CET: ನಾಳೆಯಿಂದ 3 ದಿನ ಸಿಇಟಿ, ಹಿಜಾಬ್ ನಿಷೇಧ
* 2.16 ಲಕ್ಷ ವಿದ್ಯಾರ್ಥಿಗಳ ನೋಂದಣಿ
* 31 ಜಿಲ್ಲೆಗಳ 486 ಕೇಂದ್ರಗಳಲ್ಲಿ ಪರೀಕ್ಷೆ
* ಹಿಜಾಬ್ ಸೇರಿ ತೋಳು, ಕಿವಿ-ತಲೆ ಮುಚ್ಚುವ ಉಡುಪು ಧರಿಸಂಗಿಲ್ಲ
ಬೆಂಗಳೂರು(ಜೂ.15): ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಜೂ.16ರಿಂದ 18ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ 2022ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಒಟ್ಟಾರೆ 2,16,525 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸೇರಿ ಒಟ್ಟು 486 ಕೇಂದ್ರಗಳಲ್ಲಿ ಈ ಬಾರಿ ಸಿಇಟಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿರುವವರ ಪೈಕಿ ಈ ಬಾರಿ 1,04,550 ಗಂಡುಮಕ್ಕಳು ಹಾಗೂ 1,11,975 ಹೆಣ್ಣು ಮಕ್ಕಳಿದ್ದಾರೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ. 16 ರಂದು ಜೀವಶಾಸ್ತ್ರ, ಗಣಿತ, 17ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ, 18ರಂದು ಹೊರನಾಡು, ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ.
ಕರ್ನಾಟಕದಲ್ಲಿ ಇಂದಿನಿಂದ ಪಿಯು ಕಾಲೇಜು ಶುರು: ಹಿಜಾಬ್ ನಿಷೇಧ
ವಸ್ತ್ರ ಸಂಹಿತೆ:
ಈ ಬಾರಿಯ ಸಿಇಟಿ ಪರೀಕ್ಷೆಯನ್ನು ನೀಟ್ ಮಾದರಿಯಲ್ಲಿ ಭಾರೀ ಕಟ್ಟುನಿಟ್ಟಾಗಿ ಹಾಗೂ ಭದ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ನಿಯಮ ರೂಪಿಸಿದ್ದು, ಹಿಜಾಬ್, ಟೋಪಿ, ಜರ್ಕಿನ್, ಸ್ವೆಟರ್ ಸೆರಿದಂತೆ ತುಂಬು ತೋಳಿನ ವಸ್ತ್ರಗಳು, ಕಿವಿ ಮತ್ತು ತಲೆ ಮುಚ್ಚುವಂತಹ ವಸ್ತ್ರಗಳನ್ನು ಪರೀಕ್ಷಾ ಕೊಠಡಿಗೆ ಧರಿಸಿ ಬರುವಂತಿಲ್ಲ. ಅಲ್ಲದೆ, ಯಾವುದೇ ಆಭರಣಗಳನ್ನು ಕೂಡ ಧರಿಸುವಂತಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿರುತ್ತದೆ. ಮೊಬೈಲ್ ಫೋನ್, ಬ್ಲೂಟೂಥ್, ವೈರ್‌ಲೆಸ್ ಸೆಟ್ಸ್, ಕೈ ಗಡಿಯಾರಗಳನ್ನು ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ ಎಂದು ಕೆಇಎ ಕಾರ್ಯಾನಿರ್ವಾಹಕ ನಿರ್ದೇಶಕರಾದ ರಮ್ಯಾ ತಿಳಿಸಿದ್ದಾರೆ.
ಮೊದಲ ದಿನ ಜೂ.16ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಜೀವಶಾಸ್ತ್ರ, ಅದೇ ದಿನ ಮಧ್ಯಾಹ್ನ 2.30ರಿಂದ 3.50ರ ವರೆಗೆ ಗಣಿತ ವಿಷಯದ ಪರೀಕ್ಷೆ ನಡೆಯಲಿವೆ. ಎರಡನೇ ದಿನ ಜೂ.17ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50ರ ವರೆಗೆ ರಸಾಯನ ಶಾಸ್ತ್ರಗಳು ನಡೆಯಲಿವೆ. ತಲಾ 60 ಅಂಕಗಳಿಗೆ ನಾಲ್ಕೂ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಕೊನೆಯ ದಿನ ಜೂ.18ರಂದು ಬೆಳಗ್ಗೆ 11.30ರಿಂದ 12.30ರ ವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ 50 ಅಂಕಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.