ComedK Result: ದೇಶಕ್ಕೆ ರಾಜ್ಯದ ವೀರೇಶ್ ಪ್ರಥಮ
* ಖಾಸಗಿ ಬಿಇ ಕಾಲೇಜುಗಳ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ
* ಟಾಪ್ 10ರಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಐದು ರ‍್ಯಾಂಕ್
* ಸೆ.14ರಂದು ನಡೆದಿದ್ದ ಕಾಮೆಡ್-ಕೆ ಪರೀಕ್ಷೆ
ಬೆಂಗಳೂರು(ಸೆ.27): ಖಾಸಗಿ ಕಾಲೇಜಿನಲ್ಲಿರುವ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗಿದ್ದ 2021ರ ಕಾಮೆಡ್-ಕೆ(ComedK) ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬೆಂಗಳೂರಿನ ವಿಜಯನಗರದ ವಿದ್ಯಾರ್ಥಿ ವೀರೇಶ್ ಬಿ.ಪಾಟೀಲ್ ಪ್ರಥಮ ರ‍್ಯಾಂಕ್ ಹಾಗೂ ಜಯನಗರದ ಆರ್.ಶಿವಸೂದನ್ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.
ಮೂರನೇ ರ‍್ಯಾಂಕ್ ರಾಜಸ್ಥಾನ ವಿದ್ಯಾರ್ಥಿ ಗೌರವ್ ಕಟಾರಿಯ ಪಾಲಾಗಿದೆ. ಆಂಧ್ರಪ್ರದೇಶ ಮೂಲದ ಕತಿಕೇಲ ಪುನೀತ್ ಕುಮಾರ್ ನಾಲ್ಕನೇ ರ‍್ಯಾಂಕ್, ರಾಜಸ್ಥಾನದ ರಿಶಿತ್ ಶ್ರೀವಾಸ್ತವ ಐದನೇ ರ‍್ಯಾಂಕ್, ರಾಜಸ್ಥಾನದ ಭವೀಶ್ ಗುರ್ನಾನಿ ಆರನೇ ರ‍್ಯಾಂಕ್, ಬೆಂಗಳೂರಿನ ಶ್ರೀಕರ ಎ. ಏಳನೇ ರ‍್ಯಾಂಕ್, ಮೈಸೂರಿನ ನಿಶ್ಚಿತ್ ಪಿ. ಎಂಟನೇ ರ‍್ಯಾಂಕ್ , ಉತ್ತರ ಪ್ರದೇಶದ ದೀಪಕ್ ಚೌಧರಿ ಒಂಬತ್ತನೇ ರ‍್ಯಾಂಕ್ ಮತ್ತು ಬಳ್ಳಾರಿಯ ಎಂ.ಶ್ರೀಹರ್ಷ ಭಟ್ 10ನೇ ರ‍್ಯಾಂಕ್ ಪಡೆದಿದ್ದಾರೆ.
ಒಟ್ಟಾರೆ ಕಾಮೆಡ್-ಕೆ ಫಲಿತಾಂಶದ(Result) ಟಾಪ್ 10 ರ‍್ಯಾಂಕ್‌ಗಳ ಪೈಕಿ ಐದು ರ‍್ಯಾಂಕ್ ಕರ್ನಾಟಕದ ವಿದ್ಯಾರ್ಥಿಗಳ(Students) ಪಾಲಾಗಿವೆ. ಮೊದಲ ಹತ್ತು ರ‍್ಯಾಂಕ್‌ಗಳಲ್ಲಿ ಒಬ್ಬರೂ ವಿದ್ಯಾರ್ಥಿನಿ ಇಲ್ಲ. ಪ್ರಥಮ ರ‍್ಯಾಂಕ್ ಪಡೆದಿರುವ ವೀರೇಶ್ ಬಿ.ಪಾಟೀಲ್ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ರಾಜ್ಯ ಸರ್ಕಾರ ನಡೆಸಿದ ಈ ಬಾರಿಯ ಸಿಇಟಿಯಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ ಏಳನೇ ರ‍್ಯಾಂಕ್ ಪಡೆದಿದ್ದರು.
ಕರ್ನಾಟಕ ಸಿಇಟಿ ರಿಸಲ್ಟ್ ಪ್ರಕಟ: ಇಲ್ಲಿದೆ Rank ವಿಜೇತ ವಿದ್ಯಾರ್ಥಿಗಳ ಪಟ್ಟಿ
ಇದೇ ಸೆ.14ರಂದು ದೇಶದ 157 ನಗರಗಳ 244 ಪರೀಕ್ಷಾ ಕೇಂದ್ರಗಳಲ್ಲಿ ಕಾಮೆಡ್-ಕೆ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 66,304 ಅಭ್ಯರ್ಥಿಗಳ ಪೈಕಿ 44,111 ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ 16,632 ಕರ್ನಾಟಕ ಮತ್ತು 27,479 ಇತರೆ ರಾಜ್ಯದವರಾಗಿದ್ದರು. ಸೆ.17ರಂದು ಕಾಮೆಡ್-ಕೆ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಒಟ್ಟು 84 ಆಕ್ಷೇಪಣೆಗಳು ಬಂದಿದ್ದವು. ಅವುಗಳನ್ನು ತಜ್ಞರ ಸಮಿತಿಯ ಮುಂದೆ ಪರಿಶೀಲಿಸಿ ಸೆ.23ರಂದು ಅಂತಿಮ ಕೀ ಉತ್ತರ ಪ್ರಕಟಿಸಲಾಗಿತ್ತು.
4,660 ವಿದ್ಯಾರ್ಥಿಗಳಿಗೆ 90ರಿಂದ 100ರ ಪರ್ಸೆಂಟೈಲ್ ಫಲಿತಾಂಶ ಪಡೆದಿದ್ದು, ಇದರಲ್ಲಿ 1,244 ಅಭ್ಯರ್ಥಿಗಳು ಕರ್ನಾಟಕದವರಾಗಿದ್ದಾರೆ. ಅದೇ ರೀತಿ 4342 ಅಭ್ಯರ್ಥಿಗಳು 80ರಿಂದ 90ರ ಪರ್ಸೆಂಟೈಲ್ ಪಡೆದಿದ್ದು, ಇದರಲ್ಲಿ 1193 ಮಂದಿ ಕರ್ನಾಟಕದ ಅಭ್ಯರ್ಥಿಗಳಾಗಿದ್ದಾರೆ. ಅಭ್ಯರ್ಥಿಗಳು ಕಾಮೆಡ್-ಕೆ ವೆಬ್‌ಸೈಟ್‌ಗೆ htts://www.comedk.org/ ಭೇಟಿ ನೀಡಿ ಲಾಗಿನ್ ಆಗುವ ಮೂಲಕ ತಮ್ಮ ಫಲಿತಾಂಶ ಪಡೆದುಕೊಳ್ಳಬಹುದು ಎಂದು ಕಾಮೆಡ್-ಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೌನ್ಸೆಲಿಂಗ್ ಆನ್‌ಲೈನ್ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಪ್ರಮಾಣ ಪತ್ರಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬೇಕಿದೆ. ಕೌನ್ಸೆಲಿಂಗ್ ದಿನಾಂಕ ಸೇರಿದಂತೆ ಇತರೆ ವಿಷಯಗಳಿಗಾಗಿ ಅಭ್ಯರ್ಥಿಗಳು ಕಾಮೆಡ್-ಕೆ ವೆಬ್‌ಸೈಟ್ ನೋಡಬಹುದು.
ಕಾಮೆಡ್-ಕೆಯಲ್ಲಿ ಫಸ್ಟ್ ರ‍್ಯಾಂಕ್ ಬರುತ್ತೇನೆಂಬ ನಿರೀಕ್ಷೆ ಇರಲಿಲ್ಲ. ತುಂಬಾ ಖುಷಿಯಾಗಿದೆ. ನಾನು ಪ್ರತಿ ನಿತ್ಯ 6ರಿಂದ 7 ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಸದ್ಯ ಜೆಇಇಗೆ ಸಿದ್ಧತೆ ನಡೆಸುತ್ತಿದ್ದೇನೆ. ಬಾಂಬೆ ಅಥವಾ ದೆಹಲಿಯ ಐಐಟಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡುವ ಉದ್ದೇಶವಿದೆ ಎಂದು ಪ್ರಥಮ ರ‍್ಯಾಂಕ್ ವಿದ್ಯಾರ್ಥಿ ವೀರೇಶ್ ಬಿ.ಪಾಟೀಲ್ ತಿಳಿಸಿದ್ದಾರೆ.