ಪಿಯುಸಿ ಪ್ರಾಯೋಗಿಕ ಪರೀಕ್ಷೆ ಆರಂಭ, ಹಿಜಾಬ್ ಕಾರಣದಿಂದ ಗೈರಾದ್ರೆ ಮತ್ತೆ ಅವಕಾಶ ಇಲ್ಲ
* ಹಿಜಾಬ್ ವಿವಾದದ ನಡುವೆಯೇ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ
* ಹಿಜಾಬ್ ವಿವಾದದಿಂದ ಗೈರಾದರೆ ಮತ್ತೆ ಅವಕಾಶ ಇಲ್ಲ
* ಪದವಿ ಪರೀಕ್ಷೆಗಳು 1 ತಿಂಗಳು ಮುಂದೂಡಿಕೆ
ಬೆಂಗಳೂರು, (ಫೆ.20): ಹಿಜಾಬ್ ವಿವಾದದ (Hijab Row) ನಡುವೆಯೇ ದ್ವಿತೀಯ ಪಿಯುಸಿ (Second PUC) ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.
ಪಿಯು ಬೋರ್ಡ್ ಈಗಾಗಲೇ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ನಾಳೆಯಿಂದ (ಫೆ.21) ಪಿಯುಸಿ (PU Colleges) ಪ್ರಾಯೋಗಿಕ ಪರೀಕ್ಷೆ (Preparatory Exams) ಆರಂಭವಾಗಲಿದೆ.
2nd PUC Revised Time Table: ಗಮನಿಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ
ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯಂತೆಯೇ (Exam Timetable) ಪರೀಕ್ಷೆ ನಡೆಯಲಿದೆ. ಹಿಜಾಬ್ ವಿವಾದದಿಂದ (Hijab Controversy) ಪರೀಕ್ಷೆಗೆ ಗೈರಾದರೆ ಮತ್ತೆ ಪರೀಕ್ಷೆಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.
ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಈ ಕಾರಣದಿಂದ ಹಿಜಾಬ್ ವಿವಾದದಿಂದ ಗೈರಾದರೆ ವಿದ್ಯಾರ್ಥಿನಿಯರಿಗೆ ಸಂಕಷ್ಟ ಎದುರಾಗಲಿದೆ.
ಪ್ರಾಯೋಗಿಕ ಪರೀಕ್ಷೆ ಮುಗಿಸಲು ಮಾರ್ಚ್ 25ರ ವರೆಗೂ ಪದವಿ ಪೂರ್ವ ಮಂಡಳಿ ಅವಕಾಶ ನೀಡಿದೆ. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಹಿಜಾಬ್ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹಲವು ವಿದ್ಯಾರ್ಥಿಗಳು ಹಿಜಾಬ್ ಧರಿಸದೇ ತರಗತಿ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಹಿಜಾಬ್ ಬಿಟ್ಟು ಪರೀಕ್ಷೆಗೆ ಹಾಜರಾಗುವುದು ಅನಿವಾರ್ಯ. ಹಿಜಾಬ್ ಧರಿಸಿಬಂದ್ರೆ ಪರೀಕ್ಷೆಗೆ ಅವಕಾಶ ಇಲ್ಲ. ಈ ಹಿನ್ನೆಲೆ, ಪರೀಕ್ಚೆಗೆ ಹಾಜರಾಗದಿದ್ದರೆ ಸಮಸ್ಯೆ ಎದುರಾಗಲಿದೆ.
ಪದವಿ ಪರೀಕ್ಷೆಗಳು 1 ತಿಂಗಳು ಮುಂದೂಡಿಕೆ
ಕೊರೋನಾ ಹಾಗೂ ಹಿಜಾಬ್ ಸಂಘರ್ಷದಿಂದ ಪದವಿ ಕಾಲೇಜು ರಜೆ ಹಿನ್ನಲೆ ಮೂರು ದಿನ ತಡವಾಗಿ ಪರೀಕ್ಷೆ ಆರಂಭ ಆಗುತ್ತಿದೆ. ಈ ಮಧ್ಯೆ, ಪದವಿ ಪರೀಕ್ಷೆಗಳನ್ನು 1 ತಿಂಗಳು ಮುಂದೂಡಲು ವಿಶ್ವ ವಿದ್ಯಾಲಯಗಳಿಗೆ ಸೂಚನೆ ನೀಡಲಾಗಿದೆ. ವಿಶ್ವವಿದ್ಯಾಲಯಗಳ ವಿಸಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಎಸಿಎಸ್ ಜಿ.ಕುಮಾರ್ ನಾಯಕ್ ಈ ಬಗ್ಗೆ ಸೂಚನೆ ನೀಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ವಿವಿಗಳ ಸೆಮಿಸ್ಟರ್ ಪರೀಕ್ಷೆ 1 ತಿಂಗಳ ಕಾಲ ಮುಂದೂಡಿ ಎಂದು ಉನ್ನತ ಶಿಕ್ಷಣ ಇಲಾಖೆ ಎಸಿಎಸ್ ತಿಳಿಸಿದ್ದಾರೆ. ಕೊರೋನಾ ಸೋಂಕು, ಓಮಿಕ್ರಾನ್ ಸೋಂಕು ಹೆಚ್ಚಳ, ಅತಿಥಿ ಉಪನ್ಯಾಸಕರ ಮುಷ್ಕರದಿಂದ ಪಾಠ ಪ್ರವಚನ ಮುಗಿದಿಲ್ಲ ಈ ಕಾರಣದಿಂದ ಹೀಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಷ್ಟೇ ಅಲ್ಲದೆ ಕೊರೋನಾ ಬಳಿಕ ಇದೀಗ ಹಿಜಾಬ್ ವಿವಾದ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಕರ್ನಾಟಕ ರಾಜ್ಯಾದಂತ ಮೂರು ದಿನಗಳ ಕಾಲ ಹೈಸ್ಕೂಲ್ ಹಾಗೂ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆ ಬಳಿಕ, ಇದೀಗ ಕಾಲೇಜು ಮತ್ತೆ ಆರಂಭವಾಗಿದೆ. ಆದರೂ ಹಲವು ಜಿಲ್ಲೆಗಳಲ್ಲಿ ಶಿಕ್ಷಣ ಮತ್ತೆ ಮೊದಲಿನಂತೆ ಆರಂಭವಾಗಿಲ್ಲ.
ವಿದ್ಯಾರ್ಥಿಗಳು ಹಿಜಾಬ್ ಬಿಟ್ಟು ಪರೀಕ್ಷೆಗೆ ಹಾಜರಾಗಿ. ಇಲ್ಲದಿದ್ದರೆ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಹೊಡೆತ ಬೀಳಲಿದೆ.. ಮನೆಯಿಂದ ಹಿಜಾಬ್ ಹಾಕಿಕೊಂಡು ಬನ್ನಿ. ಆದ್ರೆ, ಪರೀಕ್ಷೆ ಹಾಲ್‌ನಲ್ಲಿ ಹಿಜಾಬ್ ತೆಗೆದು ಎಕ್ಸಾಂಗೆ ಹಾಜರಾಗಿ.
ಬಳೆ, ಸಿಂಧೂರ, ಕುಂಕುಮ ಧರಿಸಿ ಬಂದವರನ್ನ ತಡೆಯುವಂತಿಲ್ಲ
ಸಿಂಧೂರ, ಕುಂಕುಮ, ಬಳೆ ಬಗ್ಗೆ ಪ್ರಶ್ನೆ ಬೇಡ, ಅದು ನಮ್ಮ ಸಂಸ್ಕೃತಿಯ ಪ್ರತೀಕ, ಅಲಂಕಾರಿಕ ವಸ್ತು ಅದಕ್ಕೂ ಹಿಜಾಬ್ ಗೂ (Hijab row) ಸಂಬಂಧವಿಲ್ಲ, ಅದನ್ನು ಧರಿಸಿ ಬಂದವರನ್ನು ಶಾಲೆ-ಕಾಲೇಜುಗಳಲ್ಲಿ ತಡೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಳೆ, ಬಿಂದಿ,ಸಿಂಧೂರ, ಕುಂಕುಮಗಳು ಅಲಂಕಾರಿಕ ವಸ್ತುಗಳು, ಅವುಗಳಿಗೆ ನಿರ್ಬಂಧ ಹಾಕಲು ಸಾಧ್ಯವಿಲ್ಲ. ಹಿಜಾಬ್ ಧಾರ್ಮಿಕ ಗುರುತನ್ನು ಸಂಕೇತಿಸುವ ಬಟ್ಟೆ, ಹಿಜಾಬ್ ಗೆ ಪ್ರತಿಯಾಗಿ ಬಳೆ, ಸಿಂಧೂರ, ಕುಂಕುಮವನ್ನು ಹೋಲಿಸುವುದು ಬೇಡ. ಅದನ್ನು ಧರಿಸಿ ಬಂದವರನ್ನು ತಡೆದರೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದೇನೆ ಎಂದು ಹೇಳಿದರು.
ಹಿಜಾಬ್ ಧರ್ಮವನ್ನು ಸೂಚಿಸಿದರೆ ಬಳೆ, ಕುಂಕುಮ, ಬಿಂದಿ, ಸಿಂಧೂರ ಅಲಂಕಾರವನ್ನು ಸೂಚಿಸುತ್ತದೆ. ಅಲಂಕಾರಿಕ ವಸ್ತುಗಳನ್ನು ಧರಿಸಿಕೊಂಡು ಬನ್ನಿ ಎಂದು ನಾವು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿಲ್ಲ. ಸ್ವ ಇಚ್ಛೆಯಿಂದ ಹಾಕಿಕೊಂಡು ಬರುತ್ತಾರೆ ಎಂದರು.