Asianet Suvarna News Asianet Suvarna News

ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ‌ನೀತಿಯ ಕೋರ್ಸ್ ಗಳಿಗೆ ಆ.23ರಿಂದ ದಾಖಲಾತಿ ಪ್ರಕ್ರಿಯೆಗೆ ಚಾಲನೆ

*ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಸಿಎಂ ಬೊಮ್ಮಾಯಿ ಅವರಿಂದ ಅಡ್ಮಿಷನ್ ಪ್ರಕ್ರಿಯೆಗೆ ಚಾಲನೆ
*ನಾಳೆ ಬೆಳಗ್ಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ʼನಲ್ಲಿ ಕಾರ್ಯಕ್ರಮ
*ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಕೂಡ ಉದ್ಘಾಟನೆ
*ಯುಜಿಸಿ ಮಾರ್ಗಸೂಚಿಯಂತೆ ಅಕ್ಟೋಬರ್ʼನಿಂದ ತರಗತಿ ಶುರು

Karnataka colleges admission Start From August 23rd for National Education Policy rbj
Author
Bengaluru, First Published Aug 22, 2021, 6:11 PM IST
  • Facebook
  • Twitter
  • Whatsapp

ಬೆಂಗಳೂರು, (ಆ.23): ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಕಲಿಕೆಗೆ ನಾಳೆಯಿಂದಲೇ (ಅಗಸ್ಟ್ 23) ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು. ಅಕ್ಟೋಬರ್ 1ರಿಂದಲೇ ಈ ತರಗತಿಗಳು ಆರಂಭವಾಗುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು. 

ಇಡೀ ದೇಶದಲ್ಲಿಯೇ ಶಿಕ್ಷಣ ನೀತಿಯನ್ನು ಎಲ್ಲರಿಗಿಂತ ಮೊದಲೇ ಜಾರಿ ಮಾಡುತ್ತಿರುವ ರಾಜ್ಯವೂ, ನೂತನ ಶಿಕ್ಷಣದ ನೀತಿಯ ಕಲಿಕೆಗೂ ಇತರೆ ರಾಜ್ಯಗಳಿಗಿಂತ ಮೊದಲೇ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಎರಡು ವರ್ಷ ಮಾತೃಭಾಷೆ ಕಡ್ಡಾಯವಾಗಿ ಕಲಿಯಬೇಕು

ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯ ಬಗ್ಗೆ ಬಿಜೆಪಿಯ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠವು ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ವರ್ಚುವಲ್ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಸಚಿವರು; “ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವರ್ಚುವಲ್ ವೇದಿಕೆ ಮೂಲಕ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ” ಎಂದರು. 

ಅಧಿಕೃತವಾಗಿ ನಾಳೆಯಿಂದಲೇ ಉನ್ನತ ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದ ಎಲ್ಲ  ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗುತ್ತದೆ. ಈ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲೇ ತಮ್ಮ ಆಯ್ಕೆಯ ಪಠ್ಯವನ್ನು ವ್ಯಾಸಂಗ ಮಾಡುವರು. ಅಕ್ಟೋಬರ್ ನಿಂದ  ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದರು. 

ರಾಜ್ಯ ಸರಕಾರದ ಹೆಗ್ಗುರಿ ಬಿಚ್ಚಿಟ್ಟ ಡಾ.ಸಿ.ಎನ್.‌ಅಶ್ವತ್ಥನಾರಾಯಣ

ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ 
ಇದರ ಜತೆಯಲ್ಲಿಯೇ ನಾಳೆ ದಿನವೇ ರಾಜ್ಯ ಸರಕಾರ ಮಹತ್ವಾಕಾಂಕ್ಷಿ ಯೋಜನೆಯಾದ ʼಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆʼ ಎಂಬ ವಿದ್ಯಾರ್ಥಿಗಳ ದಾಖಲಾತಿ ವ್ಯವಸ್ಥೆಯೂ ಲೋಕಾರ್ಪಣೆಯಾಗುತ್ತಿದೆ. ಸರಕಾರಿ ಕಾಲೇಜು ಮಾತ್ರವಲ್ಲ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲೂ ಈ ವ್ಯವಸ್ಥೆಯಲ್ಲೇ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು. 

ಇದು ಸಂಪೂರ್ಣವಾಗಿ ವೆಬ್ ಆಧಾರಿತವಾಗಿ ಆನ್ ಲೈನ್ ನಲ್ಲಿಯೇ ಅಡ್ಮಿಷನ್ ನಡೆಯುತ್ತದೆ. ಯಾವ ವಿದ್ಯಾರ್ಥಿ ಯಾವ ಕಾಲೇಜಿನಲ್ಲಿ ದಾಖಲಾಗಿದ್ದಾರೆ? ಯಾವ ಕೋರ್ಸು ತೆಗೆದುಕೊಂಡಿದ್ದಾರೆ? ಇತ್ಯಾದಿ ವಿಷಯಗಳ ಮಾಹಿತಿ ಸಂಪೂರ್ಣವಾಗಿ ಆಯಾ ವಿವಿ ಬಳಿ ಇರುತ್ತದೆ ಎಂದ ಅವರು, ಅದೇ ವಿದ್ಯಾರ್ಥಿಗಳೂ ಎಲ್ಲ ಮಾಹಿತಿಯನ್ನು ವೆಬ್ ಮೂಲಕವೇ ಪಡೆಯಬಹುದು ಎಂದರು ಅವರು. 

ಯುಜಿಸಿ ಮಾರ್ಗಸೂಚಿ ಪ್ರಕಾರ ತರಗತಿ 
ಕೇಂದ್ರದ ಧನ ಸಹಾಯ ಆಯೋಗ (ಯುಜಿಸಿ) ಮಾರ್ಗಸೂಚಿ ಪ್ರಕಾರವೇ ಅಕ್ಟೋಬರ್ 1ರಿಂದಲೇ ತರಗತಿಗಳನ್ನು ಆರಂಭ ಮಾಡಲು ಸರಕಾರ ನಿರ್ಧರಿಸಿದೆ. ಎಲ್ಲ ವಿವಿಗಳಿಗೂ ಇದು ಅನ್ವಯ ಆಗುತ್ತದೆ. ಅಷ್ಟರೊಳಗೆ ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾತಿ ಮುಗಿಸಿಕೊಂಡು ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಮಾಡಬೇಕು. ಎಲ್ಲವನ್ನೂ ತಂತ್ರಜ್ಞಾನದ ನೆರವಿನಿಂದಲೇ ಮಾಡುತ್ತಿರುವುದರಿಂದ ವಿಳಂಬ ಆಗುವುದಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 

ಶಿಕ್ಷಣ ನೀತಿಯಲ್ಲಿ ಕನ್ನಡ ಬೋಧನೆ ಮತ್ತು ಕಲಿಕೆಗೆ ಧಕ್ಕೆ ಉಂಟಾಗುತ್ತದೆ ಎಂದು ಕೆಲವರು ಹುಯಿಲೆಬ್ಬಿಸುತ್ತಿದ್ದಾರೆ. ಅಂಥದ್ದೇನೂ ಆಗುತ್ತಿಲ್ಲ. ಮೊದಲು ಒಂದು ವರ್ಷ ಮಾತೃಭಾಷೆ ಕಲಿಸುವ ಅಂಶವಿತ್ತು. ರಾಜ್ಯ ಸರಕಾರ ಅದನ್ನು ಎರಡು ವರ್ಷಗಳಿಗೆ ವಿಸ್ತರಿಸಿದೆ. ಎರಡು ವರ್ಷ ವಿದ್ಯಾರ್ಥಿ ಕಡ್ಡಾಯವಾಗಿ ತನ್ನ ಮಾತೃಭಾಷೆಯನ್ನು ವ್ಯಾಸಂಗ ಮಾಡಬೇಕಾಗುತ್ತದೆ. ಕನ್ನಡದ ವಿದ್ಯಾರ್ಥಿಗಳಿಗೂ ಇದು ಅನ್ವಯ ಆಗುತ್ತದೆ ಎಂದು ಅವರು ಹೇಳಿದರು. 

ಅತಿಥಿ ಉಪನ್ಯಾಸಕರಿಗೆ ಸಮಸ್ಯೆ ಇಲ್ಲ 
ಶಿಕ್ಷಣ ನೀತಿ ಜಾರಿ ನಂತರ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಯಾರನ್ನೂ ತೆಗದು ಹಾಕುವ ಪ್ರಮೇಯ ಇಲ್ಲ. ಬದಲಿಗೆ ಇನ್ನೂ ಹೆಚ್ಚಿನ ಪ್ರಮಾಣದ ಬೋಧಕರು ಅಗತ್ಯವಿದ್ದಾರೆ. ಈ ಅಂಶವನ್ನು ಎಲ್ಲರೂ ಮನಗಾಣಬೇಕು ಎಂದು ಸಚಿವರು  ಹೇಳಿದರು. 

ಗೊಂದಲ ಬೇಡ 
ಕೆಲ ರಾಜಕೀಯ ಪಕ್ಷಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅನಗತ್ಯ ಗೊಂದಲ ಉಂಟು ಮಾಡುವ ಕೆಲಸ ಮಾಡುತ್ತಿವೆ. ವಿರೋಧಿಗಳೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಮಾದರಿಯಲ್ಲಿ ನೀತಿಯನ್ನು ವ್ಯವಸ್ಥಿತವಾಗಿ ಜಾರಿಗೆ ತರುವ ಕೆಲಸ ಆಗುತ್ತಿದೆ. ನರೇಂದ್ರ ಮೋದಿ ಅವರ ದೂರದೃಷ್ಟಿ ಫಲವಾಗಿ ಈ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಭಾರತ ವಿಶ್ವಗುರುವಾಗುವತ್ತ ಭಾರತದ ದಾಪುಗಾಲಿಟ್ಟಿದ್ದು, ಅದಕ್ಕೆ ಪೂರಕವಾಗಿ ಶಿಕ್ಷಣ ನೀತಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. 

ಸಮಾಜದ ದೃಷ್ಟಿಯಿಂದ ಮಾತ್ರವಲ್ಲದೆ, ವೈಯಕ್ತಿಕ ನೆಲೆಗಟ್ಟಿನಲ್ಲೂ ನಾವು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಶಿಕ್ಷಣದಲ್ಲೇ ಉತ್ತರವಿದೆ. ಶಿಕ್ಷಣ ಮತ್ತು ಕೌಶಲ್ಯತೆ ಒಟ್ಟಿಗಿದ್ದರೆ ಅದ್ಭುತಗಳನ್ನೇ ಸೃಷ್ಟಿ ಮಾಡಬಹುದು. ನಮ್ಮ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಸರಿ ಇಲ್ಲ ಅಂತಲ್ಲ. ಆದರೆ, ಅದರಲ್ಲಿನ ನ್ಯೂನತೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ನಡೆದಿರಲಿಲ್ಲ. ಆ ನ್ಯೂನತೆಗಳನ್ನು ಹೋಗಲಾಡಿಸಿ ನೀತಿ ನಿಯಮಗಳಿಗೆ ಒಳಪಟ್ಟು ಶಿಕ್ಷಣವನ್ನು ಕಲಿಸಲಾಗುವುದು. ಈ ಎಲ್ಲ ವಿಷಯಗಳನ್ನು ನಾವು ಜನರಿಗೆ ಮುಟ್ಟಿಸಬೇಕಾಗಿದೆ ಎಂದು ಸಚಿವರು ಹೇಳಿದರು. 

ಬಿಜೆಪಿ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕ ವಿನೋದ್ ಕೃಷ್ಣಮೂರ್ತಿ, ಸಹ ಸಂಚಾಲಕ ಪ್ರಶಾಂತ್ ಜಾದವ್ ಹಾಗೂ ಜಿಲ್ಲಾ, ಮಂಡಲ ವಿಭಾಗದ ಸಂಚಾಲಕರು ಹಾಜರಿದ್ದರು.

Follow Us:
Download App:
  • android
  • ios