ಪಿಯು ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್‌ ತಡೆ

* ಪರೀಕ್ಷೆ ಇಲ್ಲದೆ ದ್ವಿತೀಯ ಪಿಯು ವಿದ್ಯಾರ್ಥಿಗಳ ಪಾಸ್‌ ನಿರ್ಧಾರಕ್ಕೆ ಆರಂಭಿಕ ಹಿನ್ನಡೆ
* 5.92 ಲಕ್ಷ ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಬೇಕಿದೆ
* 76 ಸಾವಿರ ಪುನರಾವರ್ತಿತ ಅಭ್ಯರ್ಥಿಗಳು
 

Karnataka High Court Stay PUC Result grg

ಬೆಂಗಳೂರು(ಜೂ.18): ಪುನರಾವರ್ತಿತ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡದೇ ಉತ್ತೀರ್ಣಗೊಳಿಸುವ ಕುರಿತಂತೆ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಸರ್ಕಾರ ತೀರ್ಮಾನಿಸುವವರೆಗೆ ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ.

ಪರೀಕ್ಷೆ ಇಲ್ಲದೇ ಪ್ರಸ್ತಕ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ ನೋಟಿಫಿಕೇಷನ್‌ ರದ್ದುಪಡಿಸುವಂತೆ ಕೋರಿ ನಗರದ ಜ್ಞಾನಮಂದಿರ ಎಜುಕೇಷನ್‌ ಟ್ರಸ್ಟ್‌ ಕಾರ್ಯದರ್ಶಿ ಎಸ್‌.ವಿ. ಸಿಂಗ್ರೇಗೌಡ (75) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠ, ಪುನರಾವರ್ತಿತ ವಿದ್ಯಾರ್ಥಿಗಳ ವಿಚಾರದಲ್ಲಿ ಯಾವ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು 12 ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯ ಸಲಹೆ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಆದರೆ, ಪ್ರಸಕ್ತ ಸಾಲಿನ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡುವುದು ಸರಿಯಲ್ಲ. ಹೀಗಾಗಿ, ಸಮಿತಿಯ ವರದಿ ಆಧರಿಸಿ ಸರ್ಕಾರ ತೀರ್ಮಾನ ಕೈಗೊಳ್ಳುವವರೆಗೂ ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಬಾರದು ಎಂದು ಆದೇಶಿಸಿ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.

CBSE 12th Result: ಜುಲೈ 31ಕ್ಕೆ ಸಿಗಲಿದೆ ಫಲಿತಾಂಶ, 3 ವರ್ಷದ ಅಂಕ ಆಧರಿಸಿ ಮಾರ್ಕ್ಸ್!

ಇದಕ್ಕೂ ಮುನ್ನ ರಾಜ್ಯ ಸರ್ಕಾರಿ ವಕೀಲರು ವಾದ ಮಂಡಿಸಿ, ಒಟ್ಟು 5.92 ಲಕ್ಷ ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಬೇಕಿದೆ. 76 ಸಾವಿರ ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಉತ್ತೀರ್ಣಗೊಳಿಸಬೇಕೆಂಬ ಬಗ್ಗೆ ಸಲಹೆ ನೀಡಲು ರಚಿಸಿರುವ ತಜ್ಞರ ಸಮಿತಿ 15 ದಿನಗಳಲ್ಲಿ ವರದಿ ನೀಡಲಿದೆ. ಅದನ್ನು ಆಧರಿಸಿ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿದ ನಂತರ ಸಮಿತಿಯ ವರದಿ ಆಧರಿಸಿ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ವಿಚಾರದಲ್ಲಿ ತೀರ್ಮಾನ ಕೈಗೊಂಡರೆ ಅದು ಬೇರೆ ರೀತಿಯ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗುತ್ತದೆ. ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಫಲಿತಾಂಶ ಮೊದಲು ಪ್ರಕಟಿಸಿದರೆ, ಅವರ ಪದವಿ ಕಾಲೇಜು ಪ್ರವೇಶ ಮತ್ತು ನೀಟ್‌ ಪರೀಕ್ಷೆ ಪ್ರಕ್ರಿಯೆ ಆರಂಭವಾಗುತ್ತದೆ. ಇದರಲ್ಲಿ ಭಾಗವಹಿಸುವ ಅವಕಾಶದಿಂದ ಪುನರಾವರ್ತಿತ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಆದ್ದರಿಂದ ತಜ್ಞರ ಸಮಿತಿ ವರದಿ ಆಧರಿಸಿ ತೀರ್ಮಾನ ಕೈಗೊಳ್ಳುವವರೆಗೆ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಫರೀಕ್ಷಾ ಫಲಿತಾಂಶ ಪ್ರಕಟಿಸಬಾರದು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿತು.

ಅರ್ಜಿದಾರ ಪರ ವಕೀಲ ಆರ್‌.ಪಿ. ಸೋಮಶೇಖರಯ್ಯ, ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಉತ್ತೀರ್ಣಗೊಳಿಸಲು ಸರ್ಕಾರವು ತೀರ್ಮಾನಿಸಿದೆ. ಇದೇ ಸೌಲಭ್ಯವನ್ನು ಪುನರಾವರ್ತಿತ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು. ಇಲ್ಲವಾದರೆ ತಾರತಮ್ಯ ಮಾಡಿದಂತಾಗುತ್ತದೆ ಎಂದು ಕೋರಿದರು.
 

Latest Videos
Follow Us:
Download App:
  • android
  • ios