ವಿಜಯಪುರ: ಮೂಲಸೌಕರ್ಯ ವಂಚಿತ ಹೆಣ್ಣು ಮಕ್ಕಳ ಶಾಲೆ
ತಾಂಬಾದ ಸರ್ಕಾರಿ ಹೆಣ್ಣುಮಕ್ಕಳ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಶೋಚನೀಯವಾಗಿದೆ. ಶೈಕ್ಷಣಿಕ ಪ್ರಗತಿಗೆ ಹಲವು ಯೋಜನೆ ಜಾರಿಗೆ ತಂದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಿಣಾಮ ಸಮರ್ಪಕ ಅನುಷ್ಠಾನಗೊಳ್ಳುತ್ತಿಲ್ಲ ಎಂಬುದಕ್ಕೆ ಈ ಶಾಲೆಯೇ ಸಾಕ್ಷಿ.
ಲಕ್ಷ್ಮಣ ಹಿರೇಕುರಬರ
ತಾಂಬಾ(ಡಿ.24): ಸರ್ಕಾರಿ ಶಾಲೆಗಳು ಎಂದರೆ ಜನರು ದೂರ ಸರಿದು ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಸರ್ಕಾರ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸದೇ ಇರುವ ಕಾರಣ ಶಾಲೆಯ ಶೈಕ್ಷಣಿಕವಾಗಿ ಕುಂಠಿತಗೊಳ್ಳುತ್ತಿದೆ. ಇದಷ್ಟೇ ಅಲ್ಲದೇ ಶಾಲೆಯ ಚಾವಣಿ ಕುಸಿಯುತ್ತಿರುವ ಕಾರಣ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೀವ ಭಯದಲ್ಲೇ ಕಾಲ ಕಳೆಯುವಂತಾಗಿದೆ.
ಹೌದು, ತಾಂಬಾದ ಸರ್ಕಾರಿ ಹೆಣ್ಣುಮಕ್ಕಳ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಶೋಚನೀಯವಾಗಿದೆ. ಶೈಕ್ಷಣಿಕ ಪ್ರಗತಿಗೆ ಹಲವು ಯೋಜನೆ ಜಾರಿಗೆ ತಂದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಿಣಾಮ ಸಮರ್ಪಕ ಅನುಷ್ಠಾನಗೊಳ್ಳುತ್ತಿಲ್ಲ ಎಂಬುದಕ್ಕೆ ಈ ಶಾಲೆಯೇ ಸಾಕ್ಷಿ. 1ರಿಂದ 8ನೇ ತರಗತಿಯವರೆಗೆ 475ಕ್ಕೂ ಅಧಿಕ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು 12 ಕೋಣೆಗಳಿವೆ. ಈ ಪೈಕಿ 3ಕೊಠಡಿಗಳು ನೆಲಸಮ ಮಾಡಬೇಕಾಗಿದೆ. 4 ಕೊಠಡಿಗಳ ಚಾವಣಿ ಸಿಮೆಂಟ್ ಉದರಿ ಕಬ್ಬಿಣದ ಸರಳುಗಳು ಸಂಪೂರ್ಣ ತೆರೆದುಕೊಂಡಿವೆ. ಇನ್ನುಳಿದ 5 ಕೋಣೆಗಳು ದುರಸ್ತಿಯಾಗಿವೆ.
ನಿರಂತರ ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ: ಸಿಎಂ ಬೊಮ್ಮಾಯಿ
ಐದು ಕೋಣೆಗಳಲ್ಲಿಯೇ 1ರಿಂದ 8ನೇ ತರಗತಿಯವರೆಗೆ ಮಕ್ಕಳಿಗೆ ಪಾಠ ಮಾಡುವುದಾದರು ಹೇಗೆ? ಇಲ್ಲಿಯ ಶಿಕ್ಷಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿಯಾದರೆ ಕುಡುಕರ ಹಾವಳಿ ಹೆಚ್ಚಾಗುತ್ತದೆ. ಶಾಲಾ ಆವರಣದಲ್ಲಿ ಬಿಡಿ, ಸಿಗರೇಟ್, ಗುಟಕಾ ಸೇರಿದಂತೆ ಮದÜ್ಯದ ಬಾಟಲ್‌ಗಳು ಶಾಲಾ ಕೋಣೆಗಳಲ್ಲಿ ಬಿದ್ದಿರುತ್ತವೆ ಎನ್ನುತ್ತಾರೆ ಶಾಲಾ ಮಕ್ಕಳು. ಈ ಬಿದ್ದ ಜ್ಞಾನದೇಗುಲದಲ್ಲಿಯೇ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇಷ್ಟೆಲ್ಲ ಆರೋಪ ಕಲುಷಿತ ವಾತಾವರಣ ಹಾಗೂ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿರುವುದು ಮಾತ್ರ ಶೋಚನೀಯ ಸಂಗತಿ.
ಮೂಲ ಸೌಕರ್ಯ ವಂಚಿತ
ತಾಂಬಾದ ಸರ್ಕಾರಿ ಹೆಣ್ಣುಮಕ್ಕಳ ಶಾಸಕರ ಮಾದರಿಯ ಪ್ರಾಥಮಿಕ ಶಾಲೆ ಮೂಲಸೌಕರ್ಯದಿಂದಲೂ ವಂಚಿತವಾಗಿದೆ. ಶಾಲೆಯಲ್ಲಿ ಸರಿಯಾಗಿ ಕುಡಿಯಲು ನೀರಿಲ್ಲ. ಶೌಚಾಲಯವೂ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಶೌಚಕ್ಕೆ ತೀವ್ರ ಪರದಾಡುವಂತಾಗಿದೆ. ಮಳೆ ಬಂದರೆ ಸಾಕು ಶಾಲಾ ಕೊಠಡಿಗಳು ಸೋರಲು ಆರಂಭಿಸುತ್ತವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ, ಶಿಕ್ಷಕರ ಸ್ಥಿತಿ ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಇಷ್ಟಾದರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳದೇ ಇರುವುದು ಖೇದಕರ ಸಂಗತಿ.
ಈಗಾಗಲೇ ಕೆಲ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದರೂ ದುರಸ್ಥಿ ಕಾರ್ಯ ಕೈಗೊಂಡಿಲ್ಲ. ಕೂಡಲೇ ಕ್ರಮಕೈಗೊಳ್ಳದಿದ್ದರೆ ಶಾಲೆಗೆ ಬೀಗಜಡಿದು ಪ್ರತಿಭಟನೆ ಮಾಡುತ್ತೇವೆ ಅಂತ ಎಸ್‌ಡಿಎಂಸಿ ಅಧ್ಯಕ್ಷ ವಿಠಲ ಮೂಲಿಮನಿ ಹೇಳಿದ್ದಾರೆ.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸತ್ಪ್ರಜೆಗಳಾಗಿಸಿ: ಸಚಿವ ಆರಗ ಜ್ಞಾನೇಂದ್ರ
ಮಗುವಿನ ಸರ್ವಾಂಗೀಣ ಏಳಿಗೆಗೆ ಪ್ರಾಥಮಿಕ ಶಿಕ್ಷಣವೇ ಭದ್ರ ಬುನಾದಿ. ಆದರೆ, ಈ ಶಾಲೆಯ ಸ್ಥಿತಿ-ಗತಿ ನೋಡಿದರೆ ವಿದ್ಯಾರ್ಥಿನಿಯರ ಪಾಲಕರಲ್ಲಿ ಭಯ ಹುಟ್ಟಿಸುತ್ತಿದೆ. ಸಂಬಂಧಿಸಿದವರು ತಕ್ಷಣವೇ ಇತ್ತ ಗಮವಹರಿಸಿ ಶಾಲೆಗೆ ಕಾಯಕಲ್ಪ ಒದಗಿಸಬೇಕು ಅಂತ ಪಾಲಕರು ಅಮೋಘಿ ಕನಾಳ ಹೇಳಿದ್ದಾರೆ.
ಮಳೆ ಬಂದಾಗ ಶಾಲೆಯ ಕೊಠಡಿಗಳ ಸ್ಥಿತಿ ತುಂಬಾ ಗಂಭೀರವಾಗಿರುತ್ತದೆ. ಯಾವ ವೇಳೆ ಅನಾಹುತವಾಗುತ್ತದೆ ಗೊತ್ತಿಲ್ಲ. ಆದಷ್ಟು ಬೇಗ ದುರಸ್ತಿ ಮಾಡಿ ಕೊಟ್ಟರೆ ಅನುಕೂಲವಾಗುತ್ತದೆ ಅಂತ ಹಿರಿಯ ಶಿಕ್ಷಕ ಬಿ.ಎಂ.ಬರಮಣ ತಿಳಿಸಿದ್ದಾರೆ.