ರಾಜ್ಯದ ಎಲ್ಲ ಸರ್ಕಾರಿ ವಸತಿ ಶಾಲೆ, ಕಾಲೇಜುಗಳಲ್ಲಿ ಶಾರದಾಪೂಜೆ, ಗಣೇಶೋತ್ಸವ ನಿಷೇಧ
ರಾಜ್ಯದ ಎಲ್ಲ ಸರ್ಕಾರಿ ವಸತಿ ಶಾಲೆಗಳು, ವಸತಿ ಕಾಲೇಜುಗಳಲ್ಲಿ ಇನ್ನುಮುಂದೆ ರಾಷ್ಟ್ರೀಯ ಹಬ್ಬಗಳನ್ನು ಹೊರತುಪಡಿಸಿ ಶಾರದಾ ಪೂಜೆ, ಗಣೇಶೋತ್ಸವ, ಸಂಕ್ರಾಂತಿ, ಬಕ್ರೀದ್, ಕ್ರಿಸ್‌ಮಸ್ ಸೇರಿ ಯಾವುದೇ ಧಾರ್ಮಿಕ ಹಬ್ಬಗಳ ಆಚರಣೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.
ಬೆಂಗಳೂರು (ಫೆ.15): ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಗೊಳಪಡುವ ಎಲ್ಲ ವಸತಿ ಶಾಲೆ ಹಾಗೂ ವಸತಿ ಕಾಲೇಜುಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸುವಂತಿಲ್ಲ. ಆದರೆ, ರಾಷ್ಟ್ರೀಯ ಹಬ್ಬಗಳು, ನಾಡಹಬ್ಬ ಮತ್ತು ರಾಷ್ಟ್ರೀಯ ಮತ್ತು ನಾಡಿನ ಗಣ್ಯ ವ್ಯಕ್ತಿಗಳ ಜಯಂತಿಗಳನ್ನು ಮಾತ್ರ ಆಚರಣೆ ಮಾಡಬೇಕು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಆದೇಶ ಹೊರಡಿಸಲಾಗಿದೆ.
ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರ ಸೂಚನೆ ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಈ ಸುತ್ತೋಲೆಯನ್ನು ಹೊರಡಿಸಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಗೊಳಪಡುವ ಎಲ್ಲಾ ವಸತಿ ಶಾಲಾ- ಕಾಲೇಜುಗಳಲ್ಲಿ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಆಚರಣೆ ಮಾಡಬೇಕು. ಸರ್ಕಾರದ ಸೂಚಿಸಿದ ಹಬ್ಬಗಳನ್ನು ಬಿಟ್ಟು ಇತರೆ ಧಾರ್ಮಿಕ ಹಬ್ಬಗಳಾದ ಯುಗಾದಿ, ರಂಜಾನ್, ಕ್ರಿಸ್‌ಮಸ್, ಈದ್ ಮಿಲಾದ್, ಸಂಕ್ರಾಂತಿ ಇತರೆ ಹಬ್ಬಗಳನ್ನು ಆಚರಣೆ ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿದೆ.
LKG ಅಡ್ಮಿಷನ್ಗೆ 4 ಲಕ್ಷ..! ಮಕ್ಕಳು ಬ್ಯಾಗ್ನಲ್ಲಿ ದುಡ್ಡು ಹೊತ್ಕೊಂಡು ಹೋಗೋ ದಿನ ಬಂದ್ರೂ ಅಚ್ಚರಿಯಿಲ್ಲ..!
ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಹೊರಡಿಸಲಾದ ಕೇವಲ 10 ರಾಷ್ಟ್ರೀಯ ಹಬ್ಬಗಳ ಆಚರಣೆ ಮಾತ್ರ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಆಚರಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಪಟ್ಟಿಯಲ್ಲಿ ಸೂಚಿಸಿದ ಹಬ್ಬಗಳ ಹೊರತಾಗಿ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸಿದರೆ, ಆಯಾ ವಸತಿಉ ಶಾಲೆ, ವಸತಿ ಕಾಲೇಜುಗಳ ಪ್ರಿನ್ಸಿಪಾಲರು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಈ ಮೂಲಕ ರಾಜ್ಯದ ಎಲ್ಲ ವಸತಿ ಶಾಲೆ, ಕಾಲೇಜುಗಳಲ್ಲಿ ಆಚರಣೆ ಮಾಡಲಾಗುತ್ತಿದ್ದ ಶಾರದಾ ಪೂಜೆ ಹಾಗೂ ಗಣೇಶೋತ್ಸವ ಹಬ್ಬವನ್ನೂ ಆಚರಣೆ ಮಾಡುವುದಕ್ಕೆ ಸರ್ಕಾರ ನಿಷೇಧವನ್ನು ಹೇರಿದೆ.
ಯಾವ ಹಬ್ಬಗಳನ್ನು ಆಚರಿಸಬೇಕು:
1) ಗಣರಾಜ್ಯೋತ್ಸವ
2) ಸ್ವಾತಂತ್ರ್ಯ ದಿನಾಚರಣೆ
3) ಗಾಂಧಿ ಜಯಂತಿ
4) ಕನ್ನಡ ರಾಜ್ಯೋತ್ಸವ
5) ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
6) ವಾಲ್ಮೀಕಿ ಜಯಂತಿ
7) ಕನಕದಾಸ ಜಯಂತಿ
8) ಬಸವ ಜಯಂತಿ
9) ಸಂವಿಧಾನ ಜಯಂತಿ
10) ಯೋಗ ದಿನಾಚರಣೆ
ಶ್ರೀರಾಮನ ಅವಹೇಳನ ಮಾಡಿದ ಶಿಕ್ಷಕಿ ಮೇಲೆ ಕೇಸ್ ಇಲ್ಲ; ಜೈ ಶ್ರೀರಾಮ್ ಎಂದವರ ಮೇಲೆ ಎಫ್‌ಐಆರ್: ಶಾಸಕ ಭರತ್ ಶೆಟ್ಟಿ
ಇನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ಶಾಲೆ ಕಾಲೇಜುಗಳಲ್ಲಿ ಈ ಮೇಲಿನ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಮಾತ್ರ ಆಚರಿಸಬೇಕು ಎಂದು ಸೂಚಿಸಲಾಗಿದೆ.