Asianet Suvarna News Asianet Suvarna News

ಕೆಸೆಟ್‌ ಪರೀಕ್ಷೆಗೆ ಅಧಿಸೂಚನೆ, ಮಂಗಳೂರು ಪರೀಕ್ಷಾ ಕೇಂದ್ರ ಕೈಬಿಟ್ಟ ಕೆಇಎ ವಿರುದ್ಧ ಗಡಿನಾಡು ಕನ್ನಡಿಗರ ಆಕ್ರೋಶ

ಕೆಇಎ ಈ ಬಾರಿ ಕೆಸೆಟ್‌ 2024 ನಡೆಸಲು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಅತ್ಯಧಿಕ ಮಂದಿ ಪರೀಕ್ಷೆಗೆ ಹಾಜರಾಗುವ ದಕ್ಷಿಣ ಕನ್ನಡ ಪರೀಕ್ಷಾ ಕೇಂದ್ರವನ್ನೇ ಕೈಬಿಡಲಾಗಿದೆ. ಈ ಧೋರಣೆ ವಿರುದ್ಧ ಗಡಿನಾಡು ಕಾಸರಗೋಡಿನ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

kasaragod Kannadigas angry against KEA after notification for KSET examination  shifted mangaluru to udupi gow
Author
First Published Jul 20, 2024, 6:20 PM IST | Last Updated Jul 20, 2024, 6:20 PM IST

ಆತ್ಮಭೂಷಣ್‌

ಮಂಗಳೂರು (ಜು.20): ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಈ ಬಾರಿ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್‌)-2024 ನಡೆಸಲು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಅತ್ಯಧಿಕ ಮಂದಿ ಪರೀಕ್ಷೆಗೆ ಹಾಜರಾಗುವ ದಕ್ಷಿಣ ಕನ್ನಡ ಪರೀಕ್ಷಾ ಕೇಂದ್ರವನ್ನೇ ಕೈಬಿಡಲಾಗಿದೆ. ಅದರ ಬದಲು ನೆರೆಯ ಉಡುಪಿ ಜಿಲ್ಲೆಯನ್ನು ನಿಗದಿಪಡಿಸಲಾಗಿದೆ. ಕೆಇಎ ಧೋರಣೆ ವಿರುದ್ಧ ಗಡಿನಾಡು ಕಾಸರಗೋಡಿನ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಕೆಸೆಟ್‌ ಪರೀಕ್ಷೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಪರೀಕ್ಷಾ ಕೇಂದ್ರಗಳಿತ್ತು. ಸುಮಾರು 5,864 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದರು. ಇದರಲ್ಲಿ ಗಡಿನಾಡ ಕನ್ನಡಿಗ ಅಭ್ಯರ್ಥಿಗಳೂ ಇದ್ದರು. ಈ ಬಾರಿ ಕೆಸೆಟ್‌ ಪರೀಕ್ಷೆಗೆ ಕೆಇಎ ಜು.13ರಂದು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ದಕ್ಷಿಣ ಕನ್ನಡಜಿಲ್ಲೆಯನ್ನು ಕೈಬಿಟ್ಟು ಉಡುಪಿಯನ್ನು ಸೇರಿಸಲಾಗಿದೆ. ಕೆಇಎ ನಿಲುವು ದಕ್ಷಿಣ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳ ಅಚ್ಚರಿಗೆ ಕಾರಣವಾದರೆ, ಗಡಿನಾಡ ಕನ್ನಡಿಗ ಅಭ್ಯರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ.

ಸುಪ್ರೀಂ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ನೀಟ್‌ ಫಲಿತಾಂಶ ಪ್ರಕಟ, ವಿದ್ಯಾರ್ಥಿಗಳ ಗುರುತು ಗೌಪ್ಯವಿಟ್ಟ ಎನ್‌ಟಿಎ

ಈ ಬಾರಿ ಜು.22ರಂದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಆಗಸ್ಟ್‌ 22ರಂದು ಕೊನೆ ದಿನವಾಗಿರುತ್ತದೆ. ಆಗಸ್ಟ್‌ 26ರಂದು ಶುಲ್ಕ ಪಾವತಿಗೆ ಕೊನೆ ದಿನವಾಗಿದ್ದು, ನವೆಂಬರ್‌ 24ರಂದು ಕೆಸೆಟ್‌ ಪರೀಕ್ಷೆ ನಡೆಯಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ದಕ್ಷಿಣ ಕನ್ನಡ ಪರೀಕ್ಷಾ ಕೇಂದ್ರ ಯಾಕಿಲ್ಲ?: ಕೋವಿಡ್‌ ವರ್ಷಗಳಲ್ಲಿ ಕೆಸೆಟ್‌ ಪರೀಕ್ಷೆ ನಡೆದಿರಲಿಲ್ಲ. ಸಾಮಾನ್ಯವಾಗಿ ಸರ್ವಋತು ಸಂಪರ್ಕದ ಜಿಲ್ಲಾ ಕೇಂದ್ರವಾಗಿರುವ ಮಂಗಳೂರಿನಲ್ಲಿ ಎಲ್ಲ ರೀತಿಯ ಅರ್ಹತಾ ಪರೀಕ್ಷೆಗಳು ನಡೆಯುತ್ತವೆ. ಇದಕ್ಕೆ ಕೆಸೆಟ್‌ ಕೂಡ ಹೊರತಾಗಿಲ್ಲ. ಕಳೆದ ವರ್ಷ ಸುಸೂತ್ರವಾಗಿ 13 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿರಬೇಕಾದರೆ, ಈ ಬಾರಿ ಏಕಾಏಕಿ ದಕ್ಷಿಣ ಕನ್ನಡಜಿಲ್ಲಾ ಪರೀಕ್ಷಾ ಕೇಂದ್ರವನ್ನು ಕೈಬಿಟ್ಟಿರುವುದು ಅರ್ಥವಾಗದ ಸಂಗತಿಯಾಗಿದೆ ಎನ್ನುತ್ತಾರೆ ಅಭ್ಯರ್ಥಿಗಳು. ಅದರಲ್ಲೂ ಗಡಿನಾಡು ಕಾಸರಗೋಡಿನ ಕನ್ನಡಿಗ ಅಭ್ಯರ್ಥಿಗಳು ಕೆಸೆಟ್‌ ಪರೀಕ್ಷೆಗೆ ಹಾಜರಾಗಬೇಕಾದರೆ ದೂರದ ಉಡುಪಿಗೆ ಕಾಸರಗೋಡಿನಿಂದ ಕನಿಷ್ಠ ಮೂರ್ನಾಲ್ಕು ಗಂಟೆ ಪ್ರಯಾಣ ಮಾಡಬೇಕು. ಪರೀಕ್ಷೆ ಬೆಳಗ್ಗೆ 10 ಗಂಟೆಗೆ ಎಂದಿದ್ದರೂ ಕನಿಷ್ಠ ಒಂದೆರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರ ತಲುಪಬೇಕು. ಹಾಗಾಗಿ ದಕ್ಷಿಣ ಕನ್ನಡದಲ್ಲಿ ಪರೀಕ್ಷಾ ಕೇಂದ್ರ ಮರು ವ್ಯವಸ್ಥೆಗೊಳಿಸಬೇಕು ಎನ್ನುವುದು ಇವರ ಆಗ್ರಹ.

ಬಹುಮಾದರಿ ಸಾರಿಗೆಗಾಗಿ ರಾಜ್ಯ ಸರ್ಕಾರಕ್ಕೆ 45 ಎಕರೆ ಭೂಮಿ ಕೊಡಿ ಎಂದು ಕೇಳಿದ ಮೆಟ್ರೋ!

ಈ ಬಾರಿ 12 ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರ: ಕಳೆದ ಬಾರಿ ಕೆಸೆಟ್‌ ಪರೀಕ್ಷೆಗೆ ರಾಜ್ಯದಲ್ಲಿ 10 ಜಿಲ್ಲೆಗಳಲ್ಲಿ 266 ಪರೀಕ್ಷಾ ಕೇಂದ್ರಗಳಿತ್ತು. ಈ ಬಾರಿ ಒಟ್ಟು 12 ಪರೀಕ್ಷಾ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುತ್ತದೆ.

ಬೆಂಗಳೂರು ದಕ್ಷಿಣ ಮತ್ತು ಉತ್ತರ ಕೇಂದ್ರ ಸೇರಿಸಿ ಒಂದೇ ಕೇಂದ್ರ ಮಾಡಲಾಗಿದೆ. ಅಲ್ಲದೆ ಈ ಬಾರಿ ಹಾವೇರಿ, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೈಬಿಡಲಾಗಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ಬೀದರ್‌, ದಾವಣಗೆರೆ, ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುತ್ತಿದೆ.

ಗಡಿನಾಡು ಕಾಸರಗೋಡಿನ ಮಂದಿ ಪರೀಕ್ಷೆಗೆ ದೂರದ ಉಡುಪಿಗೆ ತೆರಳಬೇಕಾಗುತ್ತದೆ. ಇದು ತುಸು ಕಷ್ಟವಾಗಿರುವುದರಿಂದ ಹಿಂದಿನಂತೆ ಕೆಇಎ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ಮರು ನಿಗದಿಪಡಿಸಬೇಕು.

-ಗಿರೀಶ್‌, ಕಾಸರಗೋಡು

ಕರಾವಳಿಯ ಮೂರು ಜಿಲ್ಲೆಗಳ ಮಧ್ಯಭಾಗ ಉಡುಪಿಯಲ್ಲಿ ಈ ಬಾರಿ ಪರೀಕ್ಷಾ ಕೇಂದ್ರ ತೆರೆಯಲಾಗುತ್ತದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂದಿಗೆ ಇದರಿಂದ ಅನುಕೂಲವಾಗಲಿದೆ. ಕಾಸರಗೋಡಿನಲ್ಲಿ ಪರೀಕ್ಷಾರ್ಥಿಗಳು ಸೀಮಿತ ಪ್ರಮಾಣದಲ್ಲಿ ಇರುವುದರಿಂದ ಉಡುಪಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಲು ತೊಂದರೆಯಾಗದು.

-ಪ್ರಸನ್ನ ಎಚ್‌. ಕಾರ್ಯನಿರ್ವಾಹಕ ನಿರ್ದೇಶಕರು, ಕೆಇಎ ಬೆಂಗಳೂರು

Latest Videos
Follow Us:
Download App:
  • android
  • ios