Asianet Suvarna News Asianet Suvarna News

ಹೊಸ ಶಿಕ್ಷಣ ನೀತಿ ಅನ್ವಯ  ಬೋಧನೆ; ಡಿಸಿಎಂ ಗಂಭೀರ ಸಮಾಲೋಚನೆ

* ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸ್‌ ಬೋಧನೆ
* ತಜ್ಞರು ಮತ್ತು ಉನ್ನತಾಧಿಕಾರಿಗಳ ಜತೆ ಡಿಸಿಎಂ ಚರ್ಚೆ; ಜುಲೈ ಒಳಗೆ ವರದಿ ನೀಡಲು ಸೂಚನೆ
* ಹೊಸ ಶಿಕ್ಷಣ ನೀತಿ ಅನ್ವಯ ಬೋಧನೆ
* ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಡಿಸಿಎಂ

India National Education Policy DCM Dr.CN Ashwathnarayan meeting with Officers mah
Author
Bengaluru, First Published Jun 10, 2021, 10:09 PM IST

ಬೆಂಗಳೂರು (ಜೂ.  10)  ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬೋಧನಾ ಕ್ರಮದಂತೆ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಬೋಧಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ತಜ್ಞರ ಜತೆ ಗುರುವಾರ ಸಮಾಲೋಚನೆ ನಡೆಸಿದರು. 

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪ್ರಭಾಕರ್‌, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರೊಂದಿಗೆ ಡಿಸಿಎಂ ಮಹತ್ವದ ಚರ್ಚೆ ನಡೆಸಿದರು. 

100 ಕಾಲೇಜುಗಳಲ್ಲಿ ಅವಕಾಶ : ರಾಜ್ಯದಲ್ಲಿ ಒಟ್ಟು 220 ಎಂಜಿನೀಯರಿಂಗ್ ಕಾಲೇಜುಗಳಿದ್ದು, ಈ ಪೈಕಿ 100 ಕಾಲೇಜುಗಳಲ್ಲಿ ಅತ್ಯುತ್ತಮ ದರ್ಜೆಯ ಮೂಲಸೌಕರ್ಯಗಳಿವೆ. 4 ವರ್ಷಗಳ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಈ ಕಾಲೇಜುಗಳಲ್ಲಿ ಬೋಧಿಸುವ ಸಾಧ್ಯತೆ ಬಗ್ಗೆ ಜುಲೈ ಅಂತ್ಯದೊಳಗೆ ಒಂದು ನಿರ್ದಿಷ್ಟ ಕಾರ್ಯ ಚೌಕಟ್ಟು (ಕಾರ್ಯಸೂಚಿ) ರೂಪಿಸುವಂತೆ ಪ್ರೊ.ತಿಮ್ಮೇಗೌಡ ಅವರಿಗೆ ಡಿಸಿಎಂ ಸೂಚನೆ ನೀಡಿದರು. 

ವಿದ್ಯಾರ್ಥಿಗಳ ಗಮನಕ್ಕೆ; ಪಿಯುಗೆ ಪರೀಕ್ಷೆ

ಸಾಧ್ಯವಾದರೆ, ಒಂದು ವಾರದಲ್ಲೇ ಕಾರ್ಯ ಚೌಕಟ್ಟಿನ ತಾತ್ಕಾಲಿಕ ವರದಿ ನೀಡಿ ಎಂದು ತಿಮ್ಮೇಗೌಡರಿಗೆ ಹೇಳಿದ ಡಿಸಿಎಂ, ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ. ಹೀಗಾಗಿ ಈ ವರ್ಷದಿಂದಲೇ ಈ ಕೋರ್ಸುಗಳನ್ನು ಬೋಧಿಸಲು ಸಾಧ್ಯವೇ? ಅದಕ್ಕೇನಾದರೂ ಕಾನೂನು ತೊಡಕುಗಳು ಇವೆಯೇ? ಎಂಬ ಅಂಶಗಳ ಬಗ್ಗೆ ಪರೀಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು. 

ಒಂದು ವೇಳೆ ಎಂಜಿನೀಯರಿಂಗ್‌ ಕಾಲೇಜುಗಳಲ್ಲಿ ಮೂಲ ವಿಜ್ಞಾನ ಬೋಧಿಸಲು ಕಾನೂನು ತೊಡಕಿದ್ದರೆ ಸುಗ್ರೀವಾಜ್ಞೆ ಜಾರಿಗೆ ತರಬೇಕಾಗುತ್ತದೆ. ಗುಣಮಟ್ಟದ ವಿಜ್ಞಾನ ಬೋಧನೆಗೆ ಈ ಉಪ ಕ್ರಮ ಅತ್ಯಗತ್ಯ. ಗಣಿತ, ಅನ್ವಯಿಕ ವಿಜ್ಞಾನ ಸೇರಿ ಯಾವ ಕೋರ್ಸುಗಳನ್ನು ಅಳವಡಿಸಬೇಕು ಎಂಬುದರ ಬಗ್ಗೆಯೂ ಡಿಸಿಎಂ ಮಾತುಕತೆ ನಡೆಸಿದರು. 

ಅಲ್ಲದೆ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನವನ್ನು ಯಾವ ರೀತಿ ಬೋಧಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಿರಿ. ಅದೇ ರೀತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಕಲಿಕೆ ಆಗಬೇಕು ಹಾಗೂ ಹಾಲಿ ಇರುವ ಮೂಲ ಸೌಕರ್ಯದಿಂದಲೇ ಈ ಸುಧಾರಣೆಯನ್ನು ಜಾರಿಗೆ ತರಲು ಸಾಧ್ಯವೇ ಎಂಬುದರ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡುವಂತೆ ಡಾ.ಅಶ್ವತ್ಥನಾರಾಯಣ ಸೂಚಿಸಿದರು.  ಡಿಸಿಎಂ ಅವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಪ್ರೊ.ಕರಿಸಿದ್ದಪ್ಪ ಹಾಗೂ ಗೋಪಾಲ ಜೋಷಿ ಆನ್‌ಲೈನ್‌ ಮೂಲಕ ಭಾಗಿಯಾಗಿದ್ದರು.

 

Follow Us:
Download App:
  • android
  • ios