Asianet Suvarna News Asianet Suvarna News

ಕಲಬುರಗಿ ವಿವಿ ಘಟಿಕೋತ್ಸವದಲ್ಲಿ ಹಳೆ ಭಾಷಣ ಓದಿದ ಗರ್ವನರ್!

ಇಲ್ಲಿನ ಜ್ಞಾನಗಂಗೆ ಕ್ಯಾಂಪಸ್ಸಿನ ಅಂಬೇಡ್ಕರ್‌ ಸಭಾ ಭವನದಲ್ಲಿ ಸೋಮವಾರ ನಡೆದ ಗುಲ್ಬರ್ಗ ವಿವಿ 41ನೇ ಘಟಿಕೋತ್ಸವದಲ್ಲಿ ಭಾರಿ ಎಡವಟ್ಟಿನ ಪ್ರಸಂಗ ನಡೆಯಿತು.

Governor who read the old speech at the convocation of Kalaburagi University at kalaburagi rav
Author
First Published Jun 20, 2023, 12:37 PM IST

ಕಲಬುರಗಿ )ಜೂ.20) :  ಇಲ್ಲಿನ ಜ್ಞಾನಗಂಗೆ ಕ್ಯಾಂಪಸ್ಸಿನ ಅಂಬೇಡ್ಕರ್‌ ಸಭಾ ಭವನದಲ್ಲಿ ಸೋಮವಾರ ನಡೆದ ಗುಲ್ಬರ್ಗ ವಿವಿ 41ನೇ ಘಟಿಕೋತ್ಸವದಲ್ಲಿ ಭಾರಿ ಎಡವಟ್ಟಿನ ಪ್ರಸಂಗ ನಡೆಯಿತು.

ವಿವಿ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌(Governor Thawarchand Gehlot) ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹಿಂದಿನ (40ನೇ) ಘಟಿಕೋತ್ಸವ(ಗgulbarga university convocation) ಸಮಾರಂಭದ ಹಳೆಯ ಭಾಷಣವನ್ನೇ ಪುನರಾವರ್ತಿಸುತ್ತ ಹಲವು ಸಂಗತಿಗಳನ್ನ ಯಥಾವತ್ತಾಗಿ 41ನೇ ಘಟಿಕೋತ್ಸವದಲ್ಲಿಯೂ ಪ್ರಸ್ತಾಪಿಸಿದಾಗ ಸಮಾರಂಭದಲ್ಲಿ ಪಾಲ್ಗೊಂಡಿದ್ದವರಿಗೆ ಆಭಾಸ ಹಾಗೂ ಮುಜುಗರ ಒಟ್ಟೊಟ್ಟಿಗೇ ಕಾಡಿತು.

ಜ್ಞಾನಗಂಗೆಯ 41ನೇ ಘಟಿಕೋತ್ಸವದಲ್ಲಿ ಶಿಲ್ಪಿ ಮಾನಯ್ಯ ಬಡಿಗೇರ್‌, ಶಿಕ್ಷಣ ತಜ್ಞ ತಾತ್ಯಾರಾವ ಕಾಂಬಳೆ ಹಾಗೂ ಶ್ರೀನಾಥ ಸೇರಿದಂತೆ ಕೇವಲ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗಿತ್ತು. ಆದರೆ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತಿಗೆ ಮುಂದಾದ ರಾಜ್ಯಪಾಲರು ಕಳೆದ ವರ್ಷದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪಡೆದ ಗುರಮ್ಮ ಸಿದ್ದಾರೆಡ್ಡಿ, ಸಿದ್ದರಾಮ ಶರಣರು ಬೆಲ್ದಾಳ್‌, ಡಾ. ಬಸವರಾಜ ಪಾಟೀಲ್‌ ಅಷ್ಟೂರ್‌, ಎನ್ನಪೋಯ ಮೊಹ್ಮದ್‌, ವೇಣುಗೋಪಾಲ್‌ ಹೆರೂರ್‌ ಹಾಗೂ ಗೌಮತ್‌ ಕೆ ಇವರ ಹೆಸರುಗಳನ್ನೇ ಪ್ರಧಾನವಾಗಿ ಪ್ರಸ್ತಾಪಿಸುತ್ತ ಎಲ್ಲರಿಗೂ ಶುಭ ಕೋರಿದ ಪ್ರಸಂಗ ನಡೆಯಿತು.

ರಾಜ್ಯದ ಉನ್ನತ ಶಿಕ್ಷಣದಲ್ಲಿ ವೃತ್ತಿಯಾಧಾರಿತ ಪಠ್ಯಕ್ರಮ ಅಳವಡಿಸ್ತೇವೆ: ಸಚಿವ ಸುಧಾಕರ್

ಇತ್ತ ರಾಜ್ಯಪಾಲರು ಒಂದೇ ಸವನೇ ಹಿಂದಿಯಲ್ಲಿ ಮಾತನ್ನಾಡುತ್ತ, ಗೌರವ ಡಾಕ್ಟರೇಟ್‌ ಪಡೆದ ಮೂವರತ್ತ ನೋಡುತ್ತಲೇ ಹಿಂದಿನ 6 ಜನರ ಹೆಸರು ಹೇಳಿದರು. ಇದು ಸೇರಿದ್ದ ಸಭಿಕರು, ವಿದ್ಯಾರ್ಥಿಗಳ ಮನದಲ್ಲಿ ತೀವ್ರ ಗೊಂದಲ ಹುಟ್ಟುಹಾಕಿತ್ತಲ್ಲದೆ ಸೇರಿದ್ದವರು ಇದೇನಿದು? ಗೌಡಾ ಪಡೆದವೇ ಬೇರೆ, ರಾಜ್ಯಪಾಲರು ಹೆಸರು ಹೇಳುತ್ತಿರೋದೇ ಬೇರೆ ಎಂದು ಗೊಂದಲಕ್ಕೆ ಒಳಗಾದರು.

41ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪಡೆದ ಮಾನಯ್ಯ ಬಡಿಗೇರ್‌, ಕಾಂಬಳೆ ಹಾಗೂ ಶ್ರೀನಾಥ ಅವರೂ ಸಹ ರಾಜ್ಯಪಾಲರು ತಮ್ಮಗಳ ಹೆಸರು ಹೇಳೋ ಬದಲು ಇನ್ಯಾರದ್ದೋ ಹೆಸರು ಪ್ರಸ್ತಾಪಿಸದರಲ್ಲ ಎಂದು ಆಗಿರುವ ಪ್ರಮಾದವನ್ನು ಗಮನಿಸಿದರಾದರೂ ಸಮಾರಂಭದ ಶಿಸ್ತು ಕಾಪಾಡಲು ಅಲ್ಲೇ ಏನನ್ನೂ ಹೇಳದೆ ಸುಮ್ಮನಿದ್ದರು.

ಹಳೆ ಭಾಷಣ ರಾಜ್ಯಪಾಲರ ಕೈ ಸೇರಿದ್ದು ಹೇಗೆ? ಎಡವಟ್ಟಿಗೆ ಕಾರಣವೇನು?

ರಾಜ್ಯಪಾಲರು ಕಳೆದ 2 ವರ್ಷದಿಂದ ಗುವಿವಿ ಘಟಿಕೋತ್ಸವಕ್ಕೆ ಹಾಜರಾಗುತ್ತಿದ್ದಾರೆ. 40ನೇ ಘಟಿಕೋತ್ಸವಕ್ಕೆ ಬಂದು ಮಾತನಾಡಿ ಹೋಗಿದ್ದ ಭಾಷಣದ ಪ್ರತಿಯನ್ನೆ ಅವರಿಗೆ 41 ನೇ ಘಟಿಕೋತ್ಸವದಲ್ಲಿಯೂ ಕೊಟ್ಟವರು ಯಾರು? ಅದೇ ಭಾಷಣದ ಪ್ರತಿ ರಾಜ್ಯಪಾಲರ ಕೈ ಸೇರಿದ್ದಾದರೂ ಹೇಗೆ? ಎಂಬುದೇ ನಿಗೂಢವಾಗಿದೆ. ಹಿಂದಿನ ವರ್ಷದ ಘಟಿಕೋತ್ಸ ವಿವರಗಳನ್ನೇ ಕಟ್‌ ಆಂಡ್‌ ಪೇಸ್ಟ್‌ ಮಾಡಿದ್ದರಿಂದಲೇ ಹೀಗಾಯ್ತೆ? ಎಂಬ ಶಂಕೆಗಳು ಮೂಡಿವೆ.

ಈ ವಿಚಾರದಲ್ಲಿ ಕನ್ನಡಪ್ರಭ ವಿವಿ ಆಡಳಿತದ ಹಿರಿಯ ಅಧಿಕಾರಿಗಳನ್ನೆಲ್ಲ ಸಂಪರ್ಕಿಸಿದಾಗ ಯಾರೂ ಸಹ ಅಧಿಕೃತವಾಗಿ ಈ ವಿಚಾರದಲ್ಲಿ ಮಾಹಿತಿ ನೀಡಲು ಸಿದ್ಧರಾಗಲಿಲ್ಲ. ಬದಲಾಗಿ ರಾಜ್ಯಪಾಲರ ಕಚೇರಿ ರಾಜಭವನದಿಂದ ವಿವಿಗೆ ಅವರ ಭಾಷಣದ ಪ್ರತಿಯೇ ಬಂದಿಲ್ಲ. ನಾವು ಈ ವರ್ಷದ ಎಲ್ಲಾ ಮಾಹಿತಿ ರಾಜ್ಯಪಾಲರ ಕಚೇರಿಗೆ ಸಲ್ಲಿಸಿದ್ದಾಗಿದೆ. ಯಾಕೆ ಹೀಗಾಯ್ತೋ? ಎಂದು ತಮಗೂ ತೀವ್ರ ಮುಜುಗರ ಕಾಡಿದೆ ಎಂದು ಕೈತೊಳೆದುಕೊಂಡರು.

ರಾಜ್ಯಪಾಲರಿಗೆ ಕಳೆದ ವರ್ಷದ ಘಟಿಕೋತ್ಸವದ ಮುದ್ರಿತ ಭಾಷಣದ ಪ್ರತಿಯನ್ನು ಒದಗಿಸಿದವರು ಯಾರು? ವಿವಿ ಅಧಿಕಾರಿಗಳೋ, ರಾಜಭವನದಲ್ಲೇ ಈ ಎಡವಟ್ಟು ಆಯಿತೋ? ಎಂಬುದೇ ನಿಗೂಢವಾಗಿದೆ. ಎಡವಟ್ಟಿನಿಂದಾಗಿ ರಾಜ್ಯಪಾಲರು ಅದೇ ಹಳೆಯ ಭಾಷಣ ಓದುವಂತಾಗಿದ್ದು ಸೇರಿದ್ದವರಲ್ಲಿ ನಿರಾಶೆ ಮೂಡಿಸಿತು.

ಮಂಗಳೂರು ವಿವಿ ಘಟಿಕೋತ್ಸವ: 80 ವರ್ಷದ ಪ್ರಭಾಕರ ಕುಪ್ಪಹಳ್ಳಿಗೆ ಪಿಎಚ್‌ಡಿ!

ಜಾಣ​ತ​ನ​ದಿಂದ ಜಾರಿಕೊಂಡ ಸಚಿವ ಸುಧಾಕರ್‌:

ರಾಜ್ಯಪಾಲರು ಹಿಂದಿನ ಘಟಿಕೋತ್ಸವ ಭಾಷಣವನ್ನೆ ಏದಿದ್ದಲ್ಲದೆ ಹಿಂದಿನ ಗೌರವ ಡಾಕ್ಟರೇ​ಟ್‌ ಪಡೆದವರ ಹೆಸರನ್ನೇ ಹೇಳುವ ಮೂಲಕ ಸಮಾರಂಭದಲ್ಲಿ ಉಂಟಾದ ಆಭಾಯದ ಪ್ರಸಂಗದ ಬಗ್ಗೆ ಉನ್ನ ಶಿಕ್ಷಣ ಸಚಿವ ಎಂ.ಸಿ ಸುಧಾಕರ್‌ ಅವರ ಗಮನ ಸೆಳೆದಾಗ ಸಚಿವರು ಏನನ್ನೂ ಹೇಳದೆ ಜಾಣತನದಿಂದ ಜರಿಕೊಂಡರು. ಕೇವಲ ನಗುತ್ತಲೇ ಅಯ್ಯೋ, ಈ ವಿಚಾರದಲ್ಲಿ ಏನೂ ಹೇಳೋದಿಲ್ಲ ನಾನು. ಅದನ್ನೆಲ್ಲ ನೋಡಿಕೊಳ್ಳುವವರು ವಿವಿ ಆಡಳಿತ, ರಾಜಭವನ ಎಂದು ಹೇಳುತ್ತ ಈ ವಿಚಾರದಲ್ಲಿ ಚರ್ಚೆಗೆ ತೆರೆ ಎಳೆದರು.

Latest Videos
Follow Us:
Download App:
  • android
  • ios