ಬೆಂಗಳೂರು(ಡಿ.29): ಜನವರಿ 1ರಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ. ಈ ಬಾರಿ ವಿಳಂಬವಾಗಿ ತರಗತಿಗಳು ಆರಂಭವಾಗುತ್ತಿರುವುದರಿಂದ ಎಸ್ಸೆಸ್ಸೆಲ್ಸಿ ತರಗತಿಯ ಪಠ್ಯವನ್ನು ಕಡಿತ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪಠ್ಯ ಕಡಿತವನ್ನು 1 ವಾರದಲ್ಲಿ ಪ್ರಕಟಿಸುವುದಾಗಿ ಸರ್ಕಾರ ತಿಳಿಸಿದೆ.

‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮುಂದಿನ ಪದವಿ ಪೂರ್ವ ಶಿಕ್ಷಣಕ್ಕೆ ಅವಶ್ಯವಾಗುವ ಕನಿಷ್ಠ ಜ್ಞಾನ ಹಾಗೂ ಪರೀಕ್ಷಾ ದೃಷ್ಟಿಯಿಂದ ಅವಶ್ಯಕವೆನಿಸುವ ಪಠ್ಯವನ್ನು ಬೋಧಿಸಲು ನಿರ್ಧರಿಸಲಾಗಿದೆ. ಬೋಧನೆಗೆ ಲಭ್ಯವಾಗುವ ಸಮಯದ ಆಧಾರದಲ್ಲಿ ರೂಪುರೇಷೆಗಳನ್ನು ಮುಂದಿನ ಒಂದು ವಾರದಲ್ಲಿ ಪ್ರಕಟಿಸಲಾಗುವುದು’ ಎಂದು ಸುರೇಶ್‌ಕುಮಾರ್‌ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಸೋಮವಾರ ಹೇಳಿದ್ದಾರೆ.

ಪಠ್ಯ ಕಡಿತ ಕುರಿತು ಮಾತನಾಡಿರುವ ಸಚಿವರು, ‘ಈಗಾಗಲೇ ಘೋಷಿಸಿರುವಂತೆ ಜನವರಿ ಒಂದಕ್ಕೆ ಶಾಲೆಗಳು ಆರಂಭವಾಗಲಿವೆ. ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಹಾಗೂ ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಶಾಲಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಜನವರಿ ಒಂದಕ್ಕೆ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಮತ್ತು ವಿದ್ಯಾಗಮ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದ್ದು, ಅದರ ಯಶಸ್ಸಿನ ಆಧಾರದ ಮೇಲೆ ಜ.15ರಿಂದ ಉಳಿದ ತರಗತಿಗಳ ಪ್ರಾರಂಭಿಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.