ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟಕ್ಕೆ ಕರ್ನಾಟಕ ಹೈಕೋರ್ಟ್ ತಡೆ
* ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟಕ್ಕೆ ಹೈಕೋರ್ಟ್ ತಡೆ
* ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜ್ಯ ಹೈಕೋರ್ಟ್ ಅಸಮಾಧಾನ
* ಸಮಗ್ರ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ
ಬೆಂಗಳೂರು, (ಜೂನ್.15): ಕೋವಿಡ್ ಕಾರಣಕ್ಕೆ ಪರೀಕ್ಷೆ ಇಲ್ಲದೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಬ್ರೇಕ್ ಹಾಕಿದೆ.
ಸಾಮಾನ್ಯ ವಿದ್ಯಾರ್ಥಿಗಳಿಗೂ ಹಾಗೂ ರಿಪೀಟರ್ಸ್ ಗಳಿಗೂ ತಾರತಮ್ಯವೆಸಗಲಾಗುತ್ತಿದೆ. ರಿಪೀಟರ್ಸ್ ಗೂ ಪರೀಕ್ಷೆ ಇಲ್ಲದೇ ಪಾಸ್ ಮಾಡುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ.
ಶಿಕ್ಷಣ ಇಲಾಖೆ ಗೊಂದಲದ ತೀರ್ಮಾನ: ಕೋರ್ಟ್ ಮೆಟ್ಟಿಲೇರಿದ ಪಿಯುಸಿ ಫೇಲಾದ ವಿದ್ಯಾರ್ಥಿಗಳು
ರೆಗ್ಯೂಲರ್ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಿ, ರಿಪೀಟರ್ಸ್‌ಗೆ ಮಾತ್ರ ಪರೀಕ್ಷೆ ನಡೆಸುತ್ತಿರುವುದು ಸರಿಯಲ್ಲ. ಪಾಸ್ ಮಾಡುವುದಾದರೆ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಬೇಕು. ತಾರತಮ್ಯ ಮಾಡುತ್ತಿರುವ ಉದ್ದೇಶವೇನು ಎಂಬ ಬಗ್ಗೆ ಎಜಿಗೆ ಮಾಹಿತಿ ನೀಡಿ, ಗುರುವಾರದೊಳಗೆ ನ್ಯಾಯಾಲಯಕ್ಕೆ ವಿವರಿಸುವಂತೆ ಕೋರ್ಟ್ ಆದೇಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿದೆ.
ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನ ರದ್ದು ಮಾಡಿ, ಎಲ್ಲಾ ವಿದ್ಯಾರ್ಥಿಗಳನ್ನ ಪಾಸ್ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದ್ರೆ, ಇದಕ್ಕೆ ರಿಪೀಟರ್ಸ್ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮನ್ನೂ ಸಹ ಪಾಸ್ ಮಾಡಿ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.
"