದು ಮಾಮೂಲಿನ ಸಂಗತಿಯಾಗಿದೆ. ಇದು ಪ್ರಸ್ತುತ ವಿಶ್ವವಿದ್ಯಾಲಯವು ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂಬುದನ್ನು ಪುಷ್ಟೀಕರಿಸುತ್ತದೆ. ಕನ್ನಡ ವಿವಿಯ ವಿಭಾಗವೊಂದರಲ್ಲಿ ಕೋಲೋಕ್ವಿಯಂ ನಡೆಸಲು .50 ಸಾವಿರಗಳವರೆಗೂ ಹಣ ಪಡೆಯುತ್ತಿರುವ ಆರೋಪವೂ ಕೇಳಿ ಬರುತ್ತಿದೆ. ಇದು ನೈತಿಕವಾಗಿ ವಿಶ್ವವಿದ್ಯಾಲಯವು ದಿವಾಳಿ ತೆಗೆದಿರುವುದನ್ನು ಸೂಚಿಸುತ್ತದೆ ಎಂದು ವಿದ್ಯಾರ್ಥಿಗಳು ಸಹಿ ಸಂಗ್ರಹಿಸಿ ಸಲ್ಲಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಂಪಿ ಕನ್ನಡ ವಿವಿ: ಯುಜಿಸಿ ಪರವಾನಗಿ ಇಲ್ಲದೇ ಕೋರ್ಸ್‌ ಆರಂಭ..?

ವಿವಿಯಲ್ಲಿ ಇಂಥ ಬೆಳವಣಿಗೆ ಗುಸುಗುಸು ನಡೆದಿದೆ. ಅಧ್ಯಾಪಕರ ಮೇಲೆ ಅನುಮಾನ ಮಾಡುತ್ತಿದ್ದಾರೆ. ಇದರಿಂದ ಪ್ರಾಧ್ಯಾಪಕರ ಘನತೆ ಮತ್ತು ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡಿರುವ ವಿದ್ಯಾರ್ಥಿಗಳ ಘನತೆಗೆ ಅವಮಾನವಾಗಿದೆ. ಅಧ್ಯಯನದಿಂದ ಹೆಸರು ಬರಬೇಕಾದ ವಿಶ್ವವಿದ್ಯಾಲಯಕ್ಕೆ ಇದರಿಂದ ಕಳಂಕ ಬರುತ್ತಿದೆ. ಇದನ್ನು ಸರಿಪಡಿಸುವಂತೆ ವಿದ್ಯಾರ್ಥಿಗಳಲ್ಲಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸಲು ಈ ಪತ್ರ ಚಳವಳಿ ಅಭಿಯಾನ(Campaign) ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿಗಳ ಪತ್ರ ಚಳವಳಿಯ ವಿಷಯ ಕುರಿತು ವಿವಿಯ ಸಿಂಡಿಕೇಟ್‌ ನೇಮಿಸುವ ಸತ್ಯ ಶೋಧನಾ ಸಮಿತಿಗೆ ಒಪ್ಪಿಸಲಾಗುವುದು. ವಿದ್ಯಾರ್ಥಿಗಳು ದಾಖಲೆ ಸಮೇತ ನೇರ ಸಲ್ಲಿಕೆ ಮಾಡಿದರೆ ಖಂಡಿತ ಅಂಥವರ ವಿರುದ್ಧ ಕ್ರಮವಹಿಸಲಾಗುವುದು ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ. ಸ.ಚಿ. ರಮೇಶ ತಿಳಿಸಿದ್ದಾರೆ. 

ವಿದ್ಯಾರ್ಥಿಗಳು ನ. 11ರಂದು ಸಲ್ಲಿಸಿದ ಪತ್ರವನ್ನು ಕುಲಪತಿಯವರು ಸತ್ಯಶೋಧನಾ ಸಮಿತಿಗೆ ಸಲ್ಲಿಸಲಿದ್ದಾರೆ ಎಂದು ಹಂಪಿ ಕನ್ನಡ ವಿವಿ ಕುಲಸಚಿವ ಡಾ.ಸುಬ್ಬಣ್ಣ ರೈ ಹೇಳಿದ್ದಾರೆ. 
 

Follow Us:
Download App:
  • android
  • ios