SSLC ಮಾನಸಿಕ ಹೆಲ್ಪ್‌ಲೈನ್‌ಗೆ ಭಾರಿ ಡಿಮ್ಯಾಂಡ್: ಎರಡೇ ದಿನದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕರೆ
ಎಸ್‌ಎಸ್‌ಎಲ್‌ಸಿ ಫಲಿತಾಂಶದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆರಂಭಿಸಿರುವ ಮಾನಸಿಕ ಆರೋಗ್ಯ ಸಹಾಯವಾಣಿಗೆ 500ಕ್ಕೂ ಅಧಿಕ ವಿದ್ಯಾರ್ಥಿಗಳು ಕರೆ ಮಾಡಿ ನೆರವು ಪಡೆದುಕೊಂಡಿದ್ದಾರೆ.
ಬೆಂಗಳೂರು (ಮೇ.22): ಎಸ್‌ಎಸ್‌ಎಲ್‌ಸಿ ಫಲಿತಾಂಶದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆರಂಭಿಸಿರುವ ಮಾನಸಿಕ ಆರೋಗ್ಯ ಸಹಾಯವಾಣಿಗೆ 500ಕ್ಕೂ ಅಧಿಕ ವಿದ್ಯಾರ್ಥಿಗಳು ಕರೆ ಮಾಡಿ ನೆರವು ಪಡೆದುಕೊಂಡಿದ್ದಾರೆ. ನಿರಂತರವಾಗಿ ಕರೆಗಳು ಆಗಮಿಸುತ್ತಿರುವ ಕಾರಣ ಮುಂದಿನ ಎರಡು ವಾರಗಳ ಮಟ್ಟಿಗೆ ಸಹಾಯವಾಣಿಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಎರಡು ವರ್ಷಗಳ ಕೊರೋನಾ ಬಳಿಕ ಪೂರ್ಣ ಪ್ರಮಾಣದ ಪರೀಕ್ಷೆಗಳು ಈ ವರ್ಷ ನಡೆದಿದ್ದವು. ಆನ್‌ಲೈನ್ ತರಗತಿ, ಮಧ್ಯೆ ಒಂದಿಷ್ಟುದಿನಗಳು ಶಾಲೆಗಳು ಬಂದ್ ಆಗಿ ಪಠ್ಯ ಬೋಧನೆಯಲ್ಲಿ ವ್ಯತ್ಯಾಸವಾಗಿತ್ತು.
ಆದರೂ, ಈ ಬಾರಿ ಯಾವುದೇ ವಿನಾಯ್ತಿಗಳಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಹೀಗಾಗಿ, ಈ ಬಾರಿಯ ಫಲಿತಾಂಶವು ಕೂತೂಹಲ ಮೂಡಿಸಿತ್ತು. ಫಲಿತಾಂಶ ವ್ಯತ್ಯಯವಾಗಿ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಸಮಸ್ಯೆ ಉಂಟುಮಾಡುವ ಸಾಧ್ಯತೆಗಳಿದ್ದವು. ಇದೆಲ್ಲವುಗಳನ್ನು ಅರಿತ ಆರೋಗ್ಯ ಇಲಾಖೆಯು ನಿಮ್ಹಾನ್ಸ್ ಸಹಯೋಗದೊಂದಿಗೆ ‘ಮಾನಸಿಕ ಆರೋಗ್ಯ ಸಹಾಯವಾಣಿ’ ಆರಂಭಿಸಿತ್ತು. ಇನ್ನು ಎಸ್ಸೆಸ್ಸೆಲ್ಸಿ ಫಲಿತಾಂಶದ ಒತ್ತಡ ನಿರ್ವಹಿಸುವ ನಿಟ್ಟಿನಲ್ಲಿ ಆರಂಭಿಸಿದ ರಾಜ್ಯದ ಮೊದಲ ಆರೋಗ್ಯ ಸಹಾಯವಾಣಿ ಇದಾಗಿತ್ತು. ಫಲಿತಾಂಶ ಬಂದ ಮೇ 19ರಂದು 450ಕ್ಕೂ ಅಧಿಕ ಮಂದಿ ಕರೆ ಮಾಡಿದ್ದರು. ಮೇ 20ರಂದು 60 ಮೇ 21ರಂದು 40 ಮಕ್ಕಳು ಕರೆ ಮಾಡಿದ್ದರು. ಒಟ್ಟಾರೆ 550 ಅಧಿಕ ಕರೆಗಳು ಸಹಾಯವಾಣಿ ಬಂದಿವೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಗ್ಗೆ ಒತ್ತಡವೇ: 08046110007 ಸಂಖ್ಯೆಗೆ ಕರೆ ಮಾಡಿ
ಹಲವು ವಿದ್ಯಾರ್ಥಿಗಳು ‘ಪರೀಕ್ಷೆಯಲ್ಲಿ ಅನುತ್ತೀರ್ಣನಾದೆ, ಫಲಿತಾಂಶ ಕುರಿತು ಪೋಷಕರು ಸಿಟ್ಟು ಮಾಡಿಕೊಂಡಿದ್ದಾರೆ, ಅಪ್ಪ/ಅಮ್ಮನೊಟ್ಟಿಗೆ ಜಗಳವಾಡಿದೆ, ಫಲಿತಾಂಶ ನಿರಾಸೆ ಮೂಡಿಸಿದೆ, ಇನ್ನಷ್ಟುಹೆಚ್ಚಿನ ಅಂಕ ಬರಬೇಕಿತ್ತು’ ಎಂದು ಸಹಾಯವಾಣಿ ಆಪ್ತ ಸಮಾಲೋಚಕರ ಬಳಿ ನೋವುಗಳನ್ನು ಹೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಆಪ್ತ ಸಮಾಲೋಚಕರು ಕನಿಷ್ಠ 5ರಿಂದ ಗರಿಷ್ಠ 50 ನಿಮಿಷದವರೆಗೂ ಮಾತನಾಡಿ ಮಾನಸಿಕವಾಗಿ ಅವರನ್ನು ಸಬಲಗೊಳಿಸಿದ್ದಾರೆ. ಕೆಲ ಪ್ರಕರಣಗಳಲ್ಲಿ ಪೋಷಕರೊಟ್ಟಿಗೆ ಮಾತನಾಡಿ ಪರಿಹಾರ ಸೂಚಿಸಿದ್ದಾರೆ. ಮುಂದಿನ ಶೈಕ್ಷಣಿಕ ಹಂತದ ಆಯ್ಕೆ ಗೊಂದಲ ಕುರಿತು, ಮರು ಪರೀಕ್ಷೆ, ಮರು ಮೌಲ್ಯಮಾಪನ ಬಗ್ಗೆ ಮಾಹಿತಿ ಕೇಳಿ ಕೆಲವರು ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.
ಭಗತ್ ಸಿಂಗ್ ಅವರ ಪಠ್ಯ ಬಿಟ್ಟಿಲ್ಲ: ವಿವಾದಕ್ಕೆ ಸ್ಪಷ್ಟನೆ ನೀಡಿದ ಸಚಿವ ನಾಗೇಶ್
ಇನ್ನೂ 2 ವಾರ ಇರಲಿದೆ ಸಹಾಯವಾಣಿ: ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫಲಿತಾಂಶದ ನಂತರ ದಿನಗಳಲ್ಲಿಯೂ ಸಹಾಯವಾಣಿಗೆ ಹಲವು ಕರೆಗಳು ಆಗಮಿಸುತ್ತಿವೆ. ಹೀಗಾಗಿ, ಮುಂದಿನ ಎರಡು ವಾರದವರೆಗೂ ಸೇವೆಯನ್ನು ಮುಂದುವರೆಸಲಾಗುವುದು. ಫಲಿತಾಂಶದಿಂದ ಒತ್ತಡಕ್ಕೆ ಒಳಗಾಗುವ ವಿದ್ಯಾರ್ಥಿಗಳು ನೇರವಾಗಿ ಸಹಾಯವಾಣಿಗೆ ಕರೆ ಮಾಡಿ ತಜ್ಞರು, ಆಪ್ತ ಸಮಾಲೋಚಕರಿಂದ ನೆರವು ಪಡೆದುಕೊಳ್ಳಬಹುದಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ. ಸಹಾಯವಾಣಿ ಸಂಖ್ಯೆ: 08046110007