ಬೆಂಗಳೂರು (ಜ.16):  ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ಶಾಲಾ ಶುಲ್ಕ ಕಡಿತ ಸಂಬಂಧ ನಡೆಯುತ್ತಿರುವ ಹಗ್ಗ- ಜಗ್ಗಾಟಕ್ಕೆ ಶಿಕ್ಷಣ ಇಲಾಖೆಯ ಮಟ್ಟದಲ್ಲೇ ತೆರೆ ಎಳೆಯುವ ಪ್ರಯತ್ನಕ್ಕೆ ಯಶ ಸಿಕ್ಕಿಲ್ಲ. ಹಾಗಾಗಿ ಉಭಯ ಪಕ್ಷದವರ ಅಭಿಪ್ರಾಯ ಆಧರಿಸಿ ಎಷ್ಟುಪ್ರಮಾಣದ ಶುಲ್ಕ ಕಡಿತ ಮಾಡಬಹುದು ಎಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ.

ಮೂಲಗಳ ಪ್ರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಬಾರಿ ರಾಜ್ಯಾದ್ಯಂತ ಎಲ್ಲಾ ಖಾಸಗಿ ಶಾಲೆಗಳಲ್ಲಿ ಶೇ.30ರಿಂದ 35ರಷ್ಟುಶುಲ್ಕ ಕಡಿತ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದು ಇಲಾಖೆಯ ಉನ್ನತ ಮೂಲಗಳು   ತಿಳಿಸಿವೆ.

ಶಾಲಾ ಶುಲ್ಕ ಕುರಿತು ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ನಡುವೆ ಸಹಮತ ಮೂಡಿಸಲು ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್‌ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಶುಕ್ರವಾರದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಶುಲ್ಕ ಕಡಿತ ಮಾಡಬೇಕೆಂಬ ಪೋಷಕ ಸಂಘಟನೆಗಳ ಆಗ್ರಹಕ್ಕೆ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳಿಂದಲೂ ಸಹಮತ ವ್ಯಕ್ತವಾದರೂ ಪ್ರಮಾಣ ಎಷ್ಟಿರಬೇಕು ಎಂಬ ಬಗ್ಗೆ ಒಮ್ಮತ ಮೂಡಲಿಲ್ಲ.

ಶಾಲೆಗೆ ಹೋಗಲು ಇಲ್ಲಿ ನಿತ್ಯ 12 ಕಿಮೀ ‘ಪಾದಯಾತ್ರೆ’ ಅನಿವಾರ್ಯ ..

ಸುಮಾರು ಎರಡೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ಪೋಷಕರ ಸಂಘಟನೆಗಳು ಕೇಳುತ್ತಿರುವಷ್ಟುಪ್ರಮಾಣದಲ್ಲಿ ಶುಲ್ಕ ಕಡಿತ ಸಾಧ್ಯವಿಲ್ಲ ಎಂದು ಖಾಸಗಿ ಶಾಲೆಗಳು ಸ್ಪಷ್ಟವಾಗಿ ವಿರೋಧಿಸಿದವು.

ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಬೋಧನಾ ಶುಲ್ಕ ಹೊರತುಪಡಿಸಿ ಮತ್ಯಾವ ಶುಲ್ಕವನ್ನು ಸಂಗ್ರಹಿಸಬಾರದು ಎಂದು ಪೋಷಕರ ಸಂಘಟನೆಗಳು ವಾದಿಸಿದವು. ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ (ಈ ಸಂಘಟನೆಯಲ್ಲಿ 9 ಪೋಷಕರ ಸಂಘಗಳಿವೆ)ಯು ಈ ವಾದವನ್ನು ಸಭೆಯ ಮುಂದಿಟ್ಟಿತು. ಸಮಿತಿಯ ವಾದದ ಪ್ರಕಾರ, ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಬೋಧನಾ ಶುಲ್ಕ ಸಂಗ್ರಹಿಸಬೇಕು ಅಂದರೆ ಗರಿಷ್ಠ 250 ಹಾಗೂ ಅದಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಶೇ.100ರಷ್ಟುಬೋಧನಾ ಶುಲ್ಕ ಸಂಗ್ರಹಿಸಬಹುದು. 251ರಿಂದ 500 ಮಕ್ಕಳಿರುವ ಶಾಲೆಗಳು ಶೇ.75ರಷ್ಟು, 501ರಿಂದ 1000 ಮಕ್ಕಳಿರುವ ಶಾಲೆಗಳು ಶೇ.50ರಷ್ಟುಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳು ಶೇ.25ರಷ್ಟುಶುಲ್ಕವನ್ನು ಮಾತ್ರ ಪಡೆಯಬೇಕು.

ಆದರೆ, ಈ ವಾದಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಖಾಸಗಿ ಶಾಲಾ ಸಂಘಟನೆಗಳ (ಕ್ಯಾಮ್ಸ್‌, ರುಪ್ಸಾ ಸೇರಿ ಐದು ಸಂಘಗಳ) ಪ್ರತಿನಿಧಿಗಳು ಒಪ್ಪಲಿಲ್ಲ. ಬದಲಿಗೆ ಯಾವ ರೀತಿ ಶುಲ್ಕ ಕಡಿತ ಮಾಡಬೇಕೆಂದು ತಮ್ಮದೇ ಆದ ಫಾರ್ಮುಲಾಗಳನ್ನು ಸಭೆಯಲ್ಲಿ ಮಂಡಿಸಿದರು.

ಶೇ.30 ಶುಲ್ಕ ಕಡಿತಕ್ಕೆ ಸಿದ್ಧ:  ಪ್ರಮುಖವಾಗಿ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದವರು(ಕ್ಯಾಮ್ಸ್‌) ಶಾಲೆಗಳನ್ನು ಯಾವುದೇ ರೀತಿಯಲ್ಲಿ ವರ್ಗ ಮಾಡದೆ ಎಲ್ಲ ಶಾಲೆಗಳ ಶುಲ್ಕದಲ್ಲೂ ಏಕರೂಪವಾಗಿ ಶೇ.20ರಿಂದ 25ರಷ್ಟುಶುಲ್ಕ ಕಡಿತಗೊಳಿಸಬೇಕೆಂದು ಮನವಿ ಮಾಡಿದರು. ಕರ್ನಾಟಕ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ (ಕುಸ್ಮಾ) ಪ್ರತಿನಿಧಿಗಳು ನಾವು ಶೇ.30ರಷ್ಟುಶುಲ್ಕ ಕಡಿತಕ್ಕೆ ಸಿದ್ಧರಿರುವುದಾಗಿ ಹೇಳಿದರು. ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಸಂಘದವರು (ರುಪ್ಸಾ) ವಾರ್ಷಿಕ ಪ್ರತಿ ಮಗುವಿಗೆ 15 ಸಾವಿರಕ್ಕಿಂತ ಕಡಿಮೆ ಶುಲ್ಕ ಪಡೆಯುವ ಶಾಲೆಗಳಿಗೆ ಶುಲ್ಕ ಕಡಿತ ಮಾಡಬಾರದು. 15ರಿಂದ 25 ಸಾವಿರ ರು. ಶುಲ್ಕ ಪಡೆಯುವ ಶಾಲೆಗಳಲ್ಲಿ ಶೇ.10ರಷ್ಟು, 25ರಿಂದ 30 ಸಾವಿರ ಶುಲ್ಕ ಪಡೆವ ಶಾಲೆಗಳಲ್ಲಿ ಶೇ.15ರಷ್ಟು, 30ರಿಂದ 50 ಸಾವಿರ ಶುಲ್ಕ ಪಡೆಯುವ ಶಾಲೆಗಳಿಗೆ ಶೇ.20ರಷ್ಟುಮತ್ತು 50 ಸಾವಿರಕ್ಕಿಂತ ಹೆಚ್ಚು ಶುಲ್ಕ ಪಡೆವ ಶಾಲೆಗಳಲ್ಲಿ ಶೇ.50ರಷ್ಟುಶುಲ್ಕ ಕಡಿತಕ್ಕೆ ಮನವಿ ಮಾಡಿದರು.

ಆದರೆ, ಇದಕ್ಕೆ ಪೋಷಕ ಸಂಘಟನೆಗಳು ಒಪ್ಪಲಿಲ್ಲ. ಹೀಗಾಗಿ ಅಂತಿಮ ತೀರ್ಮಾನವನ್ನು ಸರ್ಕಾರಕ್ಕೆ ಬಿಡಲಾಯಿತು. ಸಭೆಯಲ್ಲಿ ಪೋಷಕರ ಸಂಘಟನೆಗಳ ಬಿ.ಎಸ್‌. ಯೋಗಾನಂದ, ಕೇಸರಿ ಹರವು, ಗಣೇಶ್‌ ಪೂಜಾರಿ, ವಾಣಿ ಸೇರಿದಂತೆ 40ಕ್ಕೂ ಹೆಚ್ಚು ಪ್ರತಿನಿಧಿಗಳು, ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌, ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆಸೇರಿದಂತೆ 30ಕ್ಕೂ ಹೆಚ್ಚು ಶಾಸಗಿ ಶಾಲಾ ಸಂಘದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.