ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಏಪ್ರಿಲ್ 23ರಂದು ಪ್ರಕಟಿಸಲಿದೆ. ವಿದ್ಯಾರ್ಥಿಗಳು ವೆಬ್‌ಸೈಟ್, ಮೊಬೈಲ್ ಆಪ್, SMS/WhatsApp ಮೂಲಕ ಫಲಿತಾಂಶ ವೀಕ್ಷಿಸಬಹುದು.
ಬೆಂಗಳೂರು ಏ.22): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ (ಪರೀಕ್ಷೆ-1) ಫಲಿತಾಂಶವನ್ನು ನಾಳೆ, ಏಪ್ರಿಲ್ 23ರಂದು ಮಧ್ಯಾಹ್ನ 12:00 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಿದೆ. ಈ ಬಾರಿ ಫಲಿತಾಂಶ ವೀಕ್ಷಣೆಗೆ ಮತ್ತು ಅಂಕಪಟ್ಟಿ ಡೌನ್‌ಲೋಡ್ ಮಾಡಲು ಮಂಡಲಿಯು ಅತ್ಯಾಧುನಿಕ ಹಾಗೂ ಸರಳ ವಿಧಾನಗಳನ್ನು ಪರಿಚಯಿಸಿದೆ.
ಫಲಿತಾಂಶ ಪಡೆಯುವುದು ಹೇಗೆ? (How to check results)
ವಿದ್ಯಾರ್ಥಿಗಳು ಈ ಕೆಳಗಿನ ವಿವಿಧ ಮಾಧ್ಯಮಗಳ ಮೂಲಕ ತಮ್ಮ ಫಲಿತಾಂಶವನ್ನು ಕ್ಷಣಾರ್ಧದಲ್ಲಿ ತಿಳಿಯಬಹುದು:
ಅಧಿಕೃತ ವೆಬ್‌ಸೈಟ್: ಮಂಡಲಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕ ಫಲಿತಾಂಶ ವೀಕ್ಷಿಸಬಹುದು.
ಮೊಬೈಲ್ ಆಪ್: 'KarnatakaOne' ಮೊಬೈಲ್ ಆಪ್ ಮೂಲಕವೂ ಫಲಿತಾಂಶ ಲಭ್ಯವಿರಲಿದೆ.
ನೇರ ಸಂದೇಶ (SMS/WhatsApp): ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗಳಿಗೆ ಮಂಡಲಿಯ ವತಿಯಿಂದಲೇ ನೇರವಾಗಿ ಫಲಿತಾಂಶದ ವಿವರಗಳನ್ನು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ರವಾನಿಸಲಾಗುವುದು.
ಶಾಲೆಗಳಲ್ಲಿ ಲಭ್ಯ: ನಾಳೆ ಮಧ್ಯಾಹ್ನ 12 ಗಂಟೆಯ ನಂತರ ಆಯಾ ಶಾಲೆಗಳಿಗೂ ಫಲಿತಾಂಶದ ಪಟ್ಟಿಯನ್ನು ರವಾನಿಸಲಾಗುವುದು.
ಈ ಬಾರಿಯ ವಿಶೇಷ: ಡಿಜಿಲಾಕರ್ (DigiLocker) ಮೂಲಕ ಅಂಕಪಟ್ಟಿ!
ಇತಿಹಾಸದಲ್ಲೇ ಮೊದಲ ಬಾರಿಗೆ, ವಿದ್ಯಾರ್ಥಿಗಳು ತಮ್ಮ ಅಧಿಕೃತ ಅಂಕಪಟ್ಟಿಯನ್ನು (Marks Card) ರಿಸಲ್ಟ್ ಬಂದ ತಕ್ಷಣವೇ ಡಿಜಿಲಾಕರ್ ಮೂಲಕ ಪಡೆಯುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ.
ವೆಬ್‌ಸೈಟ್: https://www.digilocker.gov.in ಗೆ ಭೇಟಿ ನೀಡಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸಮಯ: ನಾಳೆ ಮಧ್ಯಾಹ್ನ 12 ಗಂಟೆಯಿಂದಲೇ ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯವಿರುತ್ತದೆ.
ವಿಡಿಯೋ ಮಾರ್ಗದರ್ಶಿ: ಡಿಜಿಲಾಕರ್‌ನಿಂದ ಅಂಕಪಟ್ಟಿ ಡೌನ್‌ಲೋಡ್ ಮಾಡುವ ವಿಧಾನವನ್ನು ತಿಳಿಯಲು ಮಂಡಲಿಯು ಈ ವಿಡಿಯೋ ಲಿಂಕ್ https://tinyurl.com/mw84wmh9 ಅನ್ನು ಬಿಡುಗಡೆ ಮಾಡಿದೆ.
ಹೈಕೋರ್ಟ್ ಆದೇಶದಂತೆ ಈ ಬಾರಿ ತೃತೀಯ ಭಾಷೆ (ಹಿಂದಿ) ವಿಷಯಕ್ಕೂ ಅಂಕಗಳನ್ನೇ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಂಡಲಿಯು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.


