ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ, ಫೆ.10 ರಿಂದ ಫೆ.25ರ ವರೆಗೆ ಅನ್ವಯವಾಗುವಂತೆ ವೇಳಾಪಟ್ಟಿ ಸಿದ್ದಪಡಿಸಲು ಸೂಚನೆ ನೀಡಿದೆ. ಇದೇ ವೇಳೆ ಮಹತ್ವದ ತಾಕೀತು ಮಾಡಿದೆ.

ಬೆಂಗಳೂರು (ಜ.19) ಶಾಲೆ, ಕಾಲೇಜುಗಳು ವಾರ್ಷಿಕ ಪರೀಕ್ಷೆ ತಯಾರಿಗಳು ಆರಂಭಗೊಂಡಿದೆ. ಇದೀಗ ಶಿಕ್ಷಣ ಇಲಾಖೆ 2025-26ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳ ವಾರ್ಷಿಕ ಪರೀಕ್ಷೆ ಕುರಿತು ಮಹತ್ವದ ಸುತ್ತೋಲೆ ಹೊರಡಿಸಿದೆ. ಫೆ.10ರಿಂದ ಫೆ.25ರವರೆಗಿನ ಪ್ರತಿ ಕಾಲೇಜಿಗೆ ಅನ್ವಯವಾಗುವಂತೆ ವೇಳಾಪಟ್ಟಿಯನ್ನು ಸಿದ್ದಪಡಿಸಲು ಸೂಚನೆ ನೀಡಿದೆ. ಇದೇ ವೇಳೆ ಯಾವುದೇ ಕಾರಣಕ್ಕೂ ಪರೀಕ್ಷೆ ಸಂಬಂಧ ಹಣ ಸಂಗ್ರಹಿಸದಂತೆ ತಾಕೀತು ಮಾಡಿದೆ. ಪರೀಕ್ಷಾ ನಿಯಾಮಾವಳಿಗಳನ್ನು ಪಾಲಿಸುವ ಮೂಲಕ ಪರೀಕ್ಷೆ ನಡೆಸಲು ಸುತ್ತೋಲೆಯಲ್ಲಿ ಸೂಚಿಸಿದೆ.

ಪ್ರಥಮ ಪಿಯುಸಿ ಫಲಿತಾಂಶ ದಿನಾಂಕ

ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಪರೀಕ್ಷಾ ವೇಳಾಪಟ್ಟಿ ಮಾತ್ರವಲ್ಲ, ಫಲಿತಾಂಶದ ಕುರಿತು ಮಹತ್ವದ ಸೂಚನೆ ನೀಡಿದೆ. ಮಾರ್ಚ್ 30 ರಂದು ಪ್ರಥಮ ಪಿಯುಸಿ ಫಲಿತಾಂಶ ಘೋಷಣೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಈ ಕುರಿತು ಇಲಾಖೆ ಹೊರಡಿಸಿದ ಸುತ್ತೋಲೆ ವಿವರ

2025-26ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳ ವಾರ್ಷಿಕ ಪರೀಕ್ಷೆ ನಡೆಸುವ ಕುರಿತು ಇಲಾಖೆ ಹೊರಡಿಸಿರುವ ದಾಖಲಾತಿ ಮಾರ್ಗಸೂಚಿ ಅನ್ವಯ ದಿನಾಂಕ 10-02-2026 ರಿಂದ 25-02-2026 ರವರೆಗಿನ ದಿನಗಳಲ್ಲಿ ಪ್ರತಿ ಕಾಲೇಜಿಗೆ ಅನ್ವಯವಾಗುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದೆ. ಇದೇ ವೇಳೆ ಯಾವುದೇ ಕಾರಣಕ್ಕೂ ಪರೀಕ್ಷೆ ಸಂಬಂಧ ಹಣ ಸಂಗ್ರಹಿಸದಂತೆ ಹಾಗೂ ಎಲ್ಲಾ ಪರೀಕ್ಷಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಪರೀಕ್ಷೆಯನ್ನು ನಡೆಸಲು ತಿಳಿಸಿದೆ.

ಈ ಸಂಬಂಧ ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಳವಡಿಸಿರುವ ದ್ವಿತೀಯ ಪಿಯುಸಿ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅನುಸರಿಸಿ, ಅದೇ ಮಾದರಿಯಲ್ಲಿ ಪ್ರಥಮ ಪಿಯುಸಿ ತರಗತಿಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಯಾವುದೇ ನ್ಯೂನ್ಯತೆಗಳಿಲ್ಲದೆ ಹಾಗೂ ದೂರುಗಳಿಗೆ ಆಸ್ಪದವಿಲ್ಲದಂತೆ ಪರೀಕ್ಷಾ ಕಾರ್ಯ ನಡೆಸಲು ಸೂಚಿಸಿದೆ.

ದಿನಾಂಕ:25-02-2026 ರೊಳಗಾಗಿ ಎಲ್ಲಾ ಪರೀಕ್ಷಾ ಕಾರ್ಯಗಳನ್ನು ಪೂರ್ಣಗೊಳಿಸಿ ಮೌಲ್ಯಮಾಪನದ ನಂತರ ಅಂಕಗಳನ್ನು SATS ತಂತ್ರಾಂಶದಲ್ಲಿ ದಾಖಲಿಸಬೇಕು. ದಿನಾಂಕ:13-03-2026 ರೊಳಗೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಂದ ಫಲಿತಾಂಶ ಪಟ್ಟಿಗೆ ಅನುಮೋದನೆಯನ್ನು ಪಡೆದು ದಿನಾಂಕ: 30-03-2026 ರಂದು ಪ್ರಥಮ ಪಿಯುಸಿ ಫಲಿತಾಂಶವನ್ನು ಘೋಷಣೆ ಮಾಡುವುದು. ಈ ಸಂಬಂಧ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಲು ಸೂಚಿಸಿದೆ.