ಇಂದಿನಿಂದ ಪಿಯು ಪರೀಕ್ಷೆ: ಮಕ್ಕಳೇ ಗುಡ್ಲಕ್: ಮಾಸ್ಕ್ ಕಡ್ಡಾಯವಲ್ಲ, ಧರಿಸಿದರೆ ಒಳ್ಳೆಯದು!
* ರಾಜ್ಯಾದ್ಯಂತ ಶುಕ್ರವಾರದಿಂದ (ಏ.22) ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭ
* ಹಿಜಾಜ್, ಶಾಲು ಧರಿಸಿದವರಿಗೆ ಪ್ರವೇಶ ಇಲ್ಲ
* ಮಾಸ್ಕ್ ಕಡ್ಡಾಯವಲ್ಲ, ಧರಿಸಿದರೆ ಒಳ್ಳೆಯದು
ಬೆಂಗಳೂರು(ಏ.22); ರಾಜ್ಯಾದ್ಯಂತ ಶುಕ್ರವಾರದಿಂದ (ಏ.22) ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದೆ. ಹಾಗಾಗಿ, ವಿದ್ಯಾರ್ಥಿಗಳೇ ಮೊದಲ ದಿನವಾದ್ದರಿಂದ ಕನಿಷ್ಠ ಒಂದು ಗಂಟೆಗೂ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ತೆರಳಿ ತಮ್ಮ ಪರೀಕ್ಷಾ ಪ್ರವೇಶ ಪತ್ರ ಸಂಖ್ಯೆಯನ್ನು ಯಾವ ಕೊಠಡಿಯಲ್ಲಿ ಹಾಕಲಾಗಿದೆ ಎಂಬುದನ್ನು ಹುಡುಕಿಕೊಳ್ಳಿ. ಮನೆಯಿಂದ ಹೊರಡುವಾಗ ತಮ್ಮ ಪ್ರವೇಶ ಪತ್ರ ಮತ್ತು ಕಪ್ಪು ಅಥವಾ ನೀಲಿ ಬಾಲ್ ಬಾಯಿಟ್ ಪೆನ್ ತೆಗೆದುಕೊಂಡು ಹೋಗುವುದು ಮರೆಯಬೇಡಿ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಂತೆ ಪಿಯು ಪರೀಕ್ಷೆಗೂ ಯಾವುದೇ ಧರ್ಮ ಸೂಚಕ ಉಡುಪು ಧರಿಸಿ ಬರುವುದನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ. ಅದರಂತೆ ತಮ್ಮ ಕಾಲೇಜಿನಲ್ಲಿ ನಿಗದಿಪಡಿಸಿದ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹೊರಡಿ, ಸಮವಸ್ತ್ರ ಇಲ್ಲದಿದ್ದಲ್ಲಿ ಯಾವುದೇ ಧರ್ಮಸೂಚಕವಲ್ಲದ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರದಂತಹ ಉಡುಪು ಧರಿಸಿ ಹಾಜರಾಗಲು ಸೂಚಿಸಿದೆ. ಇದನ್ನು ಪಾಲಿಸದಿದ್ದರೆ ಪರೀಕ್ಷೆಯಿಂದ ವಂಚಿತರಾಗಬೇಕಾದೀತು ಎಚ್ಚರ.
"
ಈ ಬಾರಿ ಪರೀಕ್ಷೆಗೆ 5241 ಕಾಲೇಜುಗಳಿಂದ 6,84,255 ವಿದ್ಯಾರ್ಥಿಗಳು ನೋಂದಾಯಿಸಿಕೋಂಡಿದ್ದು, ಒಟ್ಟು 1076 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಮುಖ್ಯ ಅಧೀಕ್ಷಕರನ್ನು ಬಿಟ್ಟು ಉಳಿದ ಸಿಬ್ಬಂದಿ-ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧಿಸಲಾಗಿದೆ. ಪರೀಕ್ಷಾ ಅಕ್ರಮಗಳ ಮೇಲೆ ನಿಗಾ ವಹಿಸಲು 2900ಕ್ಕೂ ಹೆಚ್ಚು ಜಿಲ್ಲಾ, ತಾಲ್ಲೂಕು ಮತ್ತು ವಿಶೇಷ ಜಾಗೃತ ದಳ ರಚಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಕೋವಿಡ್ ತೀವ್ರತೆಯಿಂದ ಪರೀಕ್ಷೆ ನಡೆಸದೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಎರಡೂ ತರಗತಿ ಮಕ್ಕಳನ್ನು ಸಾಮೂಹಿಕವಾಗಿ ಪಾಸ್ ಮಾಡಲಾಗಿತ್ತು. ಈ ಸಾಲಿನಲ್ಲೂ ಆರಂಭದ ಕೆಲ ತಿಂಗಳು ಕೋವಿಡ್ ಬಾದಿಸಿದ್ದರಿಂದ ಸಮಯಕ್ಕೆ ಸರಿಯಾಗಿ ಕಾಲೇಜುಗಳು, ಭೌತಿಕ ತರಗತಿಗಳು ಆರಂಭವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಕಠಿಣವಾಗಿ ಪ್ರಶ್ನೆ ಪತ್ರಿಕೆ ಸರಳವಾಗಿರುತ್ತದೆ. ವಿದ್ಯಾರ್ಥಿಗಳು ಭಯ, ಆತಂಕ ವಿಲ್ಲದೆ ನಿರಾತಂಕವಾಗಿ ಪರೀಕ್ಷೆ ಎದುರಿಸಬಹುದು ಎಂದು ಪಿಯು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಅಕ್ರಮಗಳಿಂದ ದೂರ ಇರಿ:
ನಕಲು ಚೀಟಿ ಸೇರಿದಂತೆ ಮತ್ತಿತರೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಬೇಡಿ. ಸಿಕ್ಕಿಬಿದ್ದು ಡಿಬಾರ್ ಆದರೆ ಭವಿಷ್ಯವೇ ಹಾಳಾಗುತ್ತದೆ. ಪ್ರಶ್ನೆ ಪತ್ರಿಕೆ ಕೈಗೆ ಬಂದ ಕೂಡಲೇ ಒಮ್ಮೆ ಪ್ರಶ್ನೆಗಳನ್ನು ನಿಧಾನವಾಗಿ ಓದಿಕೊಳ್ಳಿ. ಇದಕ್ಕಾಗಿ 15 ನಿಮಿಷ ಕಾಲಾವಕಾಶವಿರುತ್ತದೆ. ನಂತರ ಉತ್ತರ ಪತ್ರಿಕೆಗಳನ್ನು ಕೊಠಡಿ ಮೇಲ್ವಿಚಾರಕರು ನೀಡುತ್ತಾರೆ. ಸ್ಪಷ್ಟವಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ. ಸಾಧ್ಯವಾದಷ್ಟುಯಾವುದೇ ಪ್ರಶ್ನೆಗಳಿಗೆ ಉತ್ತರ ಬರೆಯದೆ ಬರಬೇಡಿ. ಎಷ್ಟುಉತ್ತರ ಗೊತ್ತಿರುತ್ತದೋ ಅಷ್ಟನ್ನಾದರೂ ತಪ್ಪದೆ ಬರೆಯಿರಿ ಎಂಬುದು ಪಿಯು ಉಪನ್ಯಾಸಕರ ಸಲಹೆಯಾಗಿದೆ.
"
ಅನಾರೋಗ್ಯ, ಪಾಸಿಟಿವ್ ಇದ್ದವರಿಗೆ ಪ್ರತ್ಯೇಕ ಕೊಠಡಿ
ಕೋವಿಡ್ ತಹಬದಿಗೆ ಬಂದಿದ್ದರೂ ಪರೀಕ್ಷೆಯಲ್ಲಿ ಮಾಸ್‌್ಕ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ ಯಾವುದನ್ನೂ ಕಡ್ಡಾಯಗೊಳಿಸಿಲ್ಲ. ಅಲ್ಲದೆ, ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕೆಂಬುದನ್ನು ಕಡ್ಡಾಯಗೊಳಿಸಿಲ್ಲ.
ಆದರೆ, ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ದೇಹದ ಆಮ್ಲಜನಕ ಪ್ರಮಾಣ (ಎಸ್‌ಪಿಒ2) ಪರೀಕ್ಷಿಸಲಾಗುತ್ತದೆ. ಇದು ಶೇ.94ಕ್ಕಿಂತ ಕಡಿಮೆ ಇದ್ದರೆ ಅಂತಹ ಮಕ್ಕಳನ್ನು ಕೋವಿಡ್ ಲಕ್ಷಣಗಳಿರುವವರೆಂದು ಪರಿಗಣಿಸಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುತ್ತದೆ. ಪಾಸಿಟಿವ್ ಇರುವವರು ಯಾರದರೂ ಇದ್ದರೆ ಅವರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್.ರಾಮಚಂದ್ರನ್ ತಿಳಿಸಿದ್ದಾರೆ.