ಸರ್ಕಾರಿ ಮಾದರಿ ಪಬ್ಲಿಕ್ ಶಾಲೆಗಳಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮ, ರಾಮನಗರ ಜಿಲ್ಲೆಯಿಂದ ಆರಂಭ
ಖಾಸಗಿ ಪಬ್ಲಿಕ್ ಶಾಲೆಗಳಲ್ಲಿ ಇರುವಂತೆ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮಗಳಿಗೆ ಸಮನಾಗಿಯೇ ಸರ್ಕಾರಿ ಮಾದರಿ ಪಬ್ಲಿಕ್ ಶಾಲೆಗಳಲ್ಲೂ ಪಠ್ಯಕ್ರಮ ಇರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು/ ರಾಮನಗರ: ಖಾಸಗಿ ಪಬ್ಲಿಕ್ ಶಾಲೆಗಳಲ್ಲಿ ಇರುವಂತೆ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮಗಳಿಗೆ ಸಮನಾಗಿಯೇ ಸರ್ಕಾರಿ ಮಾದರಿ ಪಬ್ಲಿಕ್ ಶಾಲೆಗಳಲ್ಲೂ ಪಠ್ಯಕ್ರಮ ಇರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸರ್ಕಾರದಿಂದ ನಾವು ಶಾಲೆಯ ಮಾದರಿ ಹಾಗೂ ನಕ್ಷೆಗಳನ್ನು ನೀಡುತ್ತೇವೆ. ಇದರಲ್ಲಿ ಏನಾದರೂ ಬದಲಾವಣೆ ಮಾಡುವುದಿದ್ದರೆ ಬದಲಾವಣೆ ಮಾಡಿ ಕಟ್ಟಬಹುದು. 2-3 ಪಂಚಾಯ್ತಿ ವ್ಯಾಪ್ತಿಯಲ್ಲಿ ಸೇರಿ ಒಂದು ಶಾಲೆ ನಿರ್ಮಾಣ ಆಗಲಿದೆ ಎಂದು ಅವರು ಹೇಳಿದರು.
ಈ ಶಾಲೆಗಳ ಒಡೆತನ ಖಾಸಗಿ ಶಾಲೆಗಳದ್ದಾಗಿರುತ್ತದೆಯೇ ಎಂಬ ಪ್ರಶ್ನೆಗೆ ಈ ಶಾಲೆಗಳ ಒಡೆತನ ಖಾಸಗಿಯವರಿಗೆ ನೀಡಿದರೆ ಹಣ ವಸೂಲಿ ಮಾಡಲು ಆರಂಭಿಸುತ್ತಾರೆ. ಹೀಗಾಗಿ ಈ ಶಾಲೆಗಳ ಒಡೆತನ ಸರ್ಕಾರದ್ದಾಗಿರಲಿದೆ. ಸರ್ಕಾರಿ ಶಾಲೆಗಳಲ್ಲಿ ಪಬ್ಲಿಕ್ ಶಾಲೆಗಳ ಗುಣಮಟ್ಟವಿರಲಿದೆ ಎಂದರು.
ಸಿಇಟಿಗೆ ಈ ಬಾರಿ ದಾಖಲೆಯ 3.75 ಲಕ್ಷ ಮಂದಿ ನೋಂದಣಿ
ನಮ್ಮ ಸರ್ಕಾರ 2 ಸಾವಿರ ಶಾಲೆಗಳ ನಿರ್ಮಾಣದ ಗುರಿ ಹೊಂದಿದ್ದು, ಮುಂದಿನ ವರ್ಷದಿಂದ ಬೇರೆ ಬೇರೆ ಜಿಲ್ಲೆಗಳಲ್ಲೂ ಆರಂಭಿಸಲಿದ್ದೇವೆ. ಈ ಶಾಲೆಗಳ ನಿರ್ಮಾಣಕ್ಕೆ ಹಣ ನೀಡಲು ಅನೇಕ ಕೈಗಾರಿಕೆಗಳು ಮುಂದೆ ಬಂದಿದ್ದು, ಸಿಎಸ್ಆರ್ ನಿಧಿಯನ್ನು ಶಾಲೆಗಳ ನಿರ್ಮಾಣಕ್ಕೆ ಬಳಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಖಾಸಗಿ ಕಂಪನಿಗಳ ಸಿಎಸ್ ಆರ್ ನಿಧಿಯಿಂದ ರಾಜ್ಯದಲ್ಲಿ 2 ಸಾವಿರ ಮಾದರಿ ಪಬ್ಲಿಕ್ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಪ್ರಾಯೋಗಿಕವಾಗಿ ರಾಮನಗರ ಜಿಲ್ಲೆಯಲ್ಲಿ 20 ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ರಾಮನಗರದಲ್ಲಿ ಮಾದರಿ ಪಬ್ಲಿಕ್ ಶಾಲೆಗಳನ್ನು ತೆರೆಯುವ ಸಂಬಂಧ ಖಾಸಗಿ ಕಂಪನಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾದರಿ ಪಬ್ಲಿಕ್ ಶಾಲೆಗಳ ನಿರ್ಮಾಣ ದೇಶದಲ್ಲಿಯೇ ಒಂದು ಮಾದರಿ ಪರಿಕಲ್ಪನೆಯಾಗಿದೆ. ಇದನ್ನು ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಹೇಳಿದ್ದೆವು. ನಮ್ಮ ಬಜೆಟ್‌ನಲ್ಲೂ ಸಿಎಂ ಸಿದ್ದರಾಮಯ್ಯ ಶಾಲೆಗಳ ನಿರ್ಮಾಣದ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ 2 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 2 ಸಾವಿರ ಮಾದರಿ ಪಬ್ಲಿಕ್ ಶಾಲೆಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.
ಕೆಪಿಎಸ್‌ಸಿಯಿಂದ ಭರ್ಜರಿ ನೇಮಕಾತಿ, ವಿವಿಧ ಇಲಾಖೆಯಲ್ಲಿ 2500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ!
ರಾಜ್ಯದಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹಳ್ಳಿಗಳಿಂದ ಬೆಂಗಳೂರು ಹಾಗೂ ಇತರೆ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ನಮ್ಮ ಸರ್ಕಾರ ಮಾದರಿ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸಿದೆ. ಇದಕ್ಕಾಗಿ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 5 ಜನ ಸಚಿವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಶಾಲೆಗಳ ನಿರ್ಮಾಣಕ್ಕೆ ಸರ್ಕಾರದ ಹಣವನ್ನು ಬಳಸದೇ, ಸಿಎಸ್ಆರ್ ನಿಧಿಯಿಂದ ನಿರ್ಮಿಸಲಾಗುತ್ತಿದೆ. ಪ್ರತಿ ಶಾಲೆಗೆ 7ರಿಂದ 10 ಕೋಟಿ ವೆಚ್ಚ ಮಾಡಲಾಗುವುದು. ಈ ಶಾಲೆಯಲ್ಲಿ 800ರಿಂದ 1200 ಮಕ್ಕಳು ವ್ಯಾಸಂಗ ಮಾಡಬಹುದು. ಈ ಶಾಲೆಗಳು ಎಲ್ಲೆಲ್ಲಿ ನಿರ್ಮಾಣವಾಗಲಿದೆ ಎಂಬ ಪಟ್ಟಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದರು.
(((ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಚರ್ಚಿಸಿದ್ದು ಅವರು ಬೋಧಕ ಸಿಬ್ಬಂದಿ ನೀಡಲಿದ್ದಾರೆ. ನಾನು 3 ಶಾಲೆಗಳನ್ನು ನಡೆಸುತ್ತಿದ್ದು, ಅವುಗಳ ಮೂಲಕ ನಾನೂ ಮೂರು ಪಬ್ಲಿಕ್ ಶಾಲೆಗಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಕೊರತೆ ಇರುವ ಶಿಕ್ಷಕರ ನೇಮಕಾತಿ ಮಾಡಿ ಅವರಿಗೆ ವೇತನ ನೀಡಲಾಗುವುದು. ಆ ಮೂಲಕ ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.
ಮಾದರಿ ಶಾಲೆಗಳಲ್ಲಿ ಆಧುನಿಕ ಸೌಲಭ್ಯ: ಮಾದರಿ ಪಬ್ಲಿಕ್ ಶಾಲೆಗಳು ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಗ್ರಂಥಾಲಯ, ಇಂಟರ್ ನೆಟ್, ಆಧುನಿಕ ಪ್ರಯೋಗಾಲಯಗಳು, ಕಲೆ ಮತ್ತು ಸಂಗೀತ ತರಬೇತಿ ಕೊಠಡಿ, ಕ್ರೀಡಾಂಗಣ, ಊಟದ ಕೊಠಡಿ, ಶೌಚಾಲಯ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತವೆ. ಎರಡರಿಂದ ಮೂರು ಪಂಚಾಯಿತಿಗೆ ಒಂದರಂತೆ ಮಾದರಿ ಪಬ್ಲಿಕ್ ಶಾಲೆಯನ್ನು ನಿರ್ಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು. ಈ ಶಾಲೆಗಳು ಸರ್ಕಾರಿ ಶಾಲೆಗಳೇ ಆಗಿದ್ದು, ಸರ್ಕಾರಿ ಆಡಳಿತ ಮಂಡಳಿಗಳೇ ಶಾಲೆಗಳನ್ನು ನಿರ್ವಹಣೆ ಮಾಡಲಿವೆ ಎಂದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲಾಗುವುದು. ನಗರದಲ್ಲಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ವರ್ಷಕ್ಕೆ 80 ಸಾವಿರದಿಂದ 1.50 ಲಕ್ಷದವರೆಗೂ ಶುಲ್ಕ ಪಾವತಿಸಬೇಕಿದೆ. ಗ್ರಾಮೀಣ ಮಕ್ಕಳಿಗೆ ಇಷ್ಟು ಶುಲ್ಕ ಪಾವತಿ ಮಾಡಲು ಆಗುವುದಿಲ್ಲ. ಹೀಗಾಗಿ ಸರ್ಕಾರ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಿದೆ ಎಂದರು.