Asianet Suvarna News Asianet Suvarna News

ರಾಜ್ಯದ 150 ಐಟಿಐ ಕಾಲೇಜು ಮೇಲ್ದರ್ಜೆಗೆ

ರಾಜ್ಯದ ಪ್ರಮುಖ 150 ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. 

Karnataka Govt To Decide upgrade Karnataka ITI Colleges snr
Author
Bengaluru, First Published Oct 2, 2020, 7:14 AM IST
  • Facebook
  • Twitter
  • Whatsapp

 ಬೆಂಗಳೂರು (ಅ.02):  ರಾಜ್ಯದಲ್ಲಿ ಮೂಲಸೌಕರ್ಯ ಹಾಗೂ ಆಧುನಿಕ ತಂತ್ರಜ್ಞಾನದ ಅಭಾವದಿಂದ ಸೊರಗುತ್ತಿರುವ ಸರ್ಕಾರಿ ಐಟಿಐ ಸಂಸ್ಥೆಗಳಿಗೆ ಹೊಸ ಮೆರುಗು ನೀಡಲು ಸರ್ಕಾರ ಹಾಗೂ ಟಾಟಾ ಟೆಕ್ನಾಲಜೀಸ್‌ ಮುಂದಾಗಿವೆ.

ಒಟ್ಟು 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌ ಸಹಭಾಗಿತ್ವದಲ್ಲಿ 4636.50 ಕೋಟಿ ರು. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕೈಗಾರಿಕೆ ಕ್ಷೇತ್ರಕ್ಕೆ ಪ್ರಸ್ತುತ ಅಗತ್ಯವಿರುವಂತಹ ಮಾನವ ಸಂಪನ್ಮೂಲ ಸೃಜಿಸಲು ಅಗತ್ಯವಾಗಿರುವಂತೆ ಸರ್ಕಾರಿ ಐಟಿಐ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವುದು. ಇದಕ್ಕೆ ಅಗತ್ಯವಾದ ಡಿಜಿಟಲೀಕರಣ, ಕಂಪ್ಯೂಟರೀಕರಣ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಟಾಟಾ ಟೆಕ್ನಾಲಜೀಸ್‌ ಈಗಾಗಲೇ ಮಹಾರಾಷ್ಟ್ರದಲ್ಲಿ ಇದೇ ರೀತಿ ಯೋಜನೆ ಕೈಗೆತ್ತಿಕೊಂಡಿದ್ದು, ಮೂರು ವರ್ಷದಲ್ಲಿ 419 ಐಟಿಐಗಳ ಮೇಲ್ದರ್ಜೆಗೇರಿಸುವ ಒಪ್ಪಂದ ಮಾಡಿಕೊಂಡಿದೆ.

ರಾಜ್ಯದಲ್ಲಿ ಪ್ರತಿ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ತಲಾ 30.91 ಕೋಟಿ ರು. 4,636.50 ಕೋಟಿ ರು. ವೆಚ್ಚ ಮಾಡಲಿದ್ದು, ಇದರಲ್ಲಿ ಶೇ.88 (4,080 ಕೋಟಿ ರು.) ಟಾಟಾ ಟೆಕ್ನಾಲಜೀಸ್‌ ಭರಿಸಲಿದೆ. ಪ್ರತಿ ಐಟಿಐ ಕಾಲೇಜಿಗೆ 3.71 ಕೋಟಿ ರು.ಗಳನ್ನು ಮಾತ್ರ ರಾಜ್ಯ ಸರ್ಕಾರ ವೆಚ್ಚ ಮಾಡಲಿದೆ. ಮುಂದಿನ ಐದು ವರ್ಷಗಳಲ್ಲಿ ಉಚಿತ ನಿರ್ವಹಣೆ ಮತ್ತು ಎರಡು ವರ್ಷಕ್ಕೆ 300 ಜನರನ್ನು ತರಬೇತಿದಾರರನ್ನಾಗಿ ಮಾಡುವುದು, ಉಚಿತ ಆನ್‌ಲೈನ್‌ ವೇದಿಕೆ ಒದಗಿಸುವುದು ಇದರ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

657 ಕೋಟಿ ರು. ಸಾಲಕ್ಕೆ ಒಪ್ಪಿಗೆ:

ರಾಜ್ಯ ಸರ್ಕಾರವು ಪ್ರತಿ ಐಟಿಐಗೆ 3.71 ಕೋಟಿ ರೂ., ಶೇ.18 ಜಿಎಸ್‌ಟಿ ಒಟ್ಟು 4.38 ಕೋಟಿಯಂತೆ 657 ಕೋಟಿ ಭರಿಸಬೇಕು. ಇದಕ್ಕಾಗಿ ಸಾಲ ಪಡೆಯಲು ಹಣಕಾಸು ಇಲಾಖೆಯ ಅನುಮೋದನೆ ಪಡೆಯಲಾಗುವುದು. ಜತೆಗೆ 150 ಐಟಿಐ ಕಾಲೇಜುಗಳಿಗೆ ಹೊಸ ಕಟ್ಟಡ ಕಾಮಗಾರಿ, ದುರಸ್ಥಿ ಹಾಗೂ ಪೀಠೋಪಕರಣ, ಹೆಚ್ಚುವರಿ ವಿದ್ಯುತ್‌ ಸಂಪರ್ಕ ಇತ್ಯಾದಿಗಳಿಗಾಗಿ 105 ಕೋಟಿ ರು. ಅನ್ನು ಕೌಶಲ್ಯ ಅಭಿವೃದ್ಧಿಯ ಅನುದಾನದಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಶಾಲೆ- ಕಾಲೇಜು ಆರಂಭ: ಶೀಘ್ರವೇ ಸ್ಪಷ್ಟ ಮಾಹಿತಿ ಎಂದ ಡಿಸಿಎಂ

ಒಡಂಬಡಿಕೆಯಲ್ಲಿ ಕೈಗಾರಿಕೆಗಳೊಂದಿಗೆ ಲಿಂಕೇಜ್‌, ಪಾಲುದಾರಿಕೆ ಮಾಡಿಕೊಂಡು ಉದ್ಯೋಗ ಅವಕಾಶ ಕಲ್ಪಿಸಲು ಟೆಕ್ನಾಲಜಿ ಹಬ್‌ಗಳನ್ನು ತೆರೆಯಲಾಗುವುದು. ತರಬೇತಿ ಪಡೆದವರಿಗೆ ರಾಜ್ಯ ಹಾಗೂ ಹೊರ ರಾಜ್ಯದ ಉದ್ದಿಮೆಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಲೂ ಸಹ ನೆರವಾಗಲಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಪ್ರಸ್ತುತ 270 ಸರ್ಕಾರಿ, 196 ಅನುದಾನಿತ ಹಾಗೂ 1,247 ಖಾಸಗಿ ಐಟಿಐ ಸಂಸ್ಥೆಗಳಿವೆ. ಎಲ್ಲಾ ವರ್ಗದ ಐಟಿಐಗಳಲ್ಲಿ 1.8 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. 150 ಸರ್ಕಾರಿ ಐಟಿಐಗಳಿಗೆ ಮಾತ್ರ ಸ್ವಂತ ಕಟ್ಟಡದಲ್ಲಿದ್ದು, ಅಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ.

Follow Us:
Download App:
  • android
  • ios