ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದ ಸರ್ಕಾರ...!
ಖಾಸಗಿ ಶಾಲೆಗಳ ಶುಲ್ಕ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದರಿಂದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಬೆಂಗಳೂರು, (ಜ.30) : ಖಾಸಗಿ ಶಾಲೆಗಳ ಶುಲ್ಕ ವಸೂಲಿ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಶುಲ್ಕವನ್ನು ಶೇ 70ರಷ್ಟು ಮಾತ್ರ ಪಡೆದುಕೊಳ್ಳಬಹುದು.
2020-21ನೇ ಸಾಲಿನಲ್ಲಿನ ಶಾಲಾ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಶೇ.30ರಷ್ಟು ವಿನಾಯಿತಿಯನ್ನುನೀಡಲಾಗಿದ್ದು, ಶಾಲಾ ಬೋಧನಾ ಶುಲ್ಕವನ್ನು ಹೊರತು ಪಡಿಸಿ ಶಾಲೆಗಳು ಬೇರೆ ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುವಂತಿಲ್ಲ. ಒಂದೊಮ್ಮೆ ಪೋಷಕರು ಪೂರ್ಣ ಶುಲ್ಕವನ್ನು ನೀಡಿದ್ದರೆ, ಅಂತವರ ಶುಲ್ಕವನ್ನು ಮುಂದಿನ ಸಾರಿಗೆ ಹೊಂದಾಣಿಕೆ ಮಾಡುವಂತೆ ಸೂಚನೆ ನೀಡಲಾಗಿದೆ.
ಸಚಿವ ಸುರೇಶ್ ಕುಮಾರ್ ಮಹತ್ವದ ಆದೇಶ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಅಲ್ಲದೇ ಪೋಷಕರಿಗೆ ಮೂರು ಕಂತುಗಳಲ್ಲಿ ಶುಲ್ಕವನ್ನು ಕಟ್ಟುವಂತೆ ಅವಕಾಶವನ್ನು ನೀಡಬೇಕು ಅಂತ ಹೇಳಿದೆ. ಇನ್ನು ಶಾಲಾ ಶುಲ್ಕ ಕಡಿತ ಆದೇಶ ಪಾಲನೆಗೆ ಜಿಲ್ಲೆಗಳಲ್ಲಿ ಸಮಿತಿಗಳನ್ನು ರಚಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಎಲ್ಲಾ ಶಾಲಾ ಆಡಳಿತ ಮಂಡಳಿಗಳು ನಿಗದಿತ ಬೋಧನಾ ಶುಲ್ಕವನ್ನು ಶೇ 30ರಷ್ಟು ಕಡಿತಗೊಳಿಸಬೇಕು, ಶೇ 70ರಷ್ಟು ಮಾತ್ರ ಶುಲ್ಕ ಪಡೆಯಬೇಕೆಂದು ನಿನ್ನೆ (ಜ.29) ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದರು. ಇದೀಗ ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕೋವಿಡ್ 19 ಕಾರಣದಿಂದ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಇಬ್ಬರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಕೆಲ ಶಾಲೆಗಳಲ್ಲಿ ಶಿಕ್ಷಕರಿಗೆ ತಿಂಗಳ ಸಂಬಳ ಕೊಡಲು ದುಡ್ಡಿಲ್ಲದಂತಾಗಿದೆ. ಹೀಗಾಗಿ, ಎಲ್ಲರ ಹಿತದೃಷ್ಟಿಯಿಂದ ಶೇ 70ರಷ್ಟು ಮಾತ್ರ ಶುಲ್ಕ ಪಡೆಯಲು ಸೂಚಿಸಲಾಗಿದ್ದು, ಇದು ರಾಜ್ಯದ ಎಲ್ಲಾ ಮಾದರಿ ಶಾಲೆಗಳಿಗೆ ಅನ್ವಯವಾಗಲಿದೆ.