Asianet Suvarna News Asianet Suvarna News

Karnataka II PUC| ರಾಜ್ಯ ಪಿಯು ಬೋರ್ಡ್ ಪರೀಕ್ಷೆಯಲ್ಲಿ ಭಾರೀ ಬದಲಾವಣೆ!

* ಸೆಕೆಂಡ್ ಪಿಯು ಮಿಡ್ ಟರ್ಮ್ ಪರೀಕ್ಷೆ

* ಕೊರೋನಾ 3ನೇ ಅಲೆಯ ಆತಂಕ

* ಮಿಡ್ ಟರ್ಮ್ ಪರೀಕ್ಷೆಯಲ್ಲಿ ಭಾರಿ ಬದಲಾವಣೆ

* ನ.29ರಿಂದ ಡಿ.10ರವರೆಗೆ ನಡೆಯಲಿದೆ ಮಿಡ್ ಟರ್ಮ್ ಪರೀಕ್ಷೆ

Karnataka II PUC midterm exam PUE proposes Major changes in the examination system pod
Author
Bangalore, First Published Nov 15, 2021, 10:43 AM IST

-ಲಿಂಗರಾಜು ಕೋರಾ

ಬೆಂಗಳೂರು(ನ.15): ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯು (Karnataka Pre- University Borard) ಈ ಬಾರಿ ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆಯಲ್ಲಿ (Second PU Midterm Examination) ಗಮನಾರ್ಹ ಬದಲಾವಣೆ ತಂದಿದ್ದು, ವಾರ್ಷಿಕ ಪರೀಕ್ಷೆ ಮಾದರಿಯಲ್ಲಿ ತಾನೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ 6.5 ಲಕ್ಷ ಪಿಯು ವಿದ್ಯಾರ್ಥಿಗಳಿಗೂ ಏಕಕಾಲಕ್ಕೆ ಪರೀಕ್ಷೆ ನಡೆಸಲು ಮುಂದಾಗಿದೆ.

ಕೋವಿಡ್‌ 3ನೇ ಅಲೆಯ ಆತಂಕದ (Covid 19 Third Wave) ಹಿನ್ನೆಲೆಯಲ್ಲಿ ಈ ಬಾರಿಯೂ ವಾರ್ಷಿಕ ಪರೀಕ್ಷೆ ನಡೆಸಲು ಅನಾನುಕೂಲ ಆದೀತು ಎಂಬುದೂ ಈ ಬದಲಾವಣೆಗೆ ಕಾರಣ ಎಂದು ಉನ್ನತ ಮೂಲಗಳು ತಿಳಿಸಿವೆ.

"

ಪ್ರತೀ ವರ್ಷ ಏಕಕಾಲಕ್ಕೆ ಅರ್ಧವಾರ್ಷಿಕ ಪರೀಕ್ಷೆ ನಡೆಯುತ್ತಿರಲಿಲ್ಲ. ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಉಸ್ತುವಾರಿಯಲ್ಲಿ ಪ್ರತೀ ಜಿಲ್ಲೆಯಲ್ಲೂ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿಕೊಂಡು ಆಯಾ ಕಾಲೇಜುಗಳಲ್ಲೇ ಪರೀಕ್ಷೆ ನಡೆಸಿ ಮೌಲ್ಯಮಾಪನವನ್ನೂ ಕಾಲೇಜು ಹಂತದಲ್ಲೇ ನಡೆಸಲು ಅವಕಾಶವಿತ್ತು. ಫಲಿತಾಂಶವನ್ನು (Results) ಇಲಾಖೆಗೆ ಕಳಿಸುವ ಪರಿಪಾಠವೂ ಇರಲಿಲ್ಲ. ಆದರೆ, ಈ ಬಾರಿ ಸಿಬಿಎಸ್‌ಇ (CBSE), ಐಸಿಎಸ್‌ಇ (ICSE) ಮಾದರಿಯಲ್ಲಿ ಇಲಾಖೆಯಿಂದಲೇ ಏಕಕಾಲದಲ್ಲಿ ಅರ್ಧವಾರ್ಷಿಕ ಪರೀಕ್ಷೆ ನಡೆಸಲು ಹೊರಟಿದೆ. ಈಗಾಗಲೇ ನ.29ರಿಂದ ಡಿ.10ರವರೆಗೆ ಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.

3ನೇ ಅಲೆ ಭೀತಿ:

ಈ ಮಧ್ಯೆ, ಒಂದು ವೇಳೆ ಕೋವಿಡ್‌ 3ನೇ ಅಲೆ ಎದುರಾದರೆ ಪ್ರಸಕ್ತ ಸಾಲಿನಲ್ಲೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ (second PUC Midterm Examination) ನಡೆಸಲು ಅನಾನುಕೂಲ ಆದೀತು ಎಂಬ ಕಾರಣಕ್ಕಾಗಿ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಈ ಬಾರಿ ಅರ್ಧವಾರ್ಷಿಕ ಪರೀಕ್ಷೆಯನ್ನೇ ಗಂಭೀರವಾಗಿ ಪರಿಗಣಿಸಿದೆ. ಕೋವಿಡ್‌ 2ನೇ ಅಲೆಯಿಂದಾಗಿ ಕಳೆದ ಸಾಲಿನ (2020-21) ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರದ್ದುಪಡಿಸಿ ಅರ್ಧವಾರ್ಷಿಕ ಪರೀಕ್ಷೆ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶದ (SSLC Results) ಮೇಲೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಲಾಗಿತ್ತು. ಆದರೆ, ಬಹಳಷ್ಟುಕಾಲೇಜುಗಳು ಅರ್ಧವಾರ್ಷಿಕ ಪರೀಕ್ಷೆಯನ್ನೇ ನಡೆಸಿರಲಿಲ್ಲ. ವಿದ್ಯಾರ್ಥಿಗಳೂ ಈ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಕಂಡುಬಂದಿತ್ತು. ಇದರಿಂದ ಇಲಾಖೆಗೆ ಫಲಿತಾಂಶ ನೀಡುವುದು ಅಷ್ಟುಸಲೀಸಾಗಿರಲಿಲ್ಲ.

ಈ ಎಲ್ಲಾ ಹಿನ್ನೆಲೆಯಲ್ಲಿ ಈ ಬಾರಿ ಅರ್ಧ ವಾರ್ಷಿಕ ಪರೀಕ್ಷೆಯನ್ನೇ ಕೇಂದ್ರೀಯ ಪರೀಕ್ಷೆಯಂತೆ ನಡೆಸಲು ಇಲಾಖೆ ಮುಂದಾಗಿದೆ. ವಾರ್ಷಿಕ ಪರೀಕ್ಷೆ ಮಾದರಿಯಲ್ಲಿ ತಾನೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ನೀಡಿ ಒಂದೇ ಅವಧಿಯಲ್ಲಿ ಎಲ್ಲ ಕಾಲೇಜುಗಳಲ್ಲೂ ಪರೀಕ್ಷೆ ನಡೆಸುವುದು. ಬಳಿಕ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಯಾ ಜಿಲ್ಲೆ ಅಥವಾ ತಾಲ್ಲೂಕು ಕೇಂದ್ರದಲ್ಲಿ ಕೇಂದ್ರೀಕೃತ ಮೌಲ್ಯಮಾಪನ ಕೇಂದ್ರ ಆರಂಭಿಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲು ತೀರ್ಮಾನಿಸಿದೆ. ಮೌಲ್ಯಮಾಪನ ಮುಗಿದ ಬಳಿಕ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳ ಫಲಿತಾಂಶವನ್ನು ಇಲಾಖೆಯ ಸ್ಟೂಡೆಂಟ್‌ ಅಚೀವ್ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌(ಎಸ್‌ಎಟಿಎಸ್‌) ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ಸೂಚಿಸಿದೆ.

ಅಧಿಕಾರಿಗಳ ನಿರಾಕರಣೆ:

ಆದರೆ, ಅರ್ಧವಾರ್ಷಿಕ ಪರೀಕ್ಷಾ ಮಾದರಿ ಬದಲಿಸುವುದರ ಹಿಂದೆ ಕೊರೋನಾ ಮೂರನೇ ಅಲೆಯ ಭೀತಿ ಕೆಲಸ ಮಾಡಿದೆ ಎಂಬುದನ್ನು ಒಪ್ಪಿಕೊಳ್ಳಲು ಅಧಿಕಾರಿಗಳು ನಿರಾಕರಿಸುತ್ತಾರೆ. ಕಾಲೇಜುಗಳು ಪಠ್ಯಬೋಧನೆ ಪೂರ್ಣ ಆಗಿಲ್ಲ, ದಾಖಲಾತಿ ಪೂರ್ಣ ಆಗಿಲ್ಲ ಹೀಗೆ ಬೇರೆ ಬೇರೆ ಕಾರಣಕ್ಕೆ ಅರ್ಧವಾರ್ಷಿಕ ಪರೀಕ್ಷೆ ಮಾಡಬಹುದು ಮಾಡದೆಯೂ ಇರಬಹುದು. ವಿದ್ಯಾರ್ಥಿಗಳೂ ಗಂಭೀರವಾಗಿ ಪರಿಗಣಿಸಲ್ಲ ಈ ಹೀಗಾಗಿ ಈ ತೀರ್ಮಾನ ಎನ್ನುತ್ತಾರೆ. ಆದರೆ, ಇಲಾಖೆಯ ಉನ್ನತ ಮೂಲಗಳು ಮಾತ್ರ ವಾರ್ಷಿಕ ಪರೀಕ್ಷೆ ನಡೆಸದಂತಹ ಪರಿಸ್ಥಿತಿಯೇನಾದರೂ ಎದುರಾದರೆ ಆಗ ಈ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲು ಅನುಕೂಲವಾದೀತು ಎಂಬ ದೂರಾಲೋಚನೆಯಿಂದಲೇ ಇಲಾಖೆ ಈ ತೀರ್ಮಾನಕ್ಕೆ ಬಂದಿದೆ ಎಂದು ಖಚಿತವಾಗಿ ಹೇಳುತ್ತವೆ.

ಉಪನ್ಯಾಸಕರ ಸ್ವಾಗತ

ದ್ವಿತಿಯ ಪಿಯುಸಿ ಮಕ್ಕಳಿಗೆ ಅರ್ಧವಾರ್ಷಿಕ ಪರೀಕ್ಷೆಯನ್ನು ಏಕಕಾಲಕ್ಕೆ ನಡೆಸಲು ಇಲಾಖೆ ಕೈಗೊಂಡಿರುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಕೇಂದ್ರೀಕೃತ ಮೌಲ್ಯಮಾಪನ ಪದ್ಧತಿ ಕೈಬಿಟ್ಟು ಆಯಾ ಕಾಲೇಜುಗಳಲ್ಲೇ ಮೌಲ್ಯಮಾಪನಕ್ಕೆ ಅವಕಾಶ ಕೊಟ್ಟರೆ ಒಳ್ಳೆಯದು. ಈ ಸಂಬಂಧ ಶೀಘ್ರ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಮನವಿ ಸಲ್ಲಿಸಲಾಗುವುದು.

- ಪ್ರೊ.ನಿಂಗೇಗೌಡ, ರಾಜ್ಯಾಧ್ಯಕ್ಷರು, ರಾಜ್ಯ ಪಿಯು ಕಾಲೇಜು ಉಪನ್ಯಾಸಕರ ಸಂಘ

ಹೇಗೆ ನಡೆಯುತ್ತೆ?

- ಈವರೆಗೆ ಜಿಲ್ಲಾ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಾಗುತ್ತಿತ್ತು

- ಆಯಾ ಕಾಲೇಜುಗಳಲ್ಲೇ ಮೌಲ್ಯಮಾಪನ ನಡೆಯುತ್ತಿತ್ತು

- ಕಾಲೇಜುಗಳಿಗೆ ಸೀಮಿತವಾಗಿ ಪರೀಕ್ಷೆ ವೇಳಾಪಟ್ಟಿಇರುತ್ತಿತ್ತು

- ಈ ಬಾರಿ ಪಿಯು ಮಂಡಳಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಿದೆ

- ರಾಜ್ಯಾದ್ಯಂತ ಏಕಕಾಲಕ್ಕೆ ಅರ್ಧವಾರ್ಷಿಕ ಪರೀಕ್ಷೆ ನಡೆಯಲಿದೆ

- ಜಿಲ್ಲೆ/ತಾಲೂಕು ಮಟ್ಟದಲ್ಲಿ ಮೌಲ್ಯಮಾಪನ ಜರುಗಲಿದೆ

ಸಿಬಿಎಸ್‌ಇ ಮಾದರಿ

ಸಿಬಿಎಸ್‌ಇ, ಐಸಿಎಸ್‌ಇ ಮಾದರಿಯಲ್ಲಿ ರಾಜ್ಯದಲ್ಲೂ ಏಕಪ್ರಕಾರವಾಗಿ ಅರ್ಧವಾರ್ಷಿಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಕಾಲೇಜುಗಳು ಹಾಗೂ ವಿದ್ಯಾರ್ಥಿಗಳು ಅರ್ಧವಾರ್ಷಿಕ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಲಿ ಎಂಬ ಕಾರಣಕ್ಕೆ ಪರೀಕ್ಷಾ ವ್ಯವಸ್ಥೆಯಲ್ಲಿ ಈ ಬದಲಾವಣೆ ತರಲಾಗಿದೆಯೇ ಹೊರತು ಕೋವಿಡ್‌ 3ನೇ ಅಲೆ ಆತಂಕ ಮತ್ಯಾವುದೇ ಕಾರಣಕ್ಕೆ ಅಲ್ಲ.

ಸ್ನೇಹಲ್‌, ನಿರ್ದೇಶಕರು, ಪಿಯು ಇಲಾಖೆ

Follow Us:
Download App:
  • android
  • ios