ಬ್ರಾಹ್ಮಣ ವಿದ್ಯಾರ್ಥಿಗಳಿಗೆ ₹5.8 ಕೋಟಿ ಶಿಷ್ಯವೇತನ ಬಿಡುಗಡೆ; ಈಗಲೇ ಖಾತೆ ಚೆಕ್ ಮಾಡಿ!
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಾಂದೀಪನಿ ಶಿಷ್ಯವೇತನ ಯೋಜನೆಯಡಿ 2023-24ನೇ ಸಾಲಿನಲ್ಲಿ ಅರ್ಹ ವಿದ್ಯಾರ್ಥಿಗಳಿಗೆ 5.85 ಕೋಟಿ ರೂ. ಶಿಷ್ಯವೇತನ ಬಿಡುಗಡೆ ಮಾಡಲಾಗಿದೆ. ಒಟ್ಟು 3,958 ಅರ್ಹ ಅರ್ಜಿಗಳ ಪೈಕಿ, ಈ ಹಿಂದೆ 1737 ವಿದ್ಯಾರ್ಥಿಗಳಿಗೆ 2.41 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು, ಈಗ ಉಳಿದ 2,221 ವಿದ್ಯಾರ್ಥಿಗಳಿಗೆ 3.44 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಬೆಂಗಳೂರು (ಜ.02): ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಾಂದೀಪನಿ ಶಿಷ್ಯವೇತನ ಯೋಜನೆಯಡಿ 2023-24 ನೇ ಸಾಲಿನಲ್ಲಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಅರ್ಹರಿಗೆ 5.85 ಕೋಟಿ ರೂ. ಶಿಷ್ಯವೇತನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಒಂದು ಪೋಸ್ಟರ್ ಮೂಲಕ ಹಣ ಬಿಡುಗಡೆ ಮಾಡಿದ ಸರ್ಕಾರಿ ಆದೇಶ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಾಂದೀಪನಿ ಶಿಷ್ಯವೇತನ ಯೋಜನೆಯಡಿ 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸುಮಾರು ₹5.85 ಕೋಟಿ ಶಿಷ್ಯವೇತನ ಬಿಡುಗಡೆಗೊಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಅನುದಾನ ಬಿಡುಗಡೆ ವಿವರ:
2023-24ನೇ ಸಾಲಿಗೆ ಸ್ವೀಕರಿಸಲಾದ ಅರ್ಜಿಗಳ ಸಂಖ್ಯೆ 4474 ಆಗಿತ್ತು. ಇದರಲ್ಲಿ ಶಿಷ್ಯವೇತನ ಪಾವತಿಸಬಹುದಾದ (ಅರ್ಹತೆ ಉಳ್ಳವರು) ಅರ್ಹ ಅರ್ಜಿಗಳ ಸಂಖ್ಯೆ 3,958 ಆಗಿತ್ತು. ಮಾರ್ಚ್ 2024ರ ಅಂತ್ಯಕ್ಕೆ 1737 ಅರ್ಹ ವಿದ್ಯಾರ್ಥಿಗಳಿಗೆ ಅನುದಾನದ ಮೊತ್ತ 2.41 ಕೋಟಿ ರೂ. ಶಿಷ್ಯವೇತನ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: ಮಕ್ಕಳನ್ನು ಪಾಸ್ ಮಾಡ್ಲೇಬೇಕು ಎಂಬ ನೀತಿ ರದ್ದುಗೊಳಿಸಿದ ಕೇಂದ್ರ ಸರ್ಕಾರ
ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ & ಮಂಡಳಿಯು ಖಜಾನೆ ಮುಖಾಂತರ ಶಿಷ್ಯವೇತನ ಬಿಡುಗಡೆ ಮಾಡಬೇಕಾದ ಹಿನ್ನಲೆಯಲ್ಲಿ ಸದರಿ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಅಗತಯವಿತ್ತು. ಈ ಹಿನ್ನೆಲೆಯಲ್ಲಿ, ಡಿಸೆಂಬರ್ 2024ರ ಮಾಹೆಯಲ್ಲಿ ಬಾಕಿ ಉಳಿದ ಅರ್ಜಿಗಳನ್ನು ಪರಿಗಣಿಸಿ 2,221 ಅರ್ಜಿಗಳ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ 3.44 ಕೋಟಿ ರೂ. ಶಿಷ್ಯ ವೇತನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಸಾಂದೀಪನಿ ಯೋಜನೆಗೆ ಯಾರು ಅರ್ಹರು?
ರಾಜ್ಯದಲ್ಲಿ ಮೆಟ್ರಿಕ್ ನಂತರದ ಪಿಯುಸಿ (ಪ್ರಥಮ ಮತ್ತು ದ್ವಿತೀಯ) ಅಭ್ಯಾಸ ಮಾಡುತ್ತಿರುವ ಬ್ರಾಹ್ಮಣ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 'ಸಾಂದೀಪನಿ ಯೋಜನೆ' ಅಡಿಯಲ್ಲಿ 15 ಸಾವಿರ ರೂ. ಶಿಷ್ಯ ವೇತನ ನೀಡಲಾಗುತ್ತಿದೆ. ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಸಿಇಟಿ ಪ್ರವೇಶ ಪರೀಕ್ಷೆ ಮೂಲಕ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ದಾಖಲಾತಿ ಶುಲ್ಕದ ಮೊತ್ತದ 2/3 ಭಾಗ ಅಥವಾ ಗರಿಷ್ಠ 1 ಲಕ್ಷ ರೂ. ವರೆಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ ಸರ್ಕಾರ ಹಣ ಪಾವತಿಸುತ್ತದೆ.
ಇದನ್ನೂ ಓದಿ: ಇಟ್ಟಿಗೆ ಹೊತ್ತ ಕೂಲಿಯವನ ಮಗ 22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿ! ಸ್ಪೂರ್ತಿದಾಯಕ ಕಥೆ