Asianet Suvarna News Asianet Suvarna News

Teachers Transfer: ಡಿ.28 ರಿಂದ ಫೆ.28ರವರೆಗೆ ಶಿಕ್ಷಕರ ವರ್ಗಾವರ್ಗಿ


ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದಕ್ಕೆ ಡಿ.28 ರಂದು ಹೆಚ್ಚುವರಿ ಶಿಕ್ಷಕರ ಕರಡು ಪಟ್ಟಿ ಪ್ರಕಟವಾಗಲಿದೆ. ಆಕ್ಷೇಪಣೆಗಳಿದ್ದಲ್ಲಿ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಡಿ.30ರೊಳಗೆ ಸಲ್ಲಿಸಬೇಕು. 

From Dec 28th to Feb 28th Teachers Transfer Process in Karnataka grg
Author
First Published Dec 27, 2022, 8:00 AM IST

ಬೆಂಗಳೂರು(ಡಿ.27): ಸರ್ಕಾರ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು ಅಂತಿಮ ನಿಯಮಾವಳಿ ಪ್ರಕಟಿಸಿದ ಬೆನ್ನಲ್ಲೇ ಶಿಕ್ಷಣ ಇಲಾಖೆಯು ವರ್ಗಾವಣೆಗೆ ವೇಳಾಪಟ್ಟಿ ಪ್ರಕಟಿಸಿದೆ. ಡಿ.28 ರಿಂದ ಫೆ.28 ರವರೆಗೆ ಒಟ್ಟು ಎರಡು ತಿಂಗಳು ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದನೆಗೊಂಡ ‘ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆ 2022’ ಸಂಬಂಧ ಶಿಕ್ಷಣ ಇಲಾಖೆ ಕರಡು ನಿಯಮಾವಳಿ ಸಿದ್ಧಪಡಿಸಿ ಆಕ್ಷೇಪಣೆ ಆಹ್ವಾನಿಸಿತ್ತು. ಬಳಿಕ ಯಾವುದೇ ಗುರುತರ ಬದಲಾವಣೆ ಮಾಡದೇ ಸೋಮವಾರ ರಾಜ್ಯಪತ್ರದಲ್ಲಿ ಪ್ರಕಟಿಸಿದ ಬೆನ್ನಲ್ಲೇ ವರ್ಗಾವಣೆ ವೇಳಾಪಟ್ಟಿ ಪ್ರಕಟಿಸಿದೆ. ಇದರಿಂದಾಗಿ ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಹೆಚ್ಚುವರಿ ಶಿಕ್ಷಕರ ಕರಡು ನಾಳೆ ಪ್ರಕಟ:

ಇದೇ ವೇಳೆ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದಕ್ಕೆ ಡಿ.28 ರಂದು ಹೆಚ್ಚುವರಿ ಶಿಕ್ಷಕರ ಕರಡು ಪಟ್ಟಿ ಪ್ರಕಟವಾಗಲಿದೆ. ಆಕ್ಷೇಪಣೆಗಳಿದ್ದಲ್ಲಿ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಡಿ.30ರೊಳಗೆ ಸಲ್ಲಿಸಬೇಕು. 31 ರೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಕ್ಷೇಪಣೆ ಅಂಗೀಕಾರ ಅಥವಾ ತಿರಸ್ಕಾರ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹೆಚ್ಚುವರಿ ಶಿಕ್ಷಕರ ಪಟ್ಟಿ ಅಂಗೀಕಾರ ಅಥವಾ ತಿರಸ್ಕಾರವನ್ನು ಜ.2 ರೊಳಗೆ ಪ್ರಕಟಿಸಬೇಕು.

ಸಹಾಯಕ ಪ್ರಾಧ್ಯಾಪಕರ ಮಧ್ಯಂತರ ವರ್ಗಾವಣೆಗೆ ಸಿದ್ದರಾಮಯ್ಯ ಆಕ್ರೋಶ

ಶಿಕ್ಷಕರು ಸಮಸ್ಯೆಗಳಿದ್ದರೆ ಜ.2 ರೊಳಗೆ ಕುಂದುಕೊರತೆ ನಿವಾರಣಾ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಇಂತಹ ಅಹವಾಲುಗಳನ್ನು ಸಂಬಂಧಿಸಿದವರು ಜ.5 ರೊಳಗಾಗಿ ಪರಿಶೀಲಿಸಿ ಪಟ್ಟಿ ಅಂತಿಮಗೊಳಿಸಬೇಕು. ನಂತರ ಶಿಕ್ಷಕರ ಸಮರ್ಪಕ ಮರು ಹಂಚಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಜ.6 ಮತ್ತು 7 ರಂದು ವರ್ಗಾವಣೆ ತಂತ್ರಾಂಶದ ಮೂಲಕ ಆದ್ಯತೆ ಕೋರಿ ಅರ್ಜಿ, ದಾಖಲೆ ಅಪ್‌ಲೋಡ್‌ ಮಾಡಲು ಕಾಲಾವಕಾಶ ನಿಗದಿ ಮಾಡಲಾಗಿದೆ.

ಜ.9 ರವರೆಗೆ ಹೆಚ್ಚುವರಿ ಶಿಕ್ಷಕರು ಸಲ್ಲಿಸಿರುವ ದಾಖಲೆಗಳ ಪರಿಶೀಲನೆ/ಅಂಗೀಕಾರ/ ತಿರಸ್ಕಾರ ಪ್ರಕ್ರಿಯೆ ನಡೆಯಲಿದೆ. ಜ.11 ಕ್ಕೆ ಕರಡು ಜೇಷ್ಠತಾ ಪಟ್ಟಿ ಪ್ರಕಟ, 12 ಕ್ಕೆ ವೃಂದವಾರು ಖಾಲಿ ಹುದ್ದೆಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಬಳಿಕ ಹಲವು ಪ್ರಕ್ರಿಯೆಗಳು ನಡೆದು ಫೆ.28 ಕ್ಕೆ ಅಂತಿಮ ಆದ್ಯತಾ ಪಟ್ಟಿಯಂತೆ ಪರಸ್ಪರ ವರ್ಗಾವಣೆಗಳ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ ನಡೆಯಲಿದೆ ಎಂದು ಇಲಾಖೆ ಪ್ರಕಟಿಸಿದೆ.

Follow Us:
Download App:
  • android
  • ios