ಕೆಪಿಎಸ್‌ಸಿಯಿಂದ ಮುಂದುವರೆದ ವಿಳಂಬ ನೀತಿ. ತೆರಿಗೆ ಪರಿವೀಕ್ಷಕರ ನೇಮಕ ಫಲಿತಾಂಶ ಪ್ರಕಟಕ್ಕೆ ಆಗ್ರಹ. ಕಾರ್ಯದರ್ಶಿ ಹುದ್ದೆಗೆ ಬೇಕಿದೆ ಪೂರ್ಣ ಪ್ರಮಾಣದ ಅಧಿಕಾರ.

ಬೆಂಗಳೂರು (ಮಾ.20): ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ವಾಣಿಜ್ಯ ತೆರಿಗೆ ಪರಿವೀಕ್ಷಕರ 245 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆದು 2 ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸದ ಕೆಪಿಎಸ್‌ಸಿ ವಿಳಂಬ ಧೋರಣಿ ವಿರುದ್ಧ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜ.21 ಪರೀಕ್ಷೆ ನಡೆಸಲಾಗಿತ್ತು. ಕೀ ಉತ್ತರಗಳು, ಪರಿಷ್ಕೃತ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದ್ದು, ಆಕ್ಷೇಪಣೆ ಅವಧಿಯು ಮುಕ್ತಾಯಗೊಂಡು ತಿಂಗಳು ಕಳೆದಿದೆ. ಆದರೂ, ಫಲಿತಾಂಶ ಪ್ರಕಟಣೆಯ ಬಗ್ಗೆ ಕೆಪಿಎಸ್‌ಸಿಯಿಂದ ಯಾವುದೇ ಮಾಹಿತಿ ಇಲ್ಲ. ವಿಳಂಬ ನೀತಿಗೆ ಹೆಸರಾಗಿರುವ ಕೆಪಿಎಸ್‌ಸಿ, ಆ ಹಣೆಪಟ್ಟಿಯಿಂದ ಹೊರ ಬರಬೇಕು. ಬೇಗ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಆಕಾಂಕ್ಷಿಗಳು ಜಾಲತಾಣ ಎಕ್ಸ್‌ನಲ್ಲಿ ಮಂಗಳವಾರ ಅಭಿಯಾನ ನಡೆಸಿದರು.

ಸರ್ಕಾರಿ ಮಾದರಿ ಪಬ್ಲಿಕ್ ಶಾಲೆಗಳಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮ, ರಾಮನಗರ ಜಿಲ್ಲೆಯಿಂದ ಆರಂಭ

ಹಿಂದಿನ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರು ಆರು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ, ಅಧ್ಯಕ್ಷರು, ಸದಸ್ಯರೊಂದಿಗಿನ ಸಂಘರ್ಷ ಹಿನ್ನೆಲೆಯಲ್ಲಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ.

ಹಲವು ಫಲಿತಾಂಶ ಪ್ರಕಟ ಬಾಕಿ: 2023ರ ಡಿಸೆಂಬರ್‌ನಲ್ಲಿ ನಡೆದ ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳು, ಪೌರಾಡಳಿತ ಇಲಾಖೆಯಲ್ಲಿ ನೀರು ಸರಬರಾಜು ಆಪರೇಟರ್ ಹುದ್ದೆಗಳು, ಸಹಕಾರ ಇಲಾಖೆಯಲ್ಲಿ ಸಹಕಾರಿ ಪರಿವೀಕ್ಷಕರ ಹುದ್ದೆಗಳಿಗೆ ಪರೀಕ್ಷೆ ನಡೆದು ಹಲವು ತಿಂಗಳಾಗಿವೆ. ಫಲಿತಾಂಶ ಮಾತ್ರ ಬಿಡುಗಡೆ ಆಗಿಲ್ಲ. ಹೀಗಾಗಿ, ಈ ಹುದ್ದೆಗಳಿಗೂ ತ್ವರಿತವಾಗಿ ಫಲಿತಾಂಶ ಪ್ರಕಟಿಸಬೇಕು ಎಂದು ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಕೆಪಿಎಸ್‌ಸಿಯಿಂದ ಭರ್ಜರಿ ನೇಮಕಾತಿ, ವಿವಿಧ ಇಲಾಖೆಯಲ್ಲಿ 2500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ!

ಪೂರ್ಣ ಪ್ರಮಾಣದ ಕಾರ್ಯದರ್ಶಿ ಇಲ್ಲ: ಹಿಂದಿನ ಕಾರ್ಯದರ್ಶಿ ಲತಾಕುಮಾರಿ ಅವರನ್ನು ವರ್ಗಾವಣೆಗೊಳಿಸಿದ ಸರ್ಕಾರ, ಆ ಹುದ್ದೆಗೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಕೆ. ರಾಕೇಶ್ ಕುಮಾರ್ ಅವರಿಗೆ ಹೆಚ್ಚುವರಿ ಹೊಣೆ ನೀಡಿದೆ. ಮತ್ತೊಂದೆಡೆ ಕೆಪಿಎಸ್‌ಸಿ ಇತ್ತೀಚೆಗೆ ಹಲವು ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸಿದೆ. ಪರೀಕ್ಷೆ ನಡೆಸುವುದು, ಫಲಿತಾಂಶ ಪ್ರಕಟಣೆ ಸೇರಿದಂತೆ ಅನೇಕ ಕೆಲಸಗಳು ಆಯೋಗದಲ್ಲಿ ಬಾಕಿ ಉಳಿದುಕೊಂಡಿವೆ. ಆದರೆ, ಕಾರ್ಯದರ್ಶಿ ಹುದ್ದೆಗೆ ಪೂರ್ಣ ಪ್ರಮಾಣದ ಅಧಿಕಾರಿ ಇಲ್ಲದಿರುವುದು ಕೆಪಿಎಸ್‌ಸಿಯಲ್ಲಿನ ಚಟುವಟಿಕೆಗಳು ವಿಳಂಬವಾಗಲು ಕಾರಣವಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.