SSLC ಮೊದಲ ದಿನ ಸುಸೂತ್ರ: 99.67% ವಿದ್ಯಾರ್ಥಿಗಳು ಪರೀಕ್ಷೆಗೆ!

* ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಸೂತ್ರ

* 99.67% ವಿದ್ಯಾರ್ಥಿಗಳು ಪರೀಕ್ಷೆಗೆ

* ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಹಾಜರು

* ಕೋವಿಡ್‌ ಮಾರ್ಗಸೂಚಿ ಪಾಲಿಸಿ 4885 ಕೇಂದ್ರಗಳಲ್ಲಿ ಪರೀಕ್ಷೆ

* ಗೊಂದಲವಿಲ್ಲದೆ ಮುಗಿದ ಎಕ್ಸಾಂ: ಸುರೇಶ್‌ ಕುಮಾರ್‌

Karnataka SSLC exam 99 67pc attend results in August second week pod

ಬೆಂಗಳೂರು(ಜು.20): ರಾಜ್ಯಾದ್ಯಂತ ಸೋಮವಾರ ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆದಿದ್ದು, ಗಣಿತ, ವಿಜ್ಞಾ ನ ಮತ್ತು ಸಮಾಜ ವಿಜ್ಞಾನ ಈ ಮೂರು ವಿಷಯಗಳಿಗೆ ನೋಂದಾಯಿಸಿಕೊಂಡಿದ್ದ 8.50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಸರಾಸರಿ ಶೇ.99.67ರಷ್ಟುಮಂದಿ ಹಾಜರಾಗಿದ್ದರು.

ಪರೀಕ್ಷೆ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌, ಗಣಿತ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 8,52,191 ವಿದ್ಯಾರ್ಥಿಗಳ ಪೈಕಿ 8,49,199 ಮಂದಿ (ಶೇ.99.64) ಹಾಜರಾಗಿದ್ದರು. 2992 ಮಕ್ಕಳು ಗೈರು ಹಾಜರಾಗಿದ್ದರು. ವಿಜ್ಞಾನ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 8,43,976 ಅಭ್ಯರ್ಥಿಗಳ ಪೈಕಿ 8,40,841 ಅಭ್ಯರ್ಥಿಗಳು (ಶೇ.99.62) ಹಾಜರಾಗಿದ್ದು, 3127 ಮಕ್ಕಳು ಗೈರು ಹಾಜರಾಗಿದ್ದಾರೆ. ಸಮಾಜ ವಿಜ್ಞಾನ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 8,24,689 ಅಭ್ಯರ್ಥಿಗಳ ಪೈಕಿ 8,21,823 ಅಭ್ಯಥಿಗಳು (ಶೇ.99.65) ಹಾಜರಾಗಿದ್ದರು ಎಂದು ವಿವರಿಸಿದರು.

ಕಳೆದ ವರ್ಷ ಮೂರೂ ವಿಷಯಗಳಲ್ಲಿ ಸರಾಸರಿ ಶೇ.98.30ಕ್ಕೂ ಹೆಚ್ಚು ಮಕ್ಕಳು ಹಾಜರಾಗಿದ್ದರೆ, ಈ ಬಾರಿ ಶೇ.99.60ಗೂ ಹೆಚ್ಚು ಮಕ್ಕಳು ಪರೀಕ್ಷೆ ಬರೆದಿದ್ದಾರೆ. ರಾಜ್ಯದ ಎಲ್ಲ 4885 ಪರೀಕ್ಷಾ ಕೇಂದ್ರಗಳಲ್ಲೂ ವಿದ್ಯಾರ್ಥಿಗಳು ಯಾವುದೇ ಗೊಂದಲ, ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ. ಎಲ್ಲೆಡೆ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದರು.

ಹೊರ ರಾಜ್ಯದಿಂದ 770 ವಿದ್ಯಾರ್ಥಿಗಳು ಹಾಜರು:

ದಕ್ಷಿಣ ಕನ್ನಡ, ಚಿಕ್ಕೋಡಿ ಸೇರಿ ಗಡಿ ಭಾಗದ ಜಿಲ್ಲೆಗಳ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದ ಒಟ್ಟು 770 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಕೋಲಾರದ ಕುರುಬರ ಪೇಟೆಯ ನಿವಾಸಿ ಪೊಲೀಸ್‌ ಇಲಾಖೆಯ 55 ವರ್ಷ ವಯಸ್ಸಿನ ಸಿಬ್ಬಂದಿಯೊಬ್ಬರು ಖಾಸಗಿ ಅಭ್ಯರ್ಥಿಯಾಗಿ ಕಳೆದ ವರ್ಷ ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣರಾಗಿದ್ದರು. ಈ ಬಾರಿ ಪುನರಾವರ್ತಿತ ಅಭ್ಯರ್ಥಿಯಾಗಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಸಚಿವರು ತಿಳಿಸಿದರು.

ಇಬ್ಬರು ವಿದ್ಯಾರ್ಥಿಗಳಿಗೆ ದೋಣಿ ವ್ಯವಸ್ಥೆ:

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕುರು ದ್ವೀಪದ ಶಿಲ್ಪಾ ಮತ್ತು ಸಂಜನಾ ಎಂಬ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಬರಲು ದೋಣಿಯ ವ್ಯವಸ್ಥೆ ಮಾಡಲಾಗಿತ್ತು. ಅವರು ಪರೀಕ್ಷೆ ಬಳಿಕ ಬೋಟ್‌ನಲ್ಲೇ ಸುರಕ್ಷಿತವಾಗಿ ಮನೆ ತಲುಪಿದ್ದಾರೆ. ಉಳಿದೆಡೆ ಸಾರಿಗೆ ಸೇವೆ ಅಗತ್ಯವಿದ್ದ ಮಕ್ಕಳಿಗೆ ಕೆಎಸ್‌ಆರ್‌ಟಿಸಿ, ಇಲಾಖಾ ಜೀಪು ಮತ್ತಿತರ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ಮಂಗಳೂರು ತಾಲೂಕಿನ ತೊಕ್ಕಟ್ಟು ಗ್ರಾಮದ ಖಾಸಗಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿದ್ಯುತ್‌ ಶಾರ್ಟ್‌ ಸಕ್ರ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಆ ಪ್ರಯೋಗಾಲಯದ ಅಕ್ಕ ಪಕ್ಕದ ಮೂರು ಕೊಠಡಿಯ 36 ಅಭ್ಯರ್ಥಿಗಳನ್ನು ಅದೇ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ 3 ಕೊಠಡಿಗಳಿಗೆ ಸ್ಥಳಾಂತರಿಸಲಾಯಿತು. ಸ್ಥಳಾಂತರಕ್ಕೆ ತೆಗೆದುಕೊಂಡ ಸಮಯವನ್ನು ಪರೀಕ್ಷೆ ಬರೆಯಲು ಹೆಚ್ಚುವರಿಯಾಗಿ ನೀಡಲಾಯಿತು. ಯಾರಿಗೂ ಯಾವುದೇ ಸಮಸ್ಯೆಗಳಾಗಿಲ್ಲ ಎಂದು ಸಚಿವರು ತಿಳಿಸಿದರು.

ಪಾಸಿಟಿವ್‌ ಆಗಿದ್ದ 58 ಮಂದಿಗೆ ನಿಗಾ ಕೇಂದ್ರದಲ್ಲಿ ಪರೀಕ್ಷೆ

ಮಂಗಳೂರಿನಲ್ಲಿ ಅತಿ ಹೆಚ್ಚು 16, ಚಿತ್ರದುರ್ಗ, ಚಿಕ್ಕಮಗಳೂರು ತಲಾ 7 ಮಕ್ಕಳು ಸೇರಿದಂತೆ 15 ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕಿತರಾಗಿದ್ದ ಒಟ್ಟು 58 ಪರೀಕ್ಷಾರ್ಥಿಗಳು ಸ್ಥಳೀಯ ಕೋವಿಡ್‌ ನಿಗಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ಇದಕ್ಕೆ ಆಯಾ ಜಿಲ್ಲಾಡಳಿತಗಳ ನೆರವಿನಿಂದ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಂಡಿದ್ದರು.

ಪರೀಕ್ಷೆಗೆ ಬಂದವರಲ್ಲಿ 111 ಮಂದಿಯಲ್ಲಿ ಕೆಮ್ಮು, ಜ್ವರ, ನೆಗಡಿಯಂತಹ ಅನಾರೋಗ್ಯ ಕಂಡುಬಂದಿದ್ದರಿಂದ ಅವರಿಗೆ ಆಯಾ ಪರೀಕ್ಷಾ ಕೇಂದ್ರದಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ. ಅದೇ ರೀತಿ, ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ತಮ್ಮ ಊರುಗಳಿಗೆ ತೆರಳಿದ್ದ ಮಕ್ಕಳಿಗೆ ತಮ್ಮ ಊರಿನ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. 10,693 ಮಕ್ಕಳು ಇದರ ಉಪಯೋಗ ಪಡೆದಿದ್ದಾರೆ ಎಂದರು.

Latest Videos
Follow Us:
Download App:
  • android
  • ios