Freedom Park: ಸೇವಾ ಭದ್ರತೆ, ಕನಿಷ್ಠ ವೇತನಕ್ಕೆ ಅತಿಥಿ ಶಿಕ್ಷಕರ ಅನಿರ್ದಿಷ್ಟಾವಧಿ ಧರಣಿ
ಸೇವಾ ಭದ್ರತೆ, ಕನಿಷ್ಠ ವೇತನ ನಿಗದಿ ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಬೆಂಗಳೂರು (ಜು.20) : ಸೇವಾ ಭದ್ರತೆ, ಕನಿಷ್ಠ ವೇತನ ನಿಗದಿ ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಸರ್ಕಾರ ತಮಗೆ ಬೇಕಾದ ಸಂದರ್ಭದಲ್ಲಿ ನೇಮಕ ಮಾಡಿಕೊಂಡು ಆರ್ಥಿಕ ವರ್ಷ ಮುಗಿಯುತ್ತಿದ್ದಂತೆ ಕರ್ತವ್ಯದಿಂದ ಬಿಡುಗಡೆ ಮಾಡುತ್ತಿದೆ. ಕೇವಲ 8-10 ತಿಂಗಳ ಬಳಿಕ ಪುನಃ ಬೇರೆಡೆ ಕೆಲಸಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸರ್ಕಾರ ಈ ಧೋರಣೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಮಂತ್ರಿಗಳೇ ಇಲ್ನೋಡಿ.! 116 ವರ್ಷದ ಅ.ಹಿ.ಪ್ರಾ. ಶಾಲೆಗೆ ಶಿಕ್ಷಕರೇ ಇಲ್ಲ
ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್.ಹನುಮಂತ ಮಾತನಾಡಿ, ರಾಜ್ಯದಲ್ಲಿ 33,159 ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಸತತ 8-10 ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದವರಿಗೂ ಸೇವಾ ಭದ್ರತೆ ಇಲ್ಲವಾಗಿದೆ. ಕೇವಲ .10-11 ಸಾವಿರ ವೇತನಕ್ಕಾಗಿ ದುಡಿಯುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರು.
ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ಸೇವಾ ಹಿರಿತನವನ್ನು ಪರಿಗಣಿಸಬೇಕು. ಜೊತೆಗೆ ಮೆರಿಟ್ ಪದ್ಧತಿ ತೆಗೆದುಹಾಕಬೇಕು. ಎಲ್ಲಾ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕು. ದೆಹಲಿ, ಉತ್ತರ ಪ್ರದೇಶದಂತೆ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು. ಒಮ್ಮೆ ನೇಮಕ ಮಾಡಿಕೊಂಡರೆ ಬೇಸಿಗೆ ರಜೆ ಸೇರಿ 12 ತಿಂಗಳ ವೇತನ ನೀಡಬೇಕು ಹಾಗೂ ನೇಮಕಾತಿಯಲ್ಲಿ ಶೇ.5 ಕೃಪಾಂಕ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕೆ.ಚಿತ್ರಲೇಖಾ, ತಿಪ್ಪಣ್ಣ ಹತ್ತಿಗುಡೂರು, ಸುಬ್ರಹ್ಮಣ್ಯ ಸೇರಿ ಇತರರಿದ್ದರು.
ರಾಜ್ಯಾದ್ಯಂತ 27 ಸಾವಿರ ಅತಿಥಿ ಶಿಕ್ಷಕರ ನೇಮಕ: ಜಿಲ್ಲಾವಾರು ಹುದ್ದೆಗಳ ವಿವರ ಇಲ್ಲಿದೆ..
ಪರಿಷತ್ ಸದಸ್ಯರ ಭೇಟಿ
ಧರಣಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಭೋಜೆಗೌಡ, ಅರುಣ ಶಹಾಪುರ, ಶಶಿಲ್ ನಮೋಸಿ, ಎ.ವೈ.ನಾರಾಯಣಸ್ವಾಮಿ, ಮರಿಸಿದ್ಧೇಗೌಡ, ಹನುಮಂತ ನಿರಾಣಿ, ಆರ್.ದೇವೇಗೌಡ, ಎಸ್.ವಿ.ಸಂಕನೂರು ಅವರು ಸ್ಥಳಕ್ಕೆ ಆಗಮಿಸಿ ಶಿಕ್ಷಕರ ಪರ ಸದನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.