Hijab Verdict: ಅಂತಿಮ ತೀರ್ಪು ಹಿನ್ನೆಲೆ ಶಾಲಾ-ಕಾಲೇಜ್ ಬಂದ್, ಬೆಂಗಳೂರಿನಲ್ಲಿ 1 ವಾರ ನಿಷೇದಾಜ್ಞೆ
ಹಿಜಾಬ್ ವಿವಾದದ ಮಹತ್ವದ ತೀರ್ಪು ಅನ್ನು ಮಾ.15 ರಂದು ರಾಜ್ಯ ಉಚ್ಚ ನ್ಯಾಯಾಲಯ ಮಾರ್ಚ್ 15 ರಂದು ಪ್ರಕಟಿಸಲಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಷೆ ಹೇರಲಾಗಿದೆ. ಜೊತೆಗೆ ಕೆಲ ಜಿಲ್ಲೆಗಳಲ್ಲಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಂಗಳೂರು, (ಮಾ.14): ಉಡುಪಿಯ ಕಾಪು ತಾಲೂಕಿನ ಕೂಸು ಹಿಜಾಬ್ ವಿವಾದ (Hijab Row), ನಂತರ ಜಿಲ್ಲೆಯ ಇತರ ಭಾಗಗಳಿಗೂ ವ್ಯಾಪಿಸಿ ಅಲ್ಲಿಂದ ರಾಜ್ಯದೆಲ್ಲಡೆ ಹರಿದಾಡಿ, ದೇಶದಾದ್ಯಂತ ಸುದ್ದಿ ಮಾಡಿತ್ತು. ಇದೀಗ ಕರ್ನಾಟಕ ಹೈಕೋರ್ಟ್ (Karnataka High Court) ಹಿಜಾಬ್ ವಿವಾದದ ಮಹತ್ವದ ತೀರ್ಪು ಅನ್ನು ಮಾ.15 ಪ್ರಕಟಿಸಲಿದೆ. ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಮಂಗಳವಾರ ಬೆಳಗ್ಗೆ 10.30ಕ್ಕೆ ಹೈಕೋರ್ಟ್ ಪೂರ್ಣ ಪೀಠ ಅಂತಿಮ ತೀರ್ಪು ನೀಡಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಷೆ ಹೇರಲಾಗಿದೆ. ಜೊತೆಗೆ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಾಳೆ ಹೈಕೋರ್ಟ್ ಅಂತಿಮ ತೀರ್ಪು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಬಾಹ್ಯ ಪರೀಕ್ಷೆಗಳು ವೇಳಾಪಟ್ಟಿಯಂತೆಯೇ ನಡೆಯಲಿದ್ದು, ಎಲ್ಲಾ ಆಂತರಿಕ ಪರೀಕ್ಷೆಗಳನ್ನು ಮುಂದೂಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಹೇಳಿದ್ದಾರೆ.
ಹಿಜಾಬ್ ವಿವಾದ ಹುಟ್ಟಿಕೊಂಡ ಉಡುಪಿ ಜಿಲ್ಲೆಯಲ್ಲೂಈ ಶಾಲಾ -ಕಾಲೇಜುಗಳಿಗೆ ರಜೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಮಾಹಿತಿ ನೀಡಿದ್ದಾರೆ.
JEE Main 2022 Exam: ಜೆಇಇ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪರಿಷ್ಕರಿಸಿದ ಎನ್‌ಟಿಎ
ಇನ್ನು ಶಿವಮೊಗ್ಗ ಜಿಲ್ಲೆಯಾದ್ಯಂತ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ 1 ವಾರ ಕಟ್ಟೆಚ್ಚರ: ನಾಳೆ ಹೈಕೋರ್ಟ್ ಅಂತಿಮ ತೀರ್ಪು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 1 ವಾರಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ. ಈ ಬಗ್ಗೆ ಮಾತನಾಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ , ಒಂದು ವಾರಗಳ ಕಾಲ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿಯಾಗಿದೆ. ಮಾತ್ರವಲ್ ನಗರದಲ್ಲಿ ಭದ್ರತೆಗಾಗಿ 10,000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಗೌರವಿಸೋಣ. ಯಾವುದೇ ಪ್ರತಿಭಟನೆ, ರ್ಯಾಲಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಮಾರ್ಚ್ 15 ರಿಂದ ಮಾರ್ಚ್ 21 ರವರೆಗೆ ಬೆಂಗಳೂರಿನಲ್ಲಿ ನಿಷೇದಾಜ್ಞೆ ಇರಲಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳ ವಿಚಾರಣೆ ಪೂರ್ಣಗೊಂಡಿದ್ದು, ಕರ್ನಾಟಕ ಹೈಕೋರ್ಟ್ (Karnataka High Court ) ತ್ರಿಸದಸ್ಯ ಪೂರ್ಣ ಪೀಠ, ತೀರ್ಪನ್ನು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ತೀರ್ಪು ಏನಾಗಲಿದೆ ಎನ್ನುವ ಕುತೂಹಲ ಮೂಡಿಸಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಖಾಜಿ ಜೈಬುನ್ನೀಸಾ ಮೊಹಿಯಿದ್ದೀನ್ ಅವರನ್ನು ಒಳಗೊಂಡ ಪೂರ್ಣ ಪೀಠ ಸುಮಾರು ದಿನಗಳ ಕಾಲ ವಿಚಾರಣೆ ನಡೆಸಿದೆ.
ಹಿಜಾಬ್ ವಿವಾದ ಅಂತಿಮ ಘಟ್ಟಕ್ಕೆ, ಹೈಕೋರ್ಟ್ನಿಂದ ನಾಳೆ (ಮಂಗಳವಾರ) ತೀರ್ಪು ಪ್ರಕಟ
ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ವಿಚಾರ ಈಗ ಸಾಂವಿಧಾನಿಕ ಪ್ರಶ್ನೆಯಾಗಿ ಪರಿಣಮಿಸಿದೆ. ಹಿಜಾಬ್ ನಿರ್ಬಂಧ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಫೆಬ್ರವರಿ 26ರಂದು ಮುಕ್ತಾಯಗೊಂಡಿದ್ದು ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.
ಪೂರ್ಣ ಪೀಠ ಸುಮಾರು 11 ದಿನಗಳ ಕಾಲ ವಿಚಾರಣೆ ನಡೆಸಿತ್ತು. ಹಿಜಾಬ್‌ಗೆ ಅವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಪರ ದೇವದತ್ ಕಾಮತ್ ಸೇರಿದಂತೆ ಇತರೆ ಹಿರಿಯ ವಕೀಲರು ವಾದ ಮಂಡಿಸಿದ್ದರು. ಇನ್ನು ಸರ್ಕಾರ ಪರ ವಕೀಲ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪ್ರತಿವಾದ ಮಾಡಿದ್ದರು.
ಮಧ್ಯಂತರ ಆದೇಶ ನೀಡಿದ್ದ ಕೋರ್ಟ್
ಈ ಹಿಂದೆ ಹೈಕೋರ್ಟ್ ತ್ರಿದಸ್ಯ ಪೀಠವು ಮೌಖಿಕ ಸಂದೇಶವನ್ನು ನೀಡಿದ್ದು, ಅಂತಿಮ ತೀರ್ಪಿನ ವರೆಗೆ ಶಾಲೆಗೆ ವಿದ್ಯಾರ್ಥಿಗಳು ಯಾವುದೇ ಧರ್ಮದ ಗುರುತುಗಳನ್ನು ಬಳಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು. ಆದರೂ ಸಹ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡೇ ಕಾಲೇಜಿಗಳಿಗೆ ಆಗಮಿಸಿದ್ದಾರೆ. ಅಲ್ಲದೇ ಹಿಜಾಬ್‌ಗೆ ಅವಕಾಶ ನೀಡಬೇಕೆಂದು ಕಾಲೇಜುಗಳ ಮುಂದೆ ಪ್ರತಿಭಟನೆಗಳು ನಡೆದಿದ್ದವು.