ಬೆಂಗಳೂರು (ಮಾ.13):  ಕಳೆದ 2017-18ನೇ ಸಾಲಿಗೂ ಮುನ್ನ ಅಸ್ತಿತ್ವದಲ್ಲಿರುವ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಪದವಿ ಪೂರ್ವ ಕಾಲೇಜುಗಳ ಅನುಮತಿ ನವೀಕರಣಕ್ಕೆ ಸರ್ಕಾರ ಕೆಲವು ವಿನಾಯಿತಿ ನೀಡಿದೆ. 

ಹೆಚ್ಚುವರಿ ವಿಭಾಗ, ವಿಷಯ, ಭಾಷೆ ಮತ್ತು ಸಂಯೋಜನೆಗಳನ್ನು ನವೀಕರಿಸುವ ವೇಳೆ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ, ಕಟ್ಟಡ ಸುರಕ್ಷತಾ ಪ್ರಮಾಣ ಪತ್ರಗಳ ದಾಖಲೆಗಳನ್ನು ಸಲ್ಲಿಸುವುದಕ್ಕೆ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸೀಮಿತಗೊಳಿಸಿ ಶಿಕ್ಷಣ ಇಲಾಖೆ ವಿನಾಯಿತಿ ಕೊಟ್ಟಿದೆ. 

ಸಿಬಿಎಸ್‌ಇ ಶಾಲೆಗಳಲ್ಲಿ ಕಲಿಯುವ ಮಕ್ಕಳ ಪೋಷಕರಿಗಿದು ಗುಡ್ ನ್ಯೂಸ್

ಕೊರೋನಾ ನಂತರದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಶೈಕ್ಷಣಿಕ ಸಾಲಿಗೆ (2020-21) ಸೀಮಿತಗೊಳಿಸಿ ವಿನಾಯಿತಿ ನೀಡಲಾಗಿದೆ. ಕಳೆದ ಶೈಕ್ಷಣಿಕ ಸಾಲಿನ ದಾಖಲೆಗಳ ಆಧಾರದಲ್ಲಿ ನೋಂದಣಿ, ನವೀಕರಣ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ, ಆರ್‌ಟಿಇ ಮರುಪಾವತಿ, ದಾಖಲಾತಿ/ಹಾಜರಾತಿಗಳ ನೋಂದಣಿ, ನವೀಕರಣದ ನೆಪದಲ್ಲಿ ಅನಾವಶ್ಯಕ ಸಮಸ್ಯೆಗಳಿಗೆ ಕಾರಣವಾಗದಂತೆ ಕ್ರಮ ವಹಿಸುವಂತೆ ಇಲಾಖೆ ಅಧಿಕಾರಿಗಳಿಗೆ ಅಧೀನ ಕಾರ್ಯದರ್ಶಿ ಧನಂಜಯ ಆದೇಶ ಹೊರಡಿಸಿದ್ದಾರೆ.

ಸಮಿತಿ ರಚನೆ:  ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ವಿದ್ಯಾರ್ಥಿಗಳ ಸುರಕ್ಷತೆ, ಶಾಲಾ ಸುರಕ್ಷತೆ ಕುರಿತಂತೆ ಕಠಿಣ ಕ್ರಮಗಳನ್ನು ಅನುಸರಿಸಬೇಕಾಗಿದ್ದು,ಇಲಾಖೆ ಜವಾಬ್ದಾರಿಯಾಗಿದೆ. ಅಸ್ತಿತ್ವದಲ್ಲಿರುವ ಹಾಗೂ ಹೊಸ ಶಿಕ್ಷಣ ಸಂಸ್ಥೆಗಳಿಗೆ ವಿಶಿಷ್ಟನಿಯಮಗಳ ರಚನೆಗಾಗಿ ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ. ಸಂಕನೂರ ಅವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಶಾಲೆಯ ಭೌತಿಕ ಸುರಕ್ಷತೆ, ಮೂಲಭೂತ ಸೌಕರ್ಯ, ವಿಪತ್ತು ನಿರ್ವಹಣೆ, ಆರೋಗ್ಯ, ಸಾರಿಗೆ, ತುರ್ತು ಸನ್ನದ್ಧತೆ ಸೇರಿದಂತೆ ಎಲ್ಲ ಆಯಾಮಗಳನ್ನು ಈ ಸಮಿತಿ ಸಮಗ್ರವಾಗಿ ಅವಲೋಕಿಸಲಿದೆ ಎಂದು ತಿಳಿಸಿದೆ.

ಇತ್ತೀಚೆಗೆ ಖಾಸಗಿ ಶಾಲೆಗಳು ನಡೆಸಿದ್ದ ಹೋರಾಟದ ವೇಳೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಹಾಗೂ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರಗಳ ದಾಖಲೆಗಳನ್ನು ಸಲ್ಲಿಸುವ ಕುರಿತು ಮರು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದರು.