Asianet Suvarna News Asianet Suvarna News

Kannada University ಘಟಿಕೋತ್ಸವ: ಭಾರತ ಜ್ಞಾನದ ವಿಶ್ವಗುರು ಆಗಲಿ: ರಾಜ್ಯಪಾಲ

ಭಾರತವನ್ನು ಜ್ಞಾನದ ವಿಶ್ವಗುರು ಮಾಡಲು ನಾವೆಲ್ಲರೂ ಶ್ರಮಿಸಬೇಕಿದೆ. ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಎನ್‌ಇಪಿಯಲ್ಲಿ ಮಾತೃಭಾಷೆ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

Let India become the vishwa guru of knowledge says Governor rav
Author
First Published Dec 9, 2022, 11:06 AM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಡಿ.9) : ಭಾರತವನ್ನು ಜ್ಞಾನದ ವಿಶ್ವಗುರು ಮಾಡಲು ನಾವೆಲ್ಲರೂ ಶ್ರಮಿಸಬೇಕಿದೆ. ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಎನ್‌ಇಪಿಯಲ್ಲಿ ಮಾತೃಭಾಷೆ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 31ನೇ ನುಡಿಹಬ್ಬ-ಘಟಿಕೋತ್ಸವದಲ್ಲಿ ನಾಡೋಜ ಗೌರವ ಪದವಿ ಪ್ರದಾನ ಮಾಡಿ ಅಧ್ಯಕ್ಷೀಯ ಭಾಷಣ ಮಾಡಿದರು. ಭಾರತದ ಜ್ಞಾನಪರಂಪರೆಯನ್ನು ಮರುಸ್ಥಾಪಿಸಿ, ಜ್ಞಾನದ ಗತವೈಭವ ಮರು ಸ್ಥಾಪಿಸಬೇಕಿದೆ. ಇದಕ್ಕಾಗಿ ಏಕ ಭಾರತ, ಶ್ರೇಷ್ಠ ಭಾರತ ಧ್ಯೇಯವಾಕ್ಯದೊಂದಿಗೆ ನಾವು ಮುನ್ನಡೆಯಬೇಕಿದೆ. ಹಾಗಾಗಿ ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿರುವ ಜ್ಞಾನವನ್ನು ಪುನರ್‌ಜೀವನಗೊಳಿಸಿ ಮುನ್ನಡೆಯಬೇಕಿದೆ ಎಂದರು.

 

 ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳಿ: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌

ದೇಸಿ ಶಿಕ್ಷಣಕ್ಕೆ ಒತ್ತು:

ಹಂಪಿ ಕನ್ನಡ ವಿಶ್ವವಿದ್ಯಾಲಯ ಜ್ಞಾನವನ್ನು ಬೋಧಿಸುವ ವಿಶ್ವವಿದ್ಯಾಲಯವಾಗದೇ, ಜ್ಞಾನ ಸೃಜಿಸುವ ವಿವಿ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿವಿಯ ಮೊದಲ ಕುಲಪತಿ ಡಾ. ಚಂದ್ರಶೇಖರ ಕಂಬಾರ ಆಶಯದಂತೆ ವಿವಿ ಮುನ್ನಡೆಯತ್ತಿರುವುದು ಅತ್ಯಂತ ಹರ್ಷದಾಯಕ ಸಂಗತಿಯಾಗಿದೆ. ಕನ್ನಡ ಭಾಷೆಯಲ್ಲಿ ದೇಸಿ ಜ್ಞಾನ ಸಂಶೋಧನೆ ಮಾಡಿ, ಅದನ್ನು ಜತನ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ವಿವಿಯ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ 5000ಕ್ಕೂ ಅಧಿಕ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಜ್ಞಾನ ಭಂಡಾರವನ್ನು ಸಂಗ್ರಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಮುಖಾಮುಖಿ:

ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ವ ಹಾಗೂ ದೇಶದಲ್ಲಿ ನಡೆಯತ್ತಿರುವ ವಿದ್ಯಮಾನಗಳಿಗೆ ಮುಖಾಮುಖಿಯಾಗಿ; ವರ್ತಮಾನದಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ನಮ್ಮ ದೇಸಿ ಪರಂಪರೆಯನ್ನು ಅಧ್ಯಯನ ಮಾಡುತ್ತಿರುವುದು ಮಾದರಿಯಾಗಿದೆ. ಕನ್ನಡ ಭಾಷೆಯಲ್ಲೇ ಸಂಶೋಧನೆ ಮಾಡಿ; ಜ್ಞಾನ ಸೃಜಿಸುತ್ತಿರುವುದು ಎಲ್ಲರಿಗೂ ಅನುಕರಣೀಯವಾಗಿದೆ ಎಂದರು.

ತಾಯಿ-ತಂದೆ ಮರೆಯದಿರಿ:

ಕನ್ನಡ ವಿವಿಯಿಂದ ಪಿಎಚ್‌ಡಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆದ ಸಂಶೋಧನಾ ವಿದ್ಯಾರ್ಥಿಗಳು ತಮ್ಮನ್ನು ಓದಿಸಿದ ತಂದೆ-ತಾಯಿಗಳನ್ನು ಮರೆಯದೇ, ಅವರಿಗೆ ಗೌರವ ನೀಡಬೇಕು. ಜತೆಗೆ ನಿಮಗೆ ದೊರೆತ ಪದವಿಗೆ ತಕ್ಕುದ್ದಾಗಿ ನಡೆದುಕೊಂಡು; ಭಾರತವನ್ನು ಶ್ರೇಷ್ಠ ಹಾಗೂ ಶಕ್ತಿಶಾಲಿ ಮತ್ತು ಜ್ಞಾನದ ಗುರುವನ್ನಾಗಿ ಮಾಡಲು ಮುಂದಿನ ಪೀಳಿಗೆಗೆ ಜ್ಞಾನ ಪಸರಿಸಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪೊ›. ಮಲ್ಲೇಪುರಂ ಜಿ. ವೆಂಕಟೇಶ ಘಟಿಕೋತ್ಸವ ಭಾಷಣ ಮಾಡಿದರು. ಕನ್ನಡ ವಿವಿ ಕುಲಪತಿ ಡಾ. ಸ.ಚಿ. ರಮೇಶ, ಕುಲಸಚಿವ ಡಾ. ಸುಬ್ಬಣ್ಣ ರೈ ಸೇರಿದಂತೆ ಸಿಂಡಿಕೇಟ್‌ ಸದಸ್ಯರು, ವಿವಿಧ ನಿಕಾಯಗಳ ಡೀನ್‌ರು ಇದ್ದರು.

ಕನ್ನಡದಲ್ಲೇ ಭಾಷಣ ಆರಂಭ:

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಕನ್ನಡದಲ್ಲೇ ನುಡಿಹಬ್ಬಕ್ಕೆ ಚಾಲನೆ ನೀಡಿದರು. ಜತೆಗೆ ನುಡಿಹಬ್ಬದ ಪ್ರತಿ ಘೋಷಣೆಯನ್ನು ಕನ್ನಡದಲ್ಲೇ ಹೇಳಿದರು. ಪ್ರತಿಜ್ಞಾವಿಧಿಯನ್ನೂ ಕನ್ನಡದಲ್ಲೇ ಬೋಧಿಸಿದರು. ಅಧ್ಯಕ್ಷೀಯ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿದರು. ಬಳಿಕ ಹಿಂದಿಯಲ್ಲಿ ಮಾತನಾಡಿದರು.

ಮೂವರಿಗೆ ನಾಡೋಜ ಪದವಿ ಪ್ರದಾನ:

ಸಾಹಿತ್ಯ ಹಾಗೂ ಸಮಾಜಸೇವಾ ಕ್ಷೇತ್ರದಿಂದ ಕೃಷ್ಣಪ್ಪ ಜಿ. ಹಾಗೂ ಎಸ್‌. ಷಡಕ್ಷರಿ ಮತ್ತು ಆರೋಗ್ಯ ಕ್ಷೇತ್ರದಿಂದ ಡಾ. ಸಿ.ಎನ್‌. ಮಂಜುನಾಥ್‌ ಅವರಿಗೆ ರಾಜ್ಯಪಾಲರು ನಾಡೋಜ ಪದವಿ ಪ್ರದಾನ ಮಾಡಿದರು.

ನಾಡೋಜ ಎಂದರೇನು?

ಆದಿಕವಿ ಪಂಪನಿಗೆ ಸಂಬಂಧಿಸಿದ ನಾಡೋಜ ಎಂಬ ಪದ ಕರ್ನಾಟಕದ ಪರಂಪರೆಯ ಸಾತತ್ಯವನ್ನೂ ನಾಡನ್ನು ಕಟ್ಟಿದವರು ಎಂಬ ಮನ್ನಣೆಯನ್ನೂ ಸೂಚಿಸುವಂತಾಗಿದೆ.

ಪಿಎಚ್‌ಡಿ, ಡಿಲಿಟ್‌ ಪದವಿ ಪ್ರದಾನ:

ಕನ್ನಡ ವಿವಿಯಲ್ಲಿ ಒಟ್ಟು 321 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆದರು. ಇದರಲ್ಲಿ ಒಂದು ಡಿಲಿಟ್‌, 136 ಪಿಎಚ್‌ಡಿ ಹಾಗೂ 23 ಎಂಫಿಲ್‌ ಸೇರಿದಂತೆ ವಿವಿಧ ಪದವಿಗಳನ್ನು ವಿದ್ಯಾರ್ಥಿಗಳು ಪಡೆದರು.

ದೇಸಿ ಮಾದರಿ ಘಟಿಕೋತ್ಸವ:

ಕನ್ನಡ ವಿವಿಯಲ್ಲಿ ಮೊದಲಿನಿಂದಲೂ ದೇಸಿ ಮಾದರಿಯಲ್ಲಿ ಘಟಿಕೋತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, 31ನೇ ನುಡಿಹಬ್ಬದಲ್ಲೂ ದೇಸಿ ಮಾದರಿಯಲ್ಲಿ ಘಟಿಕೋತ್ಸವದ ಮೆರವಣಿಗೆ ಮಾಡಿ ವೇದಿಕೆಯಲ್ಲಿ ಕಲಶ ಸ್ಥಾಪನೆ ಮಾಡಲಾಯಿತು. ನಾಡೋಜ ಪದವಿ ಸ್ವೀಕರಿಸುವವರು ಹಾಗೂ ಪದವೀಧರರು ಮತ್ತು ಅತಿಥಿಗಣ್ಯರು ಬಿಳಿಶಾಲು ಧರಿಸಿದ್ದರು. ಈ ಮೂಲಕ ದೇಸಿ ಸಂಪ್ರದಾಯವನ್ನು ಮುನ್ನಡೆಸಲಾಯಿತು.

ದೇವೇಗೌಡರ ಹಿರಿಯ ಪುತ್ರಿ ಆಗಮನ:

ನಾಡೋಜ ಪದವಿಯನ್ನು ಡಾ. ಸಿ.ಎನ್‌. ಮಂಜುನಾಥ್‌ ಅವರು ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪುತ್ರಿ ಅನಸೂಯಾ ಅವರು ಆಗಮಿಸಿದ್ದರು.

ಸಾರ್ವಜನಿಕರಿಂದ ವೀಕ್ಷಣೆ:

ಕನ್ನಡ ವಿವಿಯ ನುಡಿಹಬ್ಬದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಆಗಮಿಸಿ ನುಡಿಹಬ್ಬ ಆಗಮಿಸಿದರು. ಗ್ರಾಮೀಣ ಸೊಗಡಿನ ಉಡುಗೆ-ತೊಡಗಿನಲ್ಲಿ ಜನರು ಆಗಮಿಸಿದ್ದರು. ಲಂಬಾಣಿ ದಿರಿಸು ಸೇರಿದಂತೆ ಉತ್ತರ ಕರ್ನಾಟಕ ಶೈಲಿಯ ಉಡುಗೆಯಲ್ಲಿ ಜನ ಕಂಗೊಳಿಸಿದರು.

ಕನ್ನಡ ಅನ್ನದ ಭಾಷೆಯಾಗಲಿ: ಮಲ್ಲೇಪುರಂ ಜಿ. ವೆಂಕಟೇಶ

ಉನ್ನತ ಶಿಕ್ಷಣದಲ್ಲಿ ಕನ್ನಡವು ಸರ್ವಜ್ಞಾನಗಳ ತಾಯ್ನುಡಿ ಆಗಬೇಕಾದರೆ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡವು ಜ್ಞಾನದ ಭಾಷೆಯಾಗಿ ರೂಪುಗೊಳ್ಳಬೇಕಿದೆ. ಕನ್ನಡವು ಅನ್ನದ ಭಾಷೆಯಾಗಿಸಲು ಜ್ಞಾನದ ಭಾಷೆಯನ್ನಾಗಿಸಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೊ›. ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು. ಕನ್ನಡ ವಿಶ್ವವಿದ್ಯಾಲಯದ 31ನೇ ನುಡಿಹಬ್ಬದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಹಂತಗಳಲ್ಲಿ ಶೇ. 90ರಷ್ಟುಇಂಗ್ಲಿಷ್‌ಮಯವೇ ಆಗಿರುವಾಗ ‘ಲೋಕೋಪಯೋಗಿ‘ ಭಾಷೆಯಾಗಿ ಕನ್ನಡದ ಬಳಕೆ ಮತ್ತು ಉಳಿವು ಎಷ್ಟಿದೆ ಎಂಬುದನ್ನು ಚಿಂತಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.

ಇಂಗ್ಲಿಷ್‌ ಭಾಷೆಯ ಕಬಂಧದಲ್ಲಿ ಕನ್ನಡ ಸೊರಗುತ್ತಿದೆ. ನಮ್ಮ ನಾಡಿನ ಮಕ್ಕಳು ಇಂಗ್ಲಿಷ್‌ ಎಂಬ ಪೂತನಿಯ ಬಾಹುಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ನಮ್ಮ ಬೌದ್ಧಿಕ ಬೆಳವಣಿಗೆ ಮತ್ತು ಸೃಜನಾತ್ಮಕ ಬೆಳವಣಿಗೆಗಳು ಕಾಲಕ್ರಮೇಣ ಕ್ಷಯಿಸುವುದರಲ್ಲಿ ಸಂಶಯವಿಲ್ಲ. ಯಾವ ನಾಡಿನಲ್ಲಿ ಮಾತೃಭಾಷೆಯು ತನ್ನ ಸ್ಥಾನವನ್ನು ಕಳೆದುಕೊಂಡು ಇನ್ನೊಂದು ಭಾಷೆಯ ಕಬಂಧಗಳಲ್ಲಿ ಸಿಕ್ಕಿಹಾಕಿಕೊಂಡರೆ ಆಗ ಕನ್ನಡ ಭಾಷೆಯು ದುರಂತಕ್ಕೆ ಒಳಗಾಗುವುದು ನೂರಕ್ಕೆ ನೂರರಷ್ಟುಸತ್ಯ ಎಂದರು.

ಭಾಷೆಯ ಮೂರು ಸ್ತರಗಳಲ್ಲಿ ಭಾವೋಪಯೋಗಿಯು ವೈಯಕ್ತಿಕವಾದುದು. ಅದು ಸಾಹಿತ್ಯ ಮತ್ತು ಇತರ ಜ್ಞಾನಶಿಸ್ತುಗಳ ಅಭಿವ್ಯಕ್ತಿ ಮಾಧ್ಯಮ ಎಂಬುದು ನಿಶ್ಚಿತ. ಇನ್ನು ಜ್ಞಾನೋಪಯೋಗಿ ಸೃಜನೇತರ ನೆಲೆಯಲ್ಲಿ ವಿವಿಧ ಸ್ತರಗಳಲ್ಲಿ ಬೆಳೆಯುವಂಥದ್ದೇ. ಆದರೆ, ನಮ್ಮ ಭಾಷೆಯು ಲೋಕೋಪಯೋಗಿ ನೆಲೆಯಲ್ಲಿ ಅಭಿವ್ಯಕ್ತಿಯ ಸಂವಹನದ ಸಮಸ್ತ ಸಂಗತಿಗಳಲ್ಲಿ ಹಾಸುಹೊಕ್ಕಾಗದೆ ಹೋದರೆ, ಕನ್ನಡ ನುಡಿಯು ಕ್ಷೀಣಿಸುವುದಂತೂ ಖಂಡಿತ ಎಂದು ಕಳವಳ ವ್ಯಕ್ತಪಡಿಸಿದರು.

ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ನಗರ ಪ್ರದೇಶಗಳಲ್ಲಿ ಕನ್ನಡವನ್ನು ಬಳಸುವವರ ಸಂಖ್ಯೆ ದಿನ ದಿನಕ್ಕೂ ಇಳಿಮುಖವಾಗುತ್ತಿದೆ. ಇಲ್ಲಿ ವಲಸೆ ಬಂದ ನಾಗರಿಕರು ಮತ್ತು ಇತರೆ ಭಾಷಿಕರು ಒಂದು ನೆಲೆಯಲ್ಲಿ ಕನ್ನಡ ಮಾತಿನ ಬಳಕೆಗೆ ಎರವಾಗುತ್ತಿದ್ದಾರೆ. ಕನ್ನಡ ನುಡಿಯು ಮುಂದಿನ ಭವಿಷ್ಯದಲ್ಲಿ ಶೈಕ್ಷಣಿಕ ನೆಲೆಯಲ್ಲೂ ಸಾಮಾಜಿಕ ಸ್ತರದಲ್ಲೂ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ರೇಡಿಯೋ ವಿವಿಧ ಖಾಸಗಿ ದೂರದರ್ಶನದ ಚಾನೆಲ್‌ಗಳಲ್ಲಿ ಕಂಗ್ಲಿಷ್‌ ಬಳಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಕನ್ನಡ ಭಾಷಾ ಬಳಕೆಯ ವಿವಿಧ ಸಾಧ್ಯತೆಗಳು ಇಳಿಮುಖ ಆಗುತ್ತಿರುವಂತೆ ಜ್ಞಾನದ ವಿವಿಧ ನೆಲೆಗಳಲ್ಲೂ ಭಾವಸ್ತರದ ಉನ್ನತ ನೆಲೆಗಳಲ್ಲೂ ಕನ್ನಡವು ತನ್ನದೇ ಆದ ಅಸ್ಮಿತೆಯನ್ನೂ ಅಸ್ತಿತ್ವವನ್ನೂ ಕಳೆದುಕೊಳ್ಳುವ ಅಪಾಯ ಇದೀಗ ನಮಗೆ ಎದುರಾಗಿದೆ ಎಂದು ವಿಷಾದಿಸಿದರು.

Karnataka Folklore University ಹಿಂದಿನ ಅಧ್ಯಯನ ಭವಿಷ್ಯದ ಅಭಿವೃದ್ಧಿಗೆ ಕೀಲಿ ಕೈ: ರಾಜ್ಯಪಾಲ ಗೆಹ್ಲೋಟ್

ಅಭಿವ್ಯಕ್ತಿ ಮಾಧ್ಯಮದ ಎಲ್ಲ ಸ್ತರಗಳಲ್ಲೂ ಕನ್ನಡದ ಬಳಕೆ ಪ್ರಧಾನವಾಗಬೇಕು. ನಮ್ಮ ಸಾಂಸ್ಕೃತಿಕ ಆಚರಣೆಗಳಲ್ಲಿ ಕನ್ನಡವೇ ನೆಲೆಗೊಳ್ಳಬೇಕು. ನಾವು ಎಷ್ಟೆಷ್ಟುಸ್ತರಗಳಲ್ಲಿ ಬಳಸುತ್ತೇವೆಯೋ ಅಷ್ಟಷ್ಟರ ಮಟ್ಟಿಗೆ ಕನ್ನಡವು ಗಣ್ಯಮಾನ್ಯವಾಗುತ್ತ ಹೋಗುತ್ತದೆ. ಆಗ ಇದು ಅನ್ನದ ಭಾಷೆಯಾಗಿ ಉಳಿಯಲೂ ಸಾಧ್ಯವಾಗುತ್ತದೆ. ಕನ್ನಡವನ್ನು ನಮ್ಮ ಭಾವದ ಭಾಷೆ, ಜ್ಞಾನದಭಾಷೆ ಮತ್ತು ಲೋಕದ ಭಾಷೆಯಾಗಿ ಸಂವರ್ಧಿಸಿಕೊಂಡಾಗ ಅನ್ನದ ಭಾಷೆಯಾಗಿ ಉಳಿಯಲು ಸಾಧ್ಯವಾಗಲಿದೆ ಎಂದರು.

ಕುಲಪತಿ ಡಾ. ಸ.ಚಿ. ರಮೇಶ ಮಾತನಾಡಿ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೆಕೆಆರ್‌ಡಿಬಿಯಿಂದ .19 ಕೋಟಿಗೂ ಅಧಿಕ ಹಣ ಬಂದಿದೆ. ಸಮಾಜ ಕಲ್ಯಾಣ ಇಲಾಖೆಯಿಂದಲೂ .3 ಕೋಟಿ ಶಿಷ್ಯವೇತನಕ್ಕೆ ಹಣ ಬಂದಿದೆ. ಕನ್ನಡ ವಿವಿ ಜ್ಞಾನ ಸೃಜಿಸುವ ಕಾರ್ಯ ಮಾಡುತ್ತಿದ್ದು, ತನ್ನ ಆಶಯವನ್ನು ಉಳಿಸಿಕೊಂಡು ಮುನ್ನಡೆಯತ್ತಿದೆ ಎಂದರು.

Follow Us:
Download App:
  • android
  • ios