ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಜೂ.10): ರಾಜ್ಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ವಾರ್ಷಿಕ ಪರೀಕ್ಷೆ ರದ್ದುಪಡಿಸಿ ಪಾಸು ಮಾಡಿದೆ. ಆದರೆ, ಮುಂದಿನ ತರಗತಿ ಪ್ರವೇಶಕ್ಕಾಗಿ ಅಸೈನ್‌ಮೆಂಟ್‌ ಬರೆಯಬೇಕಿದ್ದು, ಇದಕ್ಕಾಗಿ ಉಪನ್ಯಾಸಕರು ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆ ಹುಡುಕಿ ಕರೆ ಮಾಡುವಲ್ಲಿ ಸುಸ್ತಾಗುತ್ತಿದ್ದಾರೆ!

ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಅಂತಿಮ ಪಿಯುಗೆ ದಾಖಲಾತಿ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯ ಪಡೆಯಲು ಸ್ಯಾಟ್ಸ್‌ ತಂತ್ರಾಂಶದಲ್ಲಿ ಅಂಕಗಳ ರೂಪದಲ್ಲಿ ಫಲಿತಾಂಶ ದಾಖಲೀಕರಿಸಬೇಕಿದೆ. ಹೀಗಾಗಿ ಇಲಾಖೆ ಅಸೈನ್‌ಮೆಂಟ್‌ ರೂಪದ ಎರಡು ಪರೀಕ್ಷೆ ಬರೆಸುವ ಯೋಜನೆ ರೂಪಿಸಿ ಜೂ. 8ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ವಿದ್ಯಾರ್ಥಿಗಳ ಹುಡುಕಾಟ:

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಅಸೈನ್‌ಮೆಂಟ್‌ ರೂಪದ ಎರಡು ಪರೀಕ್ಷೆಗಳನ್ನು ನಡೆಸಬೇಕು ಎಂದು ರಾಜ್ಯದ ಎಲ್ಲಾ ಪಿಯು ಕಾಲೇಜ್‌ಗಳ ಉಪನ್ಯಾಸಕರಿಗೆ ಕ್ರಮವಹಿಸಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ವಿಷಯಗಳ ಉಪನ್ಯಾಸಕರು ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆ, ವಿಳಾಸ ಹುಡುಕಿ ಅವರಿಗೆ ತಿಳಿಸಲು ಎಡತಾಕುತ್ತಿದ್ದಾರೆ.

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್

ಪರೀಕ್ಷೆ ಹೇಗೆ?:

ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳು ಕಾಲೇಜ್‌ಗೆ ಬಾರದಂತೆ ನಿಗಾವಹಿಸಿ ಜಾಲತಾಣದ ಮೂಲಕವೇ ಪರೀಕ್ಷೆ ಬರೆಸಬೇಕು. ವಾಟ್ಸ್‌ಆ್ಯಪ್‌ ಇಲ್ಲವೇ ಇ-ಮೇಲ್‌ ಮೂಲಕ ಎರಡೂ ಪ್ರಶ್ನೆಪತ್ರಿಕೆ ಕಳುಹಿಸಬೇಕು. ಬಳಿಕ ಹಾಳೆಯಲ್ಲಿ ಬರೆದ ಉತ್ತರಗಳನ್ನು ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್‌ ಇಲ್ಲವೇ ಇ-ಮೇಲ್‌ ಅಥವಾ ಕಾಲೇಜ್‌ಗೆ ಅಂಚೆ ಮೂಲಕ ಕಳುಹಿಸಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಯಾವಾಗ ಪರೀಕ್ಷೆ:

ವಿದ್ಯಾರ್ಥಿಗಳು ಮೊದಲನೆ ಅಸೈನ್‌ಮೆಂಟ್‌ಅನ್ನು ಜೂ. 10ರಿಂದ 20ರೊಳಗೆ ಸಂಬಂಧಿಸಿದ ವಿಷಯ ಉಪನ್ಯಾಸಕರಿಗೆ ಕಳುಹಿಸಬೇಕು. ಉಪನ್ಯಾಸಕರು ಜೂ. 20ರಿಂದ 25ರೊಳಗೆ ಮೌಲ್ಯಮಾಪನ ಮಾಡಬೇಕು. ಎರಡನೇ ಅಸೈನ್‌ಮೆಂಟ್‌ ಜೂ. 26ರಿಂದ ಜುಲೈ 5ರೊಳಗೆ ಬರೆದು ಕಳುಹಿಸಬೇಕು. ಜು. 6ರಿಂದ 10ರೊಳಗೆ ಮೌಲ್ಯಮಾಪನ ಮಾಡಬೇಕು. ಎರಡೂ ಅಸೈನ್‌ಮೆಂಟ್‌ಗಳನ್ನು ಪರಿವರ್ತಿಸಿ ಜು. 11ರಿಂದ 15ರೊಳಗೆ ಅಂಕ ನೀಡಿ ಜು.15ರಿಂದ 20ರೊಳಗೆ ಅಂಕಗಳನ್ನು ಸ್ಯಾಟ್ಸ್‌ ತಂತ್ರಾಂಶಕ್ಕೆ ದಾಖಲೀಕರಿಸಬೇಕು. ಪ್ರಾಯೋಗಿಕ ವಿಷಯಗಳಿಗೆ ಉಪನ್ಯಾಸಕರೇ ಪಾರದರ್ಶಕವಾಗಿ ಅಂಕ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಲು ಅಸೈನ್‌ಮೆಂಟ್‌ ನೀಡಿ ಬರೆಸಲು ಇಲಾಖೆ ಸುತ್ತೋಲೆ ಹೊರಡಿಸಿದೆ. ಅದರನ್ವಯ ಕ್ರಮವಹಿಸಲಾಗುವುದು ಎಂದು ಬಳ್ಳಾರಿ, ವಿಜಯನಗರ ಪಿಯು ಇಲಾಖೆಯ ಪ್ರಭಾರ ಉಪ ನಿರ್ದೇಶಕ ವಿರೇಶಪ್ಪ ತಿಳಿಸಿದ್ದಾರೆ. 

ಮೊದಲು ಪಾಸು ಮಾಡಿ ಈಗ ಅಸೈನ್‌ಮೆಂಟ್‌ ಬರೆಸಲು ಇಲಾಖೆ ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳು ಅಸೈನ್‌ಮೆಂಟ್‌ ಬರೆಯದಿದ್ದರೆ ಬರೀ 35 ಅಂಕಗಳು ದೊರೆಯಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕರೆ ಮಾಡಿ ತಿಳಿಸಲಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಿಳಿಸುವುದೇ ಸಮಸ್ಯೆಯಾಗುತ್ತಿದ್ದು, ಅವರಿಂದ ಉತ್ತರಪತ್ರಿಕೆ ಪಡೆಯುವುದು ಸವಾಲಿನ ಕೆಲಸವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಉಪನ್ಯಾಸಕರು ಹೇಳಿದ್ದಾರೆ