ಮಕ್ಕಳು ಮನೆಯಿಂದ ಹೊರಟರು, ಶಾಲೆ ತಲುಪಿದರೋ ಇಲ್ವೋ..? ಅನ್ನೋ ಟೆನ್ಷನ್ ಪ್ರತಿ ನಿತ್ಯ ಪೋಷಕರಿಗೆ ಇದ್ದೇ ಇರುತ್ತದೆ. ಬೆಳಗ್ಗೆ ಮನೆಯಿಂದ ಹೋದ ಮಕ್ಕಳು ಸಂಜೆ ಮರಳಿ ಮನೆಗೆ ಬರುವವರೆಗೂ ಈ ಕಾತುರ, ಚಿಂತೆ ಕಾಡ್ತಾನೆ ಇರುತ್ತೆ. ಅದರಲ್ಲೂ ಮನೆಯಿಂದ ಸ್ಕೂಲ್ ದೂರ ಇದ್ದರಂತೂ ಮುಗೀತು ಕಥೆ. ಪೋಷಕರ ತವಕ ಹೇಳತಿರದು.

ಸರಿಯಾದ ಸಮಯಕ್ಕೆ ಶಾಲೆಗೆ ಹೋದರೋ, ಇಲ್ವೋ? ಮಾರ್ಗ ಮಧ್ಯೆ ಏನಾದರೂ ಆಯ್ತೇನೋ? ಅಂತ ಯೋಚನೆಗಳು ಮೆಲ್ಲನೆ ಸುಳಿದಾಡುತ್ತವೆ. ಇಂಥ ಮನಸ್ಥಿತಿಯಲ್ಲೇ ಸಂಜೆ ಮಕ್ಕಳು ಬರೋ ಹಾದಿಯನ್ನ ಎದುರು ನೋಡ್ತಿರ್ತಾರೆ. ಕಿಲೋ ಮೀಟರ್‌ಗಟ್ಟಲೇ ನಡೆದುಕೊಂಡು ಹೋಗಿ ಬರೋ ಮಕ್ಕಳ ಪೋಷಕರಿಗಷ್ಟೇ ಈ ಟೆನ್ಷನ್ ಇರಲ್ಲ. ಶಿಕ್ಷಣ ಸಂಸ್ಥೆಯ ವಾಹನದಲ್ಲೋ, ಸೈಕಲ್, ಬೈಕ್‌ನಲ್ಲೋ ಶಾಲೆ-ಕಾಲೇಜಿಗೆ ತಮ್ಮ ಮಕ್ಕಳು ಹೋಗಿ ಬರ್ತಾರೆ ಅಂದ್ಮೇಲೆ ಪೋಷಕರಿಗೆ ಇಂಥ ಚಿಂತೆ ಕಾಡುವುದು ಸಾಮಾನ್ಯ.

ಪೋಷಕರ ಇಂಥ ಕಳವಳವನ್ನ ದೂರ ಮಾಡೋಕೆ ಆಂಧ್ರಪ್ರದೇಶ ಸರ್ಕಾರ  ವಿನೂತನ ಯೋಜನೆಯೊಂದನ್ನ ರೂಪಿಸಿದೆ. ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ಹೊಸ ಮೊಬೈಲ್ ಆ್ಯಪ್ ಅನ್ನ ಪರಿಚಯಿಸಿದೆ.

ಕೇಂಬ್ರಿಡ್ಜ್ ವಿವಿಯಲ್ಲಿ ಒಂದು ವರ್ಷ ಉಚಿತ ಕೋರ್ಸ್!

ಆಂಧ್ರದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಮೇಲೆ ಕಣ್ಣಿಡಲು ಸ್ಪೆಷಲ್ ಮೊಬೈಲ್ ಆಪ್‌ ಯೋಜನೆ ಜಾರಿಗೆ ತರಲಾಗಿದೆ. ಇದು ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಶೀಲಿಸಿ, ಶಿಕ್ಷಕರು ಹಾಗೂ ಪೋಷಕರಿಗೆ ಮಾಹಿತಿ ನೀಡಲಿದೆ. ಈಗಾಗಲೇ ಶೇಕಡಾ 90 ವಿದ್ಯಾರ್ಥಿಗಳ ಪೋಷಕರು ಈ ಆ್ಯಪ್ನಲ್ಲಿ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಂಡಿದ್ದಾರೆ.

ಪ್ರತಿ ದಿನ ಮಕ್ಕಳ ಹಾಜರಾತಿ ಬಗ್ಗೆ ಅವರ ಪೋಷಕರು ಅಥವಾ ಗಾರ್ಡಿಯನ್ಸ್‌ಗೆ ಮೆಸೇಜ್ ರವಾನೆಯಾಗಲಿದೆ. ಇನ್ನು ಆಯಾ ವ್ಯಾಪ್ತಿಗಳಲ್ಲಿ ಶಾಲೆಗಳಿಗೆ ಗೈರಾಗುವ ವಿದ್ಯಾರ್ಥಿಗಳ ಬಗ್ಗೆ  ಗ್ರಾಮ ಅಥವಾ ವಾರ್ಡ್‌ಗಳಲ್ಲಿರೋ ಸ್ವಯಂ ಸೇವಕರಿಗೆ ಈ ಮೆಸೇಜ್‌ಗಳು ರವಾನೆ ಆಗಲಿವೆ.

ವಿದ್ಯಾರ್ಥಿಗೆ ಸ್ಕೂಲ್‌ಗೆ ಲೇಟ್ ಆಗುತ್ತೆ ಅಂತ ಬಸ್ ಟೈಮಿಂಗ್ ಬದಲಿಸಿದ್ರು!

ಒಂದು ವೇಳೆ ವಿದ್ಯಾರ್ಥಿ ಏನಾದ್ರೂ 2-3 ದಿನ ಶಾಲೆಗೆ ಬರದಿದ್ರೆ. ವಾಲೆಂಟಿಯರ್ ನೇರವಾಗಿ ಅವರ ಮನೆಗೆ ತೆರಳಿ ಗೈರಾಗಿರುವ ಕಾರಣವನ್ನ ಸಂಗ್ರಹಿಸುತ್ತಾನೆ. ಇದಿಷ್ಟೇ ಅಲ್ಲದೇ, ಗ್ರಾಮ ಅಥವಾ ವಾರ್ಡ್‌ ಸ್ವಯಂಸೇವರು ಹಾಗೂ ಶಿಕ್ಷಣ ಕಲ್ಯಾಣ ಸಹಾಯಕರನ್ನ ಹೊಂದಿರೋ ಪೇರೆಂಟ್ಸ್ ಕಮಿಟಿ, ಪ್ರತೀ ತಿಂಗಳು ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ಪುನರ್‌ಪರಿಶೀಲನೆ ನಡೆಸುತ್ತಾರೆ.

ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಖಾಲಿ ಹುದ್ದೆಗೆ ನೇಮಕ, ಜ.24 ಕೊನೇ ದಿನ

ಅಂದಹಾಗೇ ಇಂತಹ ಯೋಜನೆ ಖಾಸಗಿ ಶಾಲೆಗಳಲ್ಲಿ ಸರ್ವೇ ಸಾಮಾನ್ಯ. ಪ್ರತೀ ಶಾಲೆಯಲ್ಲೂ ಅದರದ್ದೇ ಆದ ಆಪ್ ಇದ್ದೇ ಇರುತ್ತದೆ. ಮಕ್ಕಳ ದೈನಂದಿನ ಚಟುವಟಿಕೆ, ಯಾವ ತರಗತಿಯಲ್ಲಿ ಯಾವ ಪಾಠ ಮಾಡಲಾಗಿದೆ, ಮಗುವಿನ ಹಾಜರಿ-ಗೈರಿನ ಬಗ್ಗೆ ಮಾಹಿತಿ, ಅಂದಿನ ಹೋಮ್ ವರ್ಕ್ ಏನು, ಶಾಲೆಯಲ್ಲಾಗೋ ಕಾರ್ಯಕ್ರಮಗಳ ವಿವರ, ಮುಂಬರುವ ಎಲ್ಲಾ ಪ್ರೊಗ್ರಾಂಗಳ ಬಗ್ಗೆಯೂ ಮಾಹತಿ, ಪರೀಕ್ಷಾ ದಿನಾಂಕ, ಆಲ್‌ಟಿಕೆಟ್ - ಹೀಗೆ ಎಲ್ಲ ವಿಚಾರಗಳನ್ನೂ ಆಯಾ ಶಾಲೆಗಳ ಆಪ್‌ಗಳಲ್ಲಿ ನಮೂದಿಸಲಾಗಿರುತ್ತದೆ.

ಇದೀಗ ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ಈ ಆ್ಯಪ್ ಸಹಕಾರಿಯಾಗಲಿದೆ. ಸರ್ಕಾರವೇ ಇಂತಹ ವಿಭಿನ್ನ ಯೋಜನೆ ರೂಪಿಸೋ ಮೂಲಕ ಮಕ್ಕಳನ್ನ ಶಾಲೆಯತ್ತ ಸೆಳೆಯಲು ಮುಂದಾಗಿದೆ. ಶೀಘ್ರದಲ್ಲೇ ಅಂದರೆ ಫೆಬ್ರವರಿ ಮೊದಲ ವಾರದಲ್ಲಿ ಆಂಧ್ರಪ್ರದೇಶದಲ್ಲಿ ಶಾಲೆಗಳನ್ನ ಪುನಾರಂಭಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸಭೆ ಕರೆದು ಚರ್ಚಿಸಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ, ಈ ವಿನೂತನ ಮೊಬೈಲ್ ಆ್ಯಪ್‌ ಯೋಜನೆ ಜಾರಲು ಸೂಚಿಸಿದ್ದಾರೆ.

ಶಾಲೆಗಳಿಗೆ ಆರೋಗ್ಯಕರ ಪರಿಸ್ಥಿತಿಗಳನ್ನು ತರಲು ರಾಜ್ಯ ಸರ್ಕಾರವು ಹೆಚ್ಚುವರಿ ಶೌಚಾಲಯ ನಿಧಿಯನ್ನು ಸ್ಥಾಪಿಸಿದ್ದು,  ಅವುಗಳನ್ನು ಸರಿಯಾಗಿ ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ.  ಸರ್ಕಾರಿ ಶಾಲೆಗಳಲ್ಲಿ ಆರೋಗ್ಯಕರ ಮತ್ತು ನೈರ್ಮಲ್ಯವನ್ನ ಕಾಪಾಡಲು 445 ಕೋಟಿಗಳಷ್ಟು ಶೌಚಾಲಯ ನಿರ್ವಹಣೆ ನಿಧಿಯನ್ನು ಸಿಎಂ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.