ಬೆಂಗಳೂರು(ನ.09):  ಕೊರೋನಾ ಕಾರಣದಿಂದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್‌) ಘಟಿಕೋತ್ಸವ ಸಮಾರಂಭ ವಿಳಂಬವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ತಾತ್ಕಾಲಿಕ ಎಂಬಿಬಿಎಸ್‌ ಪದವಿ ಪ್ರಮಾಣಪತ್ರ ನೀಡುವಂತೆ ಹೈಕೋರ್ಟ್‌ ನಿರ್ದೇಶಿಸಿದೆ. 

ಮಂಗಳೂರಿನ ಲ್ಯಾನ್ಸನ್‌ ಬ್ರಿಜೇಶ್‌ ಕೊಲಾಕೊ ಎಂಬ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ, ‘ಘಟಿಕೋತ್ಸವ ವಿಳಂಬದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಲಿದೆ. ಹೀಗಾಗಿ, ಅಂತಿಮ ಪದವಿಗೆ ಸಮಾನಾಂತರವಾಗಿ ತಾತ್ಕಾಲಿಕ ಪದವಿ ಪರಿಗಣಿಸಬೇಕು. ಸೂಕ್ತ ತಿದ್ದುಪಡಿಯೊಂದಿಗೆ ತಾತ್ಕಾಲಿಕ ಪದವಿ ಪ್ರಮಾಣ ನೀಡಲು ಎರಡು ವಾರಗಳಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಆರ್‌ಜಿಯುಎಚ್‌ಎಸ್‌ಗೆ ನಿರ್ದೇಶನ ನೀಡಿದೆ.

ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆ ಬದಲಾವಣೆ: ಸರ್ಕಾರದ ಕೈ ಸೇರಿದ ವರದಿ

ವಿದ್ಯಾರ್ಥಿಯ ಪರ ವಕೀಲರು ವಾದ ಮಂಡಿಸಿ, ‘ಅರ್ಜಿದಾರರು ಸುಳ್ಯದ ಕೆ.ವಿ.ಗೌಡ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಬಿಬಿಎಸ್‌ ಕೋರ್ಸ್‌ ಪೂರ್ಣಗೊಳಿಸಿದ್ದಾರೆ. ಆದರೆ, ಕೋವಿಡ್‌ 19ನಿಂದ ಘಟಿಕೋತ್ಸವ ಸಮಾರಂಭ ನಡೆದಿಲ್ಲ. ಹೀಗಾಗಿ ಎಂಬಿಬಿಎಸ್‌ ಪದವಿ ಪ್ರದಾನ ವಿಳಂಬವಾಗಿದೆ. ಪರಿಣಾಮ ಆತನ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪದವಿ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಕನಿಷ್ಠ ತಾತ್ಕಾಲಿಕ ಪದವಿ ಪ್ರಮಾಣ ಪತ್ರನೀಡಲು ನಿರ್ದೇಶನ ನೀಡಬೇಕು’ ಎಂದು ಕೋರಿದರು. ಆ ವಾದ ಪರಿಗಣಿಸಿದ ನ್ಯಾಯಪೀಠ ಈ ಆದೇಶ ನೀಡಿತು.