ಬೆಂಗಳೂರಿನ IISc ದೇಶದ ನಂ.2 ಶಿಕ್ಷಣ ಸಂಸ್ಥೆ!
* ಐಐಟಿ ಮದ್ರಾಸ್ ದೇಶದ ನಂ.1 ಅತ್ಯುತ್ತಮ ಶಿಕ್ಷಣ ಸಂಸ್ಥೆ
* ಬೆಂಗಳೂರಿನ ಐಐಎಸ್‌ಸಿ ನಂ.2
* ಕೇಂದ್ರದ ರ‍್ಯಾಂಕಿಂಗ್ ಪಟ್ಟಿ ಪ್ರಕಟ
ನವದೆಹಲಿ(ಸೆ.10): ಕೇಂದ್ರ ಶಿಕ್ಷಣ ಸಚಿವಾಲಯ ಪ್ರತಿ ವರ್ಷ ಬಿಡುಗಡೆ ಮಾಡುವ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಗುರುವಾರ ಬಿಡುಗಡೆಯಾಗಿದ್ದು, ಸತತ ಮೂರನೇ ವರ್ಷ ಮದ್ರಾಸ್ ಐಐಟಿ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ದೇಶದ 2ನೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ
ಕೇಂದ್ರ ಸರ್ಕಾರ 2016ರಿಂದ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರಾರಯಂಕಿಂಗ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್) ರಾರಯಂಕಿಂಗ್ ಪ್ರಕಟಿಸುತ್ತಿದೆ. ಈ ವರ್ಷ 6ನೇ ಆವೃತ್ತಿಯ ರಾರಯಂಕಿಂಗನ್ನು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದ್ದು, ಐಐಟಿ ಮದ್ರಾಸ್, ಐಐಎಸ್‌ಸಿ ಬೆಂಗಳೂರು, ಐಐಟಿ ಬಾಂಬೆ, ಐಐಟಿ ದೆಹಲಿ ಹಾಗೂ ಐಐಟಿ ಕಾನ್ಪುರ ಸಂಸ್ಥೆಗಳು ಕ್ರಮವಾಗಿ ಮೊದಲ ಐದು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳೆಂಬ ಹೆಗ್ಗಳಿಕೆ ಪಡೆದಿವೆ.
ಬೆಂಗಳೂರಿನ ಐಐಎಸ್‌ಸಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ಬನಾರಸ್ ಹಿಂದು ವಿಶ್ವವಿದ್ಯಾಲಯ (ಬಿಎಚ್‌ಯು) ಕ್ರಮವಾಗಿ ದೇಶದ ನಂ.1 ನಂ.2 ಮತ್ತು ನಂ.3 ಅತ್ಯುತ್ತಮ ವಿಶ್ವವಿದ್ಯಾಲಯಗಳಾಗಿವೆ.
ದೇಶದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ ಮೊದಲ ಎಂಟು ಸ್ಥಾನಗಳನ್ನು ಮದ್ರಾಸ್, ದೆಹಲಿ, ಬಾಂಬೆ, ಕಾನ್ಪುರ, ಖರಗ್‌ಪುರ, ರೂರ್ಕಿ, ಗುವಾಹಟಿ ಹಾಗೂ ಹೈದರಾಬಾದ್ ಐಐಟಿಗಳು ಪಡೆದುಕೊಂಡಿವೆ. ದೇಶದ ನಂ.1 ಮೆಡಿಕಲ್ ಕಾಲೇಜು ಎಂಬ ಖ್ಯಾತಿಯನ್ನು ದೆಹಲಿಯ ಏಮ್ಸ್ ಪಡೆದುಕೊಂಡಿದೆ.
ಮಿರಾಂಡಾ ಹೌಸ್ ಕಾಲೇಜು ದೇಶದ ಅತ್ಯುತ್ತಮ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಗಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಕಾಲೇಜು ಸ್ಥಾನ ಪಡೆದಿಲ್ಲ.
ಬೋಧನೆ, ಕಲಿಕೆ, ಸಂಪನ್ಮೂಲಗಳು, ಸಂಶೋಧನೆ, ವೃತ್ತಿಪರ ಅಭ್ಯಾಸಗಳು, ಫಲಿತಾಂಶ, ವ್ಯಾಪ್ತಿ, ಒಳಗೊಳ್ಳುವಿಕೆ ಮತ್ತು ಗ್ರಹಿಕೆ ಮುಂತಾದ ಅಂಶಗಳನ್ನು ಪರಿಗಣಿಸಿ ಎನ್‌ಐಆರ್‌ಎಫ್ ರಾರಯಂಕಿಂಗ್ ನೀಡಲಾಗುತ್ತದೆ.
ಬೆಂಗಳೂರಿನ ಐಐಎಸ್‌ಸಿ ನಂ.1 ವಿವಿ: ಮಾಹೆ, ಸುರತ್ಕಲ್ ಎನ್ಐಟಿಗೂ ಗರಿ
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ದೇಶದ ಅತ್ಯುತ್ತಮ ಸಂಶೋಧನಾ ಸಂಸ್ಥೆ, ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಹಾಗೂ ದೇಶದ 2ನೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ.
ಉತ್ತಮ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಸುರತ್ಕಲ್ ಎನ್‌ಐಟಿ ಪಡೆದಿದೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆ ಹಾಗೂ ಮೈಸೂರು ವಿಶ್ವವಿದ್ಯಾಲಯಗಳು ಕ್ರಮವಾಗಿ ನಂ.7 ಹಾಗೂ ನಂ.19 ಅತ್ಯುತ್ತಮ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆ ಪಡೆದಿವೆ.
ಇನ್ನು, ದೇಶದ ಅತ್ಯುತ್ತಮ ಬಿ-ಸ್ಕೂಲ್‌ಗಳ ಪಟ್ಟಿಯಲ್ಲಿ ಐಐಎಂ ಅಹಮದಾಬಾದ್, ಐಐಎಂ ಬೆಂಗಳೂರು ಮತ್ತು ಐಐಎಂ ಕಲ್ಕತ್ತಾ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.
ದೇಶದ ಟಾಪ್ 5 ಶಿಕ್ಷಣ ಸಂಸ್ಥೆಗಳು
1. ಐಐಟಿ ಮದ್ರಾಸ್
2. ಐಐಎಸ್‌ಸಿ ಬೆಂಗಳೂರು
3. ಐಐಟಿ ಬಾಂಬೆ
4. ಐಐಟಿ ದೆಹಲಿ
5. ಐಐಟಿ ಕಾನ್ಪುರ