ಸಿಇಟಿ ವಿದ್ಯಾರ್ಥಿಗಳಿಗೆ 8 ಕೃಪಾಂಕ?
* ಭೌತಶಾಸ್ತ್ರ, ಗಣಿತ ವಿಷಯಗಳಿಗೆ 4 ಕೃಪಾಂಕ ನೀಡಲು ನಿರ್ಧಾರ
* ಮತ್ತಷ್ಟು ದೋಷ ಪತ್ತೆ: ಇನ್ನೂ 4 ಕೃಪಾಂಕ ನೀಡಲು ಪರಿಶೀಲನೆ
* 20ರೊಳಗೆ ಫಲಿತಾಂಶ
ಬೆಂಗಳೂರು(ಸೆ.13): ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕಳೆದ ತಿಂಗಳು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯಲ್ಲಿನ ಕೆಲವು ಲೋಪ, ತಪ್ಪುಗಳಿಂದ ಕೂಡಿರುವ ಪ್ರಶ್ನೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಟ್ಟು 8 ಕೃಪಾಂಕ ನೀಡುವ ಸಾಧ್ಯತೆ ಇದೆ. ಸೆ.20ಕ್ಕೆ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ.
ಭೌತಶಾಸ್ತ್ರ ಮತ್ತು ಗಣಿತ ವಿಷಯಗಳ ಕೆಲವು ಪ್ರಶ್ನೆಗಳಿಗೆ ನಾಲ್ಕು ಕೃಪಾಂಕ ನೀಡಲು ಈಗಾಗಲೇ ಬಹುತೇಕ ನಿರ್ಧರಿಸಲಾಗಿದೆ. ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತದ ಕೆಲವು ಪ್ರಶ್ನೆಗಳಿಗೆ ನಾಲ್ಕು ಕೃಪಾಂಕ ನೀಡುವ ಬಗ್ಗೆ ನಿರ್ಧಾರ ಬಾಕಿ ಇದೆ. ಈ ಬಗ್ಗೆ ತೀರ್ಮಾನ ತೆಗೆದುಕೊಂಡರೆ ಸಿಇಟಿ ಬರೆದಿರುವ ಎಲ್ಲ ವಿದ್ಯಾರ್ಥಿಗಳಿಗೂ 8 ಕೃಪಾಂಕಗಳು ದೊರೆಯಲಿವೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಪರೀಕ್ಷೆಯಲ್ಲಿ ಕೇಳಲಾಗಿದ್ದ ವಿವಿಧ ವಿಷಯಗಳ ಕೆಲ ಪ್ರಶ್ನೆ ಹಾಗೂ ಉತ್ತರಗಳು ಮತ್ತು ಪ್ರಾಧಿಕಾರ ಪ್ರಕಟಿಸಿರುವ ಕೀ ಉತ್ತರಗಳಿಗೆ ವಿದ್ಯಾರ್ಥಿಗಳಿಂದ ನೂರಾರು ಆಕ್ಷೇಪಗಳು ವ್ಯಕ್ತವಾಗಿವೆ. ಇದರ ಆಧಾರದ ಮೇಲೆ ಹಾಗೂ ಪ್ರಾಧಿಕಾರ ಸ್ವಯಂ ಪ್ರೇರಿತವಾಗಿ ನಡೆಸಿದ ಪರಿಶೀಲನೆಯಲ್ಲಿ ಕೆಲ ಪ್ರಶ್ನೆಗಳಲ್ಲಿ ತಪ್ಪು, ಗೊಂದಲಕಾರಿ ಅಂಶಗಳು ಕಂಡುಬಂದಿವೆ.
ಸಿಇಟಿ ಫಲಿತಾಂಶಕ್ಕೆ ಮುಹೂರ್ತ ಫಿಕ್ಸ್: ದಿನಾಂಕ ಬಹಿರಂಗಪಡಿಸಿದ ಅಶ್ವತ್ಥನಾರಾಯಣ
ಭೌತಶಾಸ್ತ್ರ ಮತ್ತು ಗಣಿತ ವಿಷಯದ ತಲಾ ಎರಡು ಪ್ರಶ್ನೆಗಳಿಗೆ ನೀಡಿರುವ ಉತ್ತರಗಳು ತಪ್ಪಾಗಿರುವುದು ಅಥವಾ ಪ್ರಶ್ನೆಗಳನ್ನೇ ಅಸಮಂಜಸವಾಗಿ ಕೇಳಿರುವುದು ಈಗಾಗಲೇ ಸ್ಪಷ್ಟವಾಗಿದೆ. ಹಾಗಾಗಿ ಈ ನಾಲ್ಕೂ ಪ್ರಶ್ನೆಗಳಿಗೆ ತಲಾ ಒಂದರಂತೆ ನಾಲ್ಕು ಕೃಪಾಂಕ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ರಸಾಯನಶಾಸ್ತ್ರದ ಎ1 ಶ್ರೇಣಿಯ ಪತ್ರಿಕೆಯಲ್ಲಿ 24ನೇ ಪ್ರಶ್ನೆಗೆ ನೀಡಿರುವ ಬಹು ಆಯ್ಕೆಯ ಉತ್ತರಗಳಲ್ಲಿ ಬಿ ಮತ್ತು ಸಿ ಎರಡೂ ಸರಿಯಾದ ಉತ್ತರವಾಗಿದೆ.
ಅದೇ ರೀತಿ ಗಣಿತ ವಿಷಯ ಎ ಶ್ರೇಣಿಯ 21ನೇ ಪ್ರಶ್ನೆ ಮತ್ತು 37ನೇ ಪ್ರಶ್ನೆಗಳಿಗೆ ನೀಡಿರುವ ಉತ್ತರಗಳು ಗೊಂದಲದಿಂದ ಕೂಡಿವೆ. ಜೀವಶಾಸ್ತ್ರ ವಿಷಯದ ಎ1 ಶ್ರೇಣಿಯ 40ನೇ ಪ್ರಶ್ನೆಗೆ ನೀಡಿರುವ ಉತ್ತರಗಳಲ್ಲಿ ಬಿ ಮತ್ತು ಡಿ ಎರಡೂ ಉತ್ತರಗಳೂ ಸರಿಯಾದ ಉತ್ತರಗಳಾಗಿವೆ ಎಂಬ ಆಕ್ಷೇಪಗಳಿದ್ದು ಅವುಗಳ ಬಗ್ಗೆ ಪರಿಶೀಲನೆಯಾಗುತ್ತಿದೆ. ಮೇಲ್ನೋಟಕ್ಕೆ ಈ ಪ್ರಶ್ನೆಗಳಲ್ಲಿನ ತಪ್ಪು, ಗೊಂದಲಗಳು ದೃಢಪಟ್ಟಿದ್ದು ಈ ಪ್ರಶ್ನೆಗಳಿಗೂ 4 ಕೃಪಾಂಕ ನೀಡುವ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಿದೆ. ಈ ಬಗ್ಗೆ ಅಂಕ ನೀಡಲು ತೀರ್ಮಾನವಾದರೆ ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಒಟ್ಟು 8 ಕೃಪಾಂಕಗಳು ದೊರೆಯಲಿವೆ ಎಂದು ಕೆಇಎ ಮೂಲಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿವೆ. ಅಲ್ಲದೆ, ವಿದ್ಯಾರ್ಥಿಗಳು ಸಲ್ಲಿಸಿರುವ ಇನ್ನಷ್ಟುಆಕ್ಷೇಪಗಳ ಪರಿಶೀಲನೆ ನಡೆಯುತ್ತಿದ್ದು ಅವುಗಳಲ್ಲಿ ಯಾವುದಾದರೂ ತಪ್ಪುಗಳಾಗಿರುವುದು ಕಂಡು ಬಂದರೆ ಕೃಪಾಂಕ ಸಂಖ್ಯೆ ಹೆಚ್ಚಾಗಬಹುದು ಎಂದು ಕೂಡ ಅವರು ಹೇಳಿದರು.
20ರೊಳಗೆ ಫಲಿತಾಂಶ:
ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಆರ್ಕಿಟೆಕ್ಚರ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ರಾಜ್ಯ ಸರ್ಕಾರ ಕಳೆದ ಆಗಸ್ಟ್ 27 ಮತ್ತು 28ರಂದು ಸಿಇಟಿ ಪರೀಕ್ಷೆ ನಡೆಸಿದೆ. ಫಲಿತಾಂಶವನ್ನು ಸೆ.20ರಂದು ಪ್ರಕಟಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಈಗಾಗಲೇ ಪ್ರಕಟಿಸಿದ್ದಾರೆ. ಫಲಿತಾಂಶ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿದೆ.