ಬೆಂಗಳೂರು (ನ. 09): ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ಬಂದ್‌ ಆಗಿರುವ ಶಾಲೆಗಳು ಹಾಗೂ ಪಿಯು ಕಾಲೇಜುಗಳನ್ನು ಡಿಸಂಬರ್‌ನಿಂದ ತೆರೆಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. 

ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ಡಿಸೆಂಬರ್‌ 2ನೇ ವಾರದಿಂದ ಮೊದಲ ಹಂತದಲ್ಲಿ 9 ರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗಳನ್ನು ಆರಂಭಿಸಬಹುದು. ನಂತರ ಈ ವರ್ಷಾಂತ್ಯದವರೆಗೂ ಪರಿಣಾಮಗಳನ್ನು ನೋಡಿಕೊಂಡು ಜನವರಿಯಿಂದ 5ರಿಂದ 8ನೇ ತರಗತಿ, ನಂತರ ಮೂರನೇ ಹಂತದಲ್ಲಿ ಉಳಿದ ತರಗತಿಗಳನ್ನು ಆರಂಭಿಸಬಹುದು ಎಂದು ಆಯುಕ್ತರು ವರದಿಯಲ್ಲಿ ಶಿಫಾರಸುಗಳನ್ನು ನೀಡುವ ಸಾಧ್ಯತೆ ಇದೆ.

ಮೊದಲ ಹಂತದಲ್ಲಿ 9 ರಿಂದ 12ನೇ ತರಗತಿ ಆರಂಭಿಸುವ ಬಗ್ಗೆ ತಮ್ಮ ವರದಿಯಲ್ಲಿ ಶಿಫಾರಸು ಮಾಡಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಆದರೆ, ಶಾಲಾರಂಭದ ಸಮಯದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಇಲಾಖೆಯ ಮತ್ತೊಂದು ಮೂಲಗಳ ಪ್ರಕಾರ ಚಳಿಗಾಲ ಆರಂಭವಾಗುವ ಕಾರಣದಿಂದ ಜನವರಿವರೆಗೂ ಶಾಲೆ ಆರಂಭ ಬೇಡ ಎಂಬ ಚರ್ಚೆಗಳು ಅಧಿಕಾರಿಗಳ ಮಟ್ಟದಲ್ಲಿ ನಡೆದಿವೆ ಎಂದು ತಿಳಿದು ಬಂದಿದೆ.