ಬಹಿರಂಗವಾಯ್ತು ದ್ವಿತೀಯ ಪಿಯು ಉತ್ತರಪತ್ರಿಕೆ ಬೇಕಾ ಬಿಟ್ಟಿ ಮೌಲ್ಯಮಾಪನ!
ದ್ವಿತೀಯ ಪಿಯುಸಿ ಮರು ಎಣಿಕೆಯ ಬಳಿಕ ಎಡವಟ್ಟು ಬಹಿರಂಗ. ನೂರಾರು ವಿದ್ಯಾರ್ಥಿಗಳಿಗೆ ಭಾರೀ ಹೆಚ್ಚುವರಿ ಅಂಕ. ಇಂಗ್ಲಿಷ್‌ನಲ್ಲಿ 40 ಅಂಕ ಪಡೆದಿದ್ದಾಕೆಗೆ ಮರುಮೌಲ್ಯಮಾಪನ ಬಳಿಕ 33 ಹೆಚ್ಚುವರಿ ಅಂಕ. ಕೆಲವರಿಗೆ ಭಾರೀ ಕಡಿತ. ಗಣಿತದಲ್ಲಿ 71 ಪಡೆದಿದ್ದಾಕೆಗೆ ಮರುಮಾಪನ ಬಳಿಕ ಬರೀ 51
ಬೆಂಗಳೂರು (ಆ.1): ಕಳೆದ ಏಪ್ರಿಲ್, ಮೇನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬೇಕಾಬಿಟ್ಟಿ ಮಾಡಿರುವುದು ಮರುಮೌಲ್ಯಮಾಪನದಲ್ಲಿ ಬಹಿರಂಗವಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮರುಮೌಲ್ಯಮಾಪನ ಬಳಿಕ ನೂರಾರು ವಿದ್ಯಾರ್ಥಿಗಳು ಎರಡಂಕಿ (ಡಬ್ಬಲ್ ಡಿಜಿಟ್) ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ. ತಾವು ಪಡೆದ ಅಂಕಗಳ ಬಗ್ಗೆ ತೃಪ್ತಿ ಹೊಂದದ ಸಾವಿರಾರು ವಿದ್ಯಾರ್ಥಿಗಳು ಅಂಕಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಭಾನುವಾರ ಫಲಿತಾಂಶ ಪ್ರಕಟಿಸಿದೆ. ಇದನ್ನು ಸಮಗ್ರವಾಗಿ ಪರಿಶೀಲಿಸಿದಾಗ ಮೌಲ್ಯಮಾಪಕರು ಮಾಡಿರುವ ಎಡವಟ್ಟು ಬೆಳಕಿಗೆ ಬಂದಿದೆ. ವ್ಯತ್ಯಾಸವಾಗಿರುವ ಅಂಕಗಳನ್ನು ಗಮನಿಸಿದರೆ ಬೇಜವಾಬ್ದಾರಿಯಾಗಿ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿರುವುದು ಕಂಡುಬಂದಿದೆ.ಮರುಮೌಲ್ಯ ಮಾಪನದ ವೇಳೆ 15ರಿಂದ 20 ಅಂಕ ಹೆಚ್ಚಾಗಿ ಪಡೆದವರ ದೊಡ್ಡ ಪಟ್ಟಿಯೇ ಇದ್ದು, ಮೌಲ್ಯಮಾಪನ ಸಮರ್ಪಕವಾಗಿ ನಡೆದಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ. ಕನ್ನಡ, ಇಂಗ್ಲಿಷ್‌ನಂತಹ ವಿಷಯಗಳಲ್ಲಿ ಸ್ವಲ್ಪ ಅಂಕ ವ್ಯತ್ಯಾಸವಾಗಿದ್ದರೆ ಕಣ್ತಪ್ಪಿನಿಂದ ಆಗಿರಬಹುದು ಎನ್ನಬಹುದಿತ್ತು. ಆದರೆ ಗಣಿತ, ರಸಾಯನ ಶಾಸ್ತ್ರ, ಭೌತಶಾಸ್ತ್ರ ವಿಷಯಗಳಲ್ಲೂ 15 ರಿಂದ 20 ಅಂಕಗಳ ವ್ಯತ್ಯಾಸವಿರುವುದು ವಿದ್ಯಾರ್ಥಿಗಳು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ನೂರಾರು ವಿದ್ಯಾರ್ಥಿಗಳು 10 ರಿಂದ 20 ಅಧಿಕ ಅಂಕಗಳನ್ನು ಪಡೆದಿದ್ದಾರೆ. 20 ರಿಂದ 28 ಅಂಕ ಪಡೆದವರ ಪಟ್ಟಿಯೂ ದೊಡ್ಡದಿದೆ. ವಿದ್ಯಾರ್ಥಿನಿಯೊಬ್ಬರು ಮೊದಲು ಇಂಗ್ಲಿಷ್‌ನಲ್ಲಿ 40 ಅಂಕ ಪಡೆದಿದ್ದು ಫಲಿತಾಂಶದಿಂದ ಅಸಮಾಧಾನಗೊಂಡು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ಇದೀಗ 33 ಅಂಕ ಹೆಚ್ಚುವರಿಯಾಗಿ ಲಭಿಸಿದೆ.
ಫಲಿತಾಂಶವೇ ಏರುಪೇರು: ಐವರು ಮೌಲ್ಯಮಾಪಕರ ಕಾರ್ಯವನ್ನು ಉಪ ಮುಖ್ಯ ಮೌಲ್ಯಮಾಪಕರು ಪರಿಶೀಲಿಸುತ್ತಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಹಾಗಾದರೆ ಇವರೂ ಸರಿಯಾಗಿ ಕರ್ತವ್ಯ ನಿರ್ವಹಿಸಲಿಲ್ಲವೇ ಎಂಬ ಅನುಮಾನ ಉಂಟಾಗಿದೆ. ಮರು ಮೌಲ್ಯಮಾಪನದಲ್ಲಿ ಹೆಚ್ಚು ಅಂಕಗಳು ಲಭಿಸಿದ್ದರಿಂದ ಬಹಳಷ್ಟುವಿದ್ಯಾರ್ಥಿಗಳ ಫಲಿತಾಂಶವೇ ಏರುಪೇರಾಗಿದೆ. ಅನುತ್ತೀರ್ಣರಾದವರೂ ಉತ್ತೀರ್ಣರಾಗಿದ್ದಾರೆ.
ಮರು ಮೌಲ್ಯಮಾಪನದ ಅಂಕ ಹೆಚ್ಚಳ ಮಾತ್ರವಾಗಿಲ್ಲ. ಕೆಲವರಿಗೆ ಪಡೆದಿದ್ದ ಅಂಕದಲ್ಲೂ ಖೋತಾ ಆಗಿದೆ. ವಿದ್ಯಾರ್ಥಿನಿಯೊಬ್ಬರು ಗಣಿತದಲ್ಲಿ 71 ಅಂಕ ಪಡೆದಿದ್ದರು. ಮರು ಮೌಲ್ಯಮಾಪನಕ್ಕೆ ಮುಂದಾದ ವರಿಗೆ 20 ಅಂಕ ಕಡಿತಗೊಂಡು 51 ಅಂಕಕ್ಕಷ್ಟೇ ತೃಪ್ತಿ ಪಟ್ಟುಕೊಳ್ಳುವಂತೆ ಆಗಿದೆ. ಅಂಕಗಳಲ್ಲಿ ಇಷ್ಟೊಂದು ಪ್ರಮಾಣದ ವ್ಯತ್ಯಾಸ ಕಂಡುಬಂದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ನಿರ್ಲಕ್ಷ್ಯ ತೋರಿದ ಉಪನ್ಯಾಸಕರಿಗೆ ದಂಡ: ಮೌಲ್ಯಮಾಪನ ಕಾರ್ಯದಲ್ಲಿ ನಿರ್ಲಕ್ಷ್ಯವಹಿಸುವುದನ್ನು ಪುನರಾವರ್ತನೆ ಮಾಡಿದ ಉಪನ್ಯಾಸಕರಿಗೆ ದಂಡ ವಿಧಿಸಲಾಗುವುದು. ಮುಂದಿನ ದಿನಗಳಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ಅಂತಹ ಶಿಕ್ಷಕರನ್ನು ಬಳಸಿಕೊಳ್ಳುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
1ನೇ ಕ್ಲಾಸ್ ಪ್ರವೇಶಕ್ಕೆ 6 ವರ್ಷ: ಭಾರಿ ವಿರೋಧ
ಪಿಯು ಫೇಲಾದವರಿಗೆ ಶುಲ್ಕ ಪಾವತಿ ಅವಧಿ ವಿಸ್ತರಣೆ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಯ ನಂತರ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಗಸ್ಟ್‌ನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಗೆ ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಪಾವತಿಸಲು ಆ.4 ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
Bengaluru: ಕೆಇಎ ಎದುರು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳಿಂದ ಮುಂದುವರಿದ ಪ್ರತಿಭಟನೆ
ಪ್ರಾಂಶುಪಾಲರು ಶುಲ್ಕ ಪಾವತಿ ಮಾಡಿದ ವಿದ್ಯಾರ್ಥಿಗಳ ಮಾಹಿತಿಯನ್ನು ಆ.5 ರೊಳಗೆ ಸ್ಯಾಟ್ಸ್ ತಂತ್ರಾಂಶದಲ್ಲಿ ದಾಖಲಿಸುವ ಜೊತೆಗೆ ಕೆ2 ಚಲನ್ ಮೂಲಕ ಖಜಾನೆಗೆ ಶುಲ್ಕ ಸಂದಾಯ ಮಾಡಿ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ, ಚೆಕ್‌ಲಿಸ್ಟ್, ಚಲನ್‌ಗಳನ್ನು ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.