ನೀಟ್ ಫಲಿತಾಂಶ: ಕರ್ನಾಟಕದ ಧೃವ್‌ಗೆ ದೇಶದಲ್ಲೇ 5ನೇ ರ‍್ಯಾಂಕ್
ಈ ಬಾರಿ ಕರ್ನಾಟಕದಿಂದ ನೀಟ್ ಪರೀಕ್ಷೆಗೆ ನೋಂದಾಯಿಸಿದ್ದ 1,34,381 ವಿದ್ಯಾರ್ಥಿಗಳಲ್ಲಿ 1,31,318 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 75,248 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸು ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದು, ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದಾಗಿದೆ.
ಬೆಂಗಳೂರು(ಜೂ.14): ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ನಡೆಸಿದ್ದ 2023ನೇ ಸಾಲಿನ ನೀಟ್ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕರ್ನಾಟಕದ ಧೃವ್ ಅಡ್ವಾಣಿ ಅಖಿಲ ಭಾರತ ಮಟ್ಟದಲ್ಲಿ 5ನೇ ರ‍್ಯಾಂಕ್ ಪಡೆದು ರಾಜ್ಯದ ಟಾಪರ್ ಆಗಿ ಸಾಧನೆ ಮಾಡಿದ್ದಾರೆ.
ರಾಜ್ಯದ ಮತ್ತೊಬ್ಬ ವಿದ್ಯಾರ್ಥಿ ಎಸ್.ಎಚ್.ಭೈರೇಶ್ ಅಖಿಲ ಭಾರತ ಮಟ್ಟದಲ್ಲಿ 48ನೇ ರ‍್ಯಾಂಕ್ ಪಡೆದಿದ್ದು, ರಾಜ್ಯದ ಎರಡನೇ ಟಾಪರ್ ಎನಿಸಿದ್ದಾರೆ. ಎನ್‌ಟಿಎ ಪ್ರಕಟಿಸಿರುವ ರಾಷ್ಟ್ರ ಮಟ್ಟದ ಟಾಪ್ 50 ರ‍್ಯಾಂಕ್‌ನೊಳಗೆ ರಾಜ್ಯದ ಈ ಇಬ್ಬರು ಮಾತ್ರ ಸ್ಥಾನ ಪಡೆದಿದ್ದಾರೆ. ಧೃವ್ 715 ಅಂಕಗಳನ್ನು (ಶೇ.99.99) ಪಡೆದಿದ್ದರೆ, ಭೈರೇಶ್ 710 ಅಂಕಗಳನ್ನು (ಶೇ.99.99) ಗಳಿಸಿದ್ದಾರೆ.
ಈ ರಾಜ್ಯದಲ್ಲಿ ನೀಟ್ ಪರೀಕ್ಷೆ ಮುಂದೂಡಿಕೆ: ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ
ಇನ್ನು, ಮಹಿಳಾ ವಿಶೇಷ ಚೇತನ ಕೋಟಾದಡಿ (ಪಿಡಬ್ಲ್ಯುಡಿ) ರಾಜ್ಯದ ಲಾವಣ್ಯ ಗುಪ್ತಾ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಇವರು ಅಖಿಲ ಭಾರತ ಮಟ್ಟದ ಸಾಮಾನ್ಯ ರ‍್ಯಾಂಕ್ ಪಟ್ಟಿಯಲ್ಲಿ 686 ಅಂಕಗಳನ್ನು (ಶೇ.99.94) ಪಡೆದು 1018ನೇ ರ‍್ಯಾಂಕ್ ಪಡೆದಿದ್ದಾರೆ. ಅದೇ ರೀತಿ ಪರಿಶಿಷ್ಟ ಜಾತಿ ವಿಭಾಗದಲ್ಲಿ ಕರ್ನಾಟಕದ ಸಚಿನ್ ಪಿ.ಆರ್. 685 ಅಂಕ ಪಡೆದು ದೇಶಕ್ಕೆ 7ನೇ ರ‍್ಯಾಂಕ್, ಚಾಯಾಂಕ್ ಮರ್ತೆನ್ನವರ್ 680 ಅಂಕ ಪಡೆದು 9ನೇ ರ‍್ಯಾಂಕ್ ಗಳಿಸಿದ್ದಾರೆ. ಅಖಿಲ ಭಾರತ ಸಾಮಾನ್ಯ ವಿಭಾಗದಲ್ಲಿ ಸಚಿನ್ 1138ನೇ ರ‍್ಯಾಂಕ್, ಚಾಯಾಂಕ್ 1725ನೇ ರ‍್ಯಾಂಕ್ ಪಡೆಸಿದ್ದಾರೆ.
ಒಟ್ಟಾರೆ ಈ ಬಾರಿ ಕರ್ನಾಟಕದಿಂದ ನೀಟ್ ಪರೀಕ್ಷೆಗೆ ನೋಂದಾಯಿಸಿದ್ದ 1,34,381 ವಿದ್ಯಾರ್ಥಿಗಳಲ್ಲಿ 1,31,318 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 75,248 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸು ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದು, ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದಾಗಿದೆ.