ಬೆಂಗಳೂರು (ಡಿ.14):  ಕೋವಿಡ್‌ 19 ಹಿನ್ನೆಲೆಯಲ್ಲಿ ಈ ಬಾರಿ ಶಾಲಾ ಪಠ್ಯ ಕಡಿತಗೊಳಿಸುವುದಾಗಿ ಹೇಳಿರುವ ರಾಜ್ಯ ಸರ್ಕಾರ ಯಾವ್ಯಾವ ಪಠ್ಯಗಳನ್ನು ಕಡಿತಗೊಳಿಸಲಾಗುತ್ತದೆ ಎಂಬ ಬಗ್ಗೆ ಇದುವರೆಗೂ ಸ್ಪಷ್ಟ ಮಾಹಿತಿ ನೀಡದಿರುವುದರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗೊಂದಲ ಹಾಗೂ ಆತಂಕಕ್ಕೆ ಸಿಲುಕಿದ್ದಾರೆ.

ಕಳೆದ ಮೇ- ಜೂನ್‌ನಿಂದ ಆರಂಭವಾಗಬೇಕಿದ್ದ ಶಾಲಾ ತರಗತಿ ಚಟುವಟಿಕೆಗಳು ಕೋವಿಡ್‌ ಹಿನ್ನೆಲೆಯಲ್ಲಿ ಇದುವರೆಗೂ ಆರಂಭಗೊಂಡಿಲ್ಲ. ಆದರೆ, ಸರ್ಕಾರ ಮಾತ್ರ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಕೊಂಚ ತಡವಾದರೂ ಪ್ರತಿ ವರ್ಷದಂತೆಯೇ ನಡೆಸುವುದಾಗಿ ಘೋಷಿಸಿತ್ತು. ಜತೆಗೆ, ಶೇ.30ರಷ್ಟುಪಠ್ಯ ಕಡಿತಗೊಳಿಸುವುದಾಗಿ ತಿಳಿಸಿತ್ತು.

ಅದರಂತೆ ಪಿಯು ಪಠ್ಯ ಕಡಿತಗೊಳಿಸಿದೆ. ಆದರೆ, ಎಸ್ಸೆಸ್ಸೆಲ್ಸಿ ತರಗತಿ ಪಠ್ಯ ಕಡಿತದ ಬಗ್ಗೆ ಇದುವರೆಗೂ ಯಾವ ಕ್ರಮ ವಹಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಯಾವ ಪಠ್ಯವನ್ನು ಅಧ್ಯಯನ ಮಾಡಬೇಕು ಎಂಬುದು ತಿಳಿಯದೆ ಆತಂಕದಲ್ಲಿದ್ದರೆ, ಶಿಕ್ಷಕರು ಯಾವ ಪಠ್ಯ ಬೋಧಿಸಬೇಕೆಂಬುದು ತಿಳಿಯದೆ ಗೊಂದಲಕ್ಕೆ ಸಿಲುಕಿದ್ದಾರೆ.

ಶಾಲೆ ಆರಂಭದ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಸುಧಾಕರ್

ಕೊರೋನಾ ಸೋಂಕು ಇಳಿಕೆ ಗತಿ ಮುಂದುವರೆದರೆ ಹಾಗೂ 2ನೇ ಅಲೆಯ ಲಕ್ಷಣಗಳು ಕಂಡುಬರದಿದ್ದರೆ ಜನವರಿಯಿಂದ ಶಾಲೆಗಳನ್ನು ಆರಂಭಿಸುವ ಚಿಂತನೆ ಸರ್ಕಾರಕ್ಕಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಕೊಂಚ ತಡವಾಗಿ ಅಂದರೂ ಮೇ-ಜೂನ್‌ನಲ್ಲಿ ನಡೆಸಲೇ ಬೇಕು. ಇಲ್ಲದಿದ್ದರೆ ಮುಂದಿನ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ತಡವಾಗುತ್ತವೆ. ಅದರಂತೆ ಜನವರಿಯಿಂದ ಶಾಲೆ ಆರಂಭಿಸಿದರೂ ನಾಲ್ಕೈದು ತಿಂಗಳು ಮಾತ್ರ ತರಗತಿ ಚಟುವಟಿಕೆಗೆ ಸಿಗುತ್ತದೆ. ಆನ್‌ಲೈನ್‌, ಆಫ್‌ಲೈನ್‌, ಟಿವಿ, ವಾಟ್ಸಾಪ್‌ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಈಗಾಗಲೇ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಒಂದಷ್ಟುಪಠ್ಯಗಳನ್ನು ಬೋಧಿಸಿವೆ. ಆದರೆ, ಬೋಧಿಸಿರುವ ಪಠ್ಯಗಳನ್ನೇ ಕಡಿತಗೊಳಿಸಿದರೆ ಹೇಗೆ ಎಂಬ ಆತಂಕ ಮಕ್ಕಳು ಮತ್ತು ಶಿಕ್ಷಕರು ಇಬ್ಬರಲ್ಲೂ ಕಾಡುತ್ತಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಸಿ) ಒಂದು ತಿಂಗಳ ಹಿಂದೆಯೇ ಪಠ್ಯ ಕಡಿತಗೊಳಿಸಿದೆ. ಆದರೆ, ರಾಜ್ಯ ಶಿಕ್ಷಣ ಇಲಾಖೆ ಪಠ್ಯ ಕಡಿತದ ಮಾಹಿತಿ ನೀಡಲು ಯಾಕಿಷ್ಟುನಿರ್ಲಕ್ಷ್ಯ ಮಾಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಕೋವಿಡ್‌ನಿಂದ ಮೊದಲೇ ಶೈಕ್ಷಣಿಕ ಚಟುವಟಿಕೆಗಳಿಂದ ಭಾಗಶಃ ದೂರ ಉಳಿದಿರುವ ಮಕ್ಕಳಿಗೆ ಸರ್ಕಾರದ ಕ್ರಮದಿಂದ ಇನ್ನಷ್ಟುಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು ಹಾಗೂ ಪೋಷಕರು.