ಆ.2ರಿಂದ ಗುಲ್ಬರ್ಗ ವಿಶ್ವವಿದ್ಯಾಲಯ ಪರೀಕ್ಷೆ

* 1, 3, 5ನೇ ಸೆಮಿಸ್ಟರ್‌ ಪರೀಕ್ಷೆ ಆಧರಿಸಿ ಮುಂದಿನ ತರಗತಿಗಳಿಗೆ ಪ್ರಮೋಟ್‌
* ಎನ್‌.ಸಿ.ಇ.ಟಿ. ಮಾನ್ಯತೆ ಪಡೆದ ಮಹಾವಿದ್ಯಾಲಯಗಳಲ್ಲಿ ಕೇಂದ್ರಗಳಲ್ಲಿ ಪರೀಕ್ಷೆ
* ಉನ್ನತ ಶಿಕ್ಷಣ ಪರಿಷತ್‌ ಹಾಗೂ ಯುಜಿಸಿಯ ಮಾರ್ಗಸೂಚಿಗಳ ಅನ್ವಯ ಪರೀಕ್ಷೆ 
 

Gulbarga University Exam Will be Held on August 2nd grg

ಕಲಬುರಗಿ(ಜು.21):  ಕೋವಿಡ್‌ ಭೀತಿಯಿಂದ ಮುಂದೂಡಲ್ಪಟ್ಟಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಬಿಎ, ಬಿಎಸ್ಸಿ, ಬಿಕಾಂ ಹಾಗೂ ಸ್ನಾತಕೋತ್ತರ ಪದವಿ ಸೇರಿ ಇನ್ನಿತರ ಪದವಿ ಕೋರ್ಸ್‌ಗಳ ಮೊದಲನೇ, ಮೂರನೇ ಹಾಗೂ ಐದನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ಆ.2ರಿಂದ ನಡೆಸಲಾಗುತ್ತದೆ ಎಂದು ಗುಲ್ಬರ್ಗ ವಿವಿಯ ಕುಲಪತಿ ಪ್ರೊ. ದಯಾನಂದ ಅಗಸರ್‌ ಹೇಳಿದ್ದಾರೆ. 

ಇಲ್ಲಿನ ಗುವಿವಿ ಕಾರ್ಯಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಪರಿಷತ್‌ ಹಾಗೂ ಯುಜಿಸಿಯ ಮಾರ್ಗಸೂಚಿಗಳ ಅನ್ವಯ ಪರೀಕ್ಷೆ ನಡೆಸಲಾಗುತ್ತಿದ್ದು, 4 ಜಿಲ್ಲೆಗಳ ಸುಮಾರು 150 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1 ಲಕ್ಷ 20 ಸಾವಿರ ಪದವಿ ಹಾಗೂ 12 ಸಾವಿರ ಸ್ನಾತಕೋತ್ತರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಲಿದ್ದಾರೆ ಎಂದರು.

ಮೊದಲನೇ, ಮೂರನೇ ಹಾಗೂ ಐದನೇ ಸೆಮಿಸ್ಟರ್‌ ಪರೀಕ್ಷೆಗಳ ಫಲಿತಾಂಶ ಆಧರಿಸಿ 2 ಹಾಗೂ 4ನೇ ಸೆಮಿಸ್ಟರ್‌ ಪದವಿ ವಿದ್ಯಾರ್ಥಿಗಳನ್ನು ಹಾಗೂ 2 ನೇ ಸೆಮಿಸ್ಟರ್‌ ವಿದ್ಯಾರ್ಥಿಗಳನ್ನು ಪ್ರಮೋಟ್‌ ಮಾಡಲಾಗುವುದರ ಮೂಲಕ ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು. ಇದಲ್ಲದೆ 6ನೇ ಸೆಮಿಸ್ಟರ್‌ ಪದವಿ ವಿದ್ಯಾರ್ಥಿಗಳಿಗೆ ಹಾಗೂ 4 ನೇ ಸೆಮಿಸ್ಟರ್‌ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಪ್ರಾಥಮಿಕ ಶಾಲೆ ಆರಂಭಕ್ಕೆ ಐಸಿಎಂಆರ್‌ ಗ್ರೀನ್ ಸಿಗ್ನಲ್

ಜುಲೈ 28ರಿಂದ ಬಿಎಡ್‌ ಪರೀಕ್ಷೆ:

ಈಗಾಗಲೇ ತರಗತಿ ಮುಗಿಸಿರುವ ಬಿಎಡ್‌ ವಿದ್ಯಾರ್ಥಿಗಳಿಗೆ ಇದೇ ಜುಲೈ 28 ರಿಂದ ಪರೀಕ್ಷೆಗಳನ್ನು ನಡೆಸಲಾಗುವುದು. ವಿವಿ ವ್ಯಾಪ್ತಿಯ 4 ಜಿಲ್ಲೆಗಳ 9200 ವಿದ್ಯಾರ್ಥಿಗಳು ಬಿ.ಎಡ್‌ ಪರೀಕ್ಷೆ ಎದುರಿಸಲು ಸಿದ್ಧವಾಗಿದ್ದು, 26 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದು ಕುಲಪತಿ ಅಗಸರ್‌ ಅವರು ತಿಳಿಸಿದರು.

ಪರೀಕ್ಷೆಗಳು ಯುಜಿಸಿ ಹಾಗೂ ಸರ್ಕಾರದ ಅನುಸಾರದಂತೆ ನಡೆಯಲಿವೆ. ಈಗಾಗಲೇ ಶೇ. 70 ರಷ್ಟುವಿದ್ಯಾರ್ಥಿಗಳು ಹಾಗೂ ಶೇ. 90 ರ?ರಷ್ಟು ಶಿಕ್ಷಕರು ಕೋವಿಡ್‌ ಲಸಿಕೆ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರೂ ಸಹ ಕನಿಷ್ಠ ಪಕ್ಷ ಒಂದು ಡೋಸ್‌ ಆದರೂ ಪಡೆದಿರಬೇಕು. ಅದಲ್ಲದೆ ವಿವಿಯ ವ್ಯಾಪ್ತಿಗೆ ಬರುವ 4 ಜಿಲ್ಲೆಗಳ 1.25 ಲಕ್ಷ ವಿದ್ಯಾರ್ಥಿಗಳು 2020-21 ನೇ ಸಾಲಿನ ಪರೀಕ್ಷೆಗೆ ಹಾಜರಾಗಲಿದ್ದಾರೆ. ಎನ್‌.ಸಿ.ಇ.ಟಿ. ಮಾನ್ಯತೆ ಪಡೆದ ಮಹಾವಿದ್ಯಾಲಯಗಳಲ್ಲಿ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಯ ಕುಲಸಚಿವ ಶರಣಬಸಪ್ಪ ಕೊಟ್ಟೇಪ್ಪಗೋಳ, ಮೌಲ್ಯಮಾಪನ ಕುಲಸಚಿವ ಸೋನಾರ್‌ ನಂದಪ್ಪ, ವಿತ್ತಾಧಿಕಾರಿ ಬಿ. ವಿಜಯ ಹಾಗೂ ವಿವಿಧ ನಿಕಾಯಗಳ ಡೀನರುಗಳು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios