ಶಾಲಾ ಬಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಕಣ್ಣು ಕಳೆದುಕೊಂಡ ಪ್ರಕರಣದಲ್ಲಿ, ಮಗು ಬಸ್ ಹತ್ತಿದಾಗಿನಿಂದ ಮನೆಗೆ ಸುರಕ್ಷಿತವಾಗಿ ತಲುಪುವವರೆಗೂ ಶಾಲಾ ಆಡಳಿತ ಮಂಡಳಿಯೇ ಜವಾಬ್ದಾರಿ ಎಂದು ಕೋರ್ಟ್ ಸ್ಪಷ್ಟಪನೆ. ಮದ್ದೂರಿನ ದಿವ್ಯಜ್ಯೋತಿ ಶಾಲೆ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.

ಬೆಂಗಳೂರು (ಜು.3): ಶಾಲಾ ಬಸ್ ಶಾಲಾ ಆವರಣದಲ್ಲಿ ಮಾತ್ರವಲ್ಲದೆ ಮಗು ಬಸ್ ಹತ್ತಿದಾಗಿನಿಂದ ಸುರಕ್ಷಿತವಾಗಿ ಪೋಷಕರಲ್ಲಿಗೆ ಸೇರುವವರೆಗೂ ಮಗುವಿನ ರಕ್ಷಣೆ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಆಗಿರುತ್ತದೆ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಣ್ಣು ಕಳೆದುಕೊಂಡ ವಿದ್ಯಾರ್ಥಿ

ಶಾಲಾ ಬಸ್‌ ಅಪಘಾತದಲ್ಲಿ 4ನೇ ತರಗತಿ ವಿದ್ಯಾರ್ಥಿಯೊಬ್ಬ ಕಣ್ಣು ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ಜಿಲ್ಲೆಯ ಮದ್ದೂರಿನ ದಿವ್ಯಜ್ಯೋತಿ ಶಾಲಾ ಆಡಳಿತ ಮಂಡಳಿ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದೆ.

ಶಾಲೆ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ಕೋರ್ಟ್ ನಿರಾಕರಣೆ

ಅಪಘಾತ ಸಂಬಂಧ ತನ್ನ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಶಾಲಾ ಬಸ್‌ನಲ್ಲಿ ಮಕ್ಕಳ ಸುರಕ್ಷತೆ ಎನ್ನುವುದು ಕೇವಲ ದಾಕ್ಷಿಣ್ಯ ಅಥವಾ ಅನುಕೂಲದ ವಿಷಯವಲ್ಲ. ಇದು ''''ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಧಿನಿಯಮಗಳು-2018'''' ರ ಅಡಿ ಕಡ್ಡಾಯವಾಗಿ ಪಾಲಿಸಬೇಕಾದ ಶಾಸನಬದ್ಧ ಜವಾಬ್ದಾರಿ. ಮಗು ಶಾಲಾ ಬಸ್ ಹತ್ತಿದ ಮೇಲೆ, ಕೊನೆಯ ಸ್ಟಾಪ್ ಬರುವವರೆಗೂ ಶಾಲಾ ಮಂಡಳಿ ತಾನು ಹೊಣೆಗಾರನಲ್ಲ ಎಂದು ಹೇಳಲಾಗುವುದಿಲ್ಲ ಎಂದು ನುಡಿದಿದೆ.

ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪುಟ್ಟ ಮಗುವೊಂದು ಇಡೀ ಜೀವನವನ್ನು ದೃಷ್ಟಿಹೀನತೆಯ ಶಾಪದೊಂದಿಗೆ ಕಳೆಯುವಂತಾಗಿದೆ. ಇಂಥ ಗಂಭೀರ ಪರಿಸ್ಥಿತಿಯಲ್ಲಿ, ತನಿಖೆಯ ಆರಂಭಿಕ ಹಂತದಲ್ಲೇ ರದ್ದುಗೊಳಿಸಲು ಸಾಧ್ಯವಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಬಸ್‌ನಲ್ಲಿ ಅಟೆಂಡರ್ ಇದ್ದರೇ? ಸಿಸಿಟಿವಿ ಕೇವಲ ''''ಅಲಂಕಾರಿಕ ವಸ್ತು'''' ಆಗಿತ್ತೇ ಅಥವಾ ಚಾಲನೆಯಲ್ಲಿತ್ತೇ? ನಿಷೇಧಿತ ಅಥವಾ ಅಪಾಯಕಾರಿ ವಸ್ತುಗಳನ್ನು ಮಕ್ಕಳು ಬಸ್‌ನೊಳಗೆ ತರಲು ಹೇಗೆ ಸಾಧ್ಯವಾಯಿತು? ಆಡಳಿತ ಮಂಡಳಿ ನಿರ್ಲಕ್ಷ್ಯ ಇದೆಯೇ ಇಲ್ಲವೇ ಎಂಬ ಎಲ್ಲ ಪ್ರಶ್ನೆಗಳಿಗೆ ಪೂರ್ಣ ಪ್ರಮಾಣದ ತನಿಖೆಯಿಂದ ಉತ್ತರ ಸಿಗಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.

ದಿವ್ಯಜ್ಯೋತಿ ಶಾಲೆ ಪ್ರಕರಣದ ವಿವರ

2025ರ ಆಗಸ್ಟ್ 1ರಂದು ದಿವ್ಯಜ್ಯೋತಿ ಶಾಲೆ ಬಸ್‌ನಲ್ಲಿ ಇತರೆ ವಿದ್ಯಾರ್ಥಿಗಳು ತಂದಿದ್ದ ಬಣ್ಣದ ಕಾಗದ ಹಾಗೂ ಪಟಾಕಿ ಮಾದರಿಯ ಸಿಡಿ ಮದ್ದುಸಿಡಿದು 4ನೇ ತರಗತಿಯ ವಿದ್ಯಾರ್ಥಿ ಕಣ್ಣು ಕಡೆದುಕೊಂಡಿದ್ದರು. ಚಿಕಿತ್ಸೆ ಬಳಿಕ ವೈದ್ಯರು ಶೇ.40 ರಷ್ಟು ಅಂಗವೈಕಲ್ಯ ದೃಢೀಕರಿಸಿದ್ದರು.

ಘಟನೆಗೆ ಶಾಲೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಾಲಕನ ಪೋಷಕರು ದಾಖಲಿಸಿದ್ದ ದೂರಿನ ಸಂಬಂಧ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ವಿಚಾರಣೆ ವೇಳೆ ಅರ್ಜಿದಾರ ಶಾಲೆ ಪರ ವಕೀಲರು, ಇದು ಶಾಲಾ ಅವಧಿ ನಂತರ ಬಸ್‌ನಲ್ಲಿ ಮತ್ತೊಂದು ಮಗು ಮಾಡಿದ ಆಕಸ್ಮಿಕ ಕೃತ್ಯ. ಇದಕ್ಕೆ ಶಾಲಾ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲು ಅವಕಾಶವಿಲ್ಲ. ಶಾಲಾ ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಅಟೆಂಡರ್‌ ಒಬ್ಬರನ್ನು ನಿಯೋಜಿಸಲಾಗಿದೆ. ಆದ್ದರಿಂದ ಎಫ್ಐಆರ್ ರದ್ದುಗೊಳಿಸಬೇಕು ಎಂದು ಕೋರಿದ್ದರು.

ವಿಚಾರಣೆ ವೇಳೆ ಅರ್ಜಿದಾರ ಶಾಲೆ ಪರ ವಕೀಲರು, ಇದು ಶಾಲಾ ಅವಧಿಯ ನಂತರ ಬಸ್‌ನಲ್ಲಿ ಮತ್ತೊಂದು ಮಗು ಮಾಡಿದ ಆಕಸ್ಮಿಕ ಕೃತ್ಯ. ಇದಕ್ಕೆ ಶಾಲಾ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲು ಅವಕಾಶವಿಲ್ಲ. ಶಾಲಾ ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಅಟೆಂಡರ್‌ ಒಬ್ಬರನ್ನು ನಿಯೋಜಿಸಲಾಗಿದೆ. ಆದ್ದರಿಂದ ಎಫ್ಐಆರ್ ರದ್ದುಗೊಳಿಸಬೇಕು ಎಂದು ಕೋರಿದ್ದರು.